ಬೆಂಗಳೂರು, ಮೇ.4 www.bengaluruwire.com : ನಗರದಲ್ಲಿ ಈ ವರ್ಷ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಹೆಚ್ಚಿನ ಮಳೆ ಆಗುತ್ತದೆ. ಮಳೆಗೆ ನಾವೆಲ್ಲ ಕಾತುರದಿಂದ ಕಾಯುತ್ತೇ ಇದ್ದೇವೆ. ನಿನ್ನೆ ಬಹಳಷ್ಟು ಕಡೆ ಮಳೆ ಬಂದಿದ್ದು ಸಂತಸದ ವಿಚಾರ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಮಳೆಗಾಲಕ್ಕೆ ಮುನ್ನ ಬಿಬಿಎಂಪಿ ಕೈಗೊಂಡಿರುವ ಕೆಲಸ ಕಾರ್ಯಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆಯಾಗುವ ಅವಧಿಯಾಗಿದೆ. ಹೀಗಾಗಿ
ಈ ಬಾರಿ 19 ಏಪ್ರಿಲ್ ಇಂದ ಮೇ 3ರವರೆಗೆ ರಾಜಕಾಲುವೆ ಕ್ಲೀನ್ ಮಾಡುವ ಅಭಿಯಾನ ಕೈಗೊಂಡಿದ್ದೇವೆ. ಈಗ ಆ ಅವಧಿಯನ್ನು ಮೇ 10 ಈವರೆಗೆ ವಿಸ್ತರಣೆ ಮಾಡಿದ್ದೇವೆ. ಮುಖ್ಯ ರಸ್ತೆಯಲ್ಲಿ ಹೂಳು ತೆಗೆದು ಸ್ವಚ್ಛ ಕೆಲಸ ಮಾಡಲಾಗಿದೆ. ಪ್ರತಿ ತಿಂಗಳು ಮೂರನೇ ವಾರ ಸಾಮೂಹಿಕ ಸ್ವಚ್ಛತೆ ಮಾಡಲೇಬೇಕು ಅಂತ ಸೂಚನೆ ಕೊಡಲಾಗಿದೆ. ಮೇ ತಿಂಗಳ ನಂತರ ಕೂಡ ಮುಂಗಾರು ಮಳೆಯ ಅವಧಿಯಲ್ಲಿ ಅಷ್ಟು ಸಮಸ್ಯೆ ಆಗಲ್ಲ ಎಂದು ಮುಖ್ಯ ಆಯುಕ್ತರು ಹೇಳಿದ್ದಾರೆ.
ಕೆಲವು ಸಲ ಬಹಳ ಕಡಿಮೆ, ಕೆಲವು ವೇಳೆ ಹೆಚ್ಚು ಮಳೆ ಬರುತ್ತದೆ. ಹೋದ ವರ್ಷ ಮೇ ತಿಂಗಳ 15 ಹಾಗೂ 16ರ ಹೊತ್ತಿಗೆ ಮಳೆ ಬಂದು ಸಾಕಷ್ಟು ಅವಘಡ ಸಂಭವಿಸಿತ್ತು.
ಪಾಲಿಕೆ ರಸ್ತೆಗಳಲ್ಲಿ ಬೆಸ್ಕಾಂ, ಬಿಡಬ್ಲ್ಯುಎಸ್ ಎಸ್ ಬಿ ರಾಜಕಾಲುವೆಗಳಲ್ಲಿ ಹಲವು ಕೆಲಸ ಮಾಡುತ್ತಿವೆ. ಮಳೆಗಾಲದ ಸಂದರ್ಭದಲ್ಲಿ ಜನರಿಗೆ ಅನಾನುಕೂಲವಾಗುವುದನ್ನು ತಪ್ಪಿಸಲು ಆಯಾ ವಲಯಗಳ ಆಯುಕ್ತರು, ಅಗ್ನಿಶಾಮಕ ಇಲಾಖೆ, ಬಿಡಬ್ಲ್ಯುಎಸ್ ಎಸ್ ಬಿ ಹೀಗೆ ಎಲ್ಲಾ ಇಲಾಖೆಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಮೇ 15ರ ಒಳಗಾಗಿ ಮಳೆ ಸಂಬಂಧಿ ಬಾಕಿಯಿರುವ ಕೆಲಸವನ್ನು ಪೂರ್ಣಗೊಳಿಸುವಂತೆ ಗಡುವು ನೀಡಲಾಗಿದೆ.
ನಿಯಂತ್ರಣ ಕೊಠಡಿಯಲ್ಲಿ (Control Room), ಉಪವಿಭಾಗ ಮಟ್ಟದಲ್ಲಿ 63 ವಾಟ್ಸಪ್ ಗ್ರೂಪ್ ಮಾಡಿದ್ದೇವೆ. ಅವರೆಲ್ಲರೂ ಜನರ ಸಮಸ್ಯೆಗೆ ಪರಿಹಾರ ಒದಗಿಸಲು, 15 ತಾರೀಖಿನ ಬಳಿಕ 3 ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಹೀಗಾಗಿ ಎಲ್ಲಾ ಇಲಾಖೆಗಳ ನಡುವೆ ಸಮನ್ವಯತೆ ಇಂದ ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕರು ಮನೆಯಲ್ಲಿನ ತ್ಯಾಜ್ಯವನ್ನು ಯಾವುದೇ ಕಾರಣಕ್ಕೂ ರಸ್ತೆಬದಿ ಬಿಸಾಕಬಾರದು. ಇದರಿಂದಲೂ ಮಳೆ ಬಂದಾಗ ರಸ್ತೆಯಲ್ಲಿ ನೀರು ಸರಾಗವಾಗಿ ಹರಿಯಲು ಆಗದೆ, ಸಮಸ್ಯೆಯಾಗುತ್ತೆ. ಸಾಮೂಹಿಕ ಸ್ವಚ್ಛತೆ ಕಾರ್ಯ ಕೈಗೊಂಡಾಗ ರಾಜಕಾಲುವೆಯಲ್ಲಿ ಬೈಕ್ ಕೂಡ ಸಿಕ್ಕಿದೆ. ನಗರದಲ್ಲಿನ 859 ಕಿ.ಮೀ ಉದ್ದದ ರಾಜಕಾಲುವೆಯನ್ನು 3 ತಿಂಗಳಿಗೆ ಒಮ್ಮೆ ಸ್ವಚ್ಛತೆ ಮಾಡುತ್ತಿದ್ದೇವೆ. ಮೇ 10 ರ ಒಳಗಡೆ ರಾಜಕಾಲುವೆ ಹೂಳೆತ್ತುವಿಕೆ ಕಾರ್ಯ ಪೂರ್ಣವಾಗಲಿದೆ ಎಂದು ಅವರು ಹೇಳಿದರು.