ಬೆಂಗಳೂರು, ಮೇ.06 www.bengaluruwire.com : ನಕಲು ದಾಖಲಾತಿಗಳ ಆಧಾರದ ಮೇಲೆ ಅಕ್ರಮವಾಗಿ ನಕ್ಷೆ ಮಂಜೂರಾತಿ ನೀಡಿ ಗಂಭೀರ ಕರ್ತವ್ಯಲೋಪ ಎಸಗಿದ ಲೋಕೋಪಯೋಗಿ ಇಲಾಖೆಯಿಂದ ಎರವಲು ಸೇವೆ ಮೇಲೆ ಬಂದು ಕಾರ್ಯನಿರ್ವಹಿಸುತ್ತಿದ್ದ ಬಿಬಿಎಂಪಿ ಪಶ್ಚಿಮ ವಲಯದ ನಗರ ಯೋಜನಾ ವಿಭಾಗದ ಎಡಿಟಿಪಿ ಸಿ. ನಾರಾಯಣಸ್ವಾಮಿ ಅವರನ್ನು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇವೆಯಿಂದ ಕೂಡಲೇ ಜಾರಿಗೆ ಬರುವಂತೆ ಬಿಡುಗಡೆಗೊಳಿಸಿದ್ದಾರೆ. ಅಲ್ಲದೆ ಅವರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.
ಇವರು ದಾಖಲಾತಿಗಳನ್ನು ಸಮರ್ಪಕವಾಗಿ ವರಿಶೀಲಿಸದೆ, ನಕಲು ದಾಖಲೆಗಳನ್ನು ತಮ್ಮ ಲಾಗಿನ್ ಮುಖಾಂತರವೇ ಅಪ್ಲೋಡ್ ಮಾಡಿ, ನಕಲು ದಾಖಲಾತಿಗಳ ಆಧಾರದ ಮೇಲೆ ಅಕ್ರಮವಾಗಿ ಕಟ್ಟಡ ನಕ್ಷೆ ಮಂಜೂರಾತಿ ನೀಡಿ ಗಂಭೀರ ಕರ್ತವ್ಯಲೋಪ ಎಸಗಿರುವುದು ಕಂಡುಬಂದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತ ಮಂಜುನಾಥ ಸ್ವಾಮಿ ಮುಖ್ಯ ಆಯುಕ್ತರ ಸೂಚನೆಯ ಮೇರೆಗೆ ಈ ಕ್ರಮ ಕೈಗೊಂಡಿದ್ದಾಗಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಏರಿಯಾಗಳಲ್ಲೊಂದಾದ ಸದಾಶಿವನಗರದ ರಾಜ್ ಮಹಲ್ ನಲ್ಲಿನ ವಾರ್ಡ್ ನಂ.35ರ ಪಿ.ಐ.ಡಿ. ಸಂಖ್ಯೆ 90-22-32 & 99-22-33/2 ಎರಡು ಸ್ವತ್ತುಗಳು ಬೇರೆ ಬೇರೆಯಾಗಿದ್ದು ಪ್ರತ್ಯೇಕ ಖಾತಾಗಳಾಗಿತ್ತು. ಈ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡಲೆಂದು ಬಿಮ್ಲಾ ದೇವಿ ಬೊತ್ರಾ ರವರು ಕಟ್ಟಡ ನಕ್ಷೆ ಮಂಜೂರಾತಿ ಕೋರಿ ನಗರ ಯೋಜನೆಯ ಪಶ್ಚಿಮ ವಲಯ ಸಹಾಯಕ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಎಡಿಟಿಪಿ ಸಿ.ನಾರಾಯಣಸ್ವಾಮಿ 2023ರ ಡಿಸೆಂಬರ್ 21ರಂದು ನಕ್ಷೆ ಮಂಜೂರಾತಿ ನೀಡಿದ್ದರು. ಈ ಬಗ್ಗೆ ಸಮೃದ್ಧಿ ಭಾರತ ಫೌಂಡೇಷನ್ ನ ವಿ.ಮಂಜುನಾಥ್ ಎಂಬುವರು ಬಿಬಿಎಂಪಿಗೆ ದೂರು ನೀಡಿ, ಬಿಮ್ಲಾ ದೇವಿ ಬೊತ್ರಾ ರವರು ಮಂಜೂರಾತಿ ನಕ್ಷೆ ಪಡೆದುಕೊಂಡಿರುವ ಎರಡು ಸ್ವತ್ತುಗಳು ಬೇರೆ ಬೇರೆಯಾಗಿದ್ದು, ಪ್ರತ್ಯೇಕ ಖಾತಾವಾಗಿರುತ್ತದೆ. ಸ್ವತ್ತುಗಳ ಖಾತಾ ಒಂದುಗೂಡಿಸದೆ (Amalgamation) ಒಂದುಗೂಡಿಸಿರುವಂತೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು, ಪಶ್ಚಿಮ ವಲಯದಲ್ಲಿ ಅಕ್ರಮವಾಗಿ ನಕ್ಷೆ ಮಂಜೂರಾತಿ ನೀಡಿದ್ದಾರೆಂದು ತಿಳಿಸಿದ್ದರು.
ಈ ಬಗ್ಗೆ ಬಿಬಿಎಂಪಿಯಲ್ಲಿ ವಿಚಾರಣೆ ಕೈಗೊಂಡಾಗ, ಸಹಾಯಕ ಕಂದಾಯ ಅಧಿಕಾರಿ (ಮತ್ತಿಕೆರೆ) ವಿಭಾಗದವರು, ನಕ್ಷೆ ಮಂಜೂರಾತಿಗಾಗಿ ಸಲ್ಲಿಸಿದ್ದ ಖಾತಾ ಒಂದುಗೂಡಿಸುವಿಕೆಯ ಪತ್ರ ಹಾಗೂ ವಿಶೇಷ ಸೂಚನಾ ಪತ್ರವನ್ನು ಕಾರ್ಯಗಳನ್ನು ಮಾಡಿರುವುದಿಲ್ಲ. ಈ ಸ್ವತ್ತಿನ ಖಾತೆದಾರರಾದ ಬಿಮ್ಲಾ ದೇವಿ ಬೋತ್ರಾ ರವರು ಸಲ್ಲಿಸಿರುವ ಖಾತಾ ಸುಳ್ಳು ಹಾಗೂ ನಕಲಿ ವಿಶೇಷ ಸೂಚನಾ ಪತ್ರವನ್ನು ಸೃಷ್ಟಿಸಿ ಸಲ್ಲಿಸಿರುವುದು ಕಂಡುಬಂದಿರುತ್ತದೆ ಎಂದು ವರದಿ ನೀಡಿದ್ದರು. ನಕ್ಷೆ ಮಂಜೂರಾತಿ ತಂತ್ರಾಂಶವನ್ನು ರೂಪಿಸಿದ ಸಾಫ್ ಟೆಕ್ ಇಂಜಿನಿಯರ್ಸ್ ಪ್ರೈಲಿ ರವರು ಸಂಸ್ಥೆಯವರು “ಪ್ಲಾನ್ ಸಾಂಕ್ಷನ್ ಮಾಡಲಾಗಿರುವ ಪಿಆರ್‌ಜಿ/3016/2023-24 ಕಡತಕ್ಕೆ ನಕಲಿ ಖಾತಾ ಪ್ರಮಾಣ ಪತ್ರವನ್ನು 2023ರ ಡಿಸೆಂಬರ್ 8 ರಂದು ಪಶ್ಚಿಮ ವಲಯದ ಎಡಿಟಿಪಿ ತಮ್ಮ ಲಾಗಿನ್ ನಿಂದ ಅಪಲೋಡ್ ಮಾಡಿದ್ದಾರೆ. ಅದಕ್ಕೆ ವಲಯ ಜಂಟಿ ಆಯುಕ್ತರು ಡಿಸೆಂಬರ್ 12ರಂದು ಒಪ್ಪಿಗೆ ಸೂಚಿಸಿದ್ದರು. ಆನಂತರ ಪಶ್ಚಿಮ ವಲಯದ ನಗರ ಯೋಜನೆ ವಿಭಾಗದಿಂದ ಮನವಿ ಬಂದ ಮೇರೆಗೆ ನಕ್ಷೆ ಮಂಜೂರಾತಿ ನೀಡಿದ್ದನ್ನು ರದ್ದುಪಡಿಸಲಾಯಿತು” ಎಂದು ಪಾಲಿಕೆಗೆ ಇ-ಮೇಲ್ ಮುಖಾಂತರ ವರದಿ ನೀಡಿದ್ದರು.
ಈ ಹಿನ್ನಲೆಯಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರ ಸೂಚನೆಯ ಮೇರೆಗೆ, ನಕ್ಷೆ ಮಂಜೂರಾತಿಗಾಗಿ ಸಲ್ಲಿಸಲಾಗಿರುವ ದಾಖಲಾತಿಗಳು ಸಮರ್ಪಕವಾಗಿದೆಯೇ ಅಥವಾ ನಕಲು ದಾಖಲೆಗಳಾಗಿದೆಯೇ ಎಂಬುದನ್ನು ದೃಢಪಡಿಸಿಕೊಂಡು ಆನಂತರ ನಕ್ಷೆ ಮಂಜೂರಾತಿಗಾಗಿ ನಿಯಮಾನುಸಾದ ಕ್ರಮ ಜರುಗಿಸಬೇಕಾಗಿದ್ದರೂ, ಈ ಪ್ರಕರಣದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಎರವಲು ಸೇವೆಯ ಮೇಲೆ ವಾಲಿಕೆಗೆ ನಿಯೋಜನೆಗೊಂಡು ಪಶ್ಚಿಮ ವಲಯದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿ. ನಾರಾಯಣಸ್ವಾಮಿ ಕರ್ತವ್ಯ ಲೋಪ ಎಸಗಿದ್ದಾರೆ. ಈ ಹಿನ್ನಲೆಯಲ್ಲಿ ಇವರ ಸೇವೆ ಪಾಲಿಕೆಗೆ ಅವಶ್ಯಕತೆ ಇಲ್ಲವೆಂದು ಪರಿಗಣಿಸಿ, ಇವರನ್ನು ಮೇ.6ರ ಮಧ್ಯಾಹ್ನದಿಂದಲೇ ಮಾತ್ರ ಇಲಾಖೆಗೆ ಹಿಂದಿರುಗಿಸುವ ಆದೇಶ ಹೊರಡಿಸಲಾಗಿದೆ.