ಬೆಂಗಳೂರು, ಮೇ.3 www.bengaluruwire.com : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಶ್ರೀಹರಿಕೋಟಾ ವ್ಯಾಪ್ತಿಯಲ್ಲಿ ಮಳೆಯ ಮುನ್ಸೂಚನೆಯನ್ನು ನೀಡಿದ್ದು ಅದರಂತೆ ಮೇ.3 ರಿಂದ 11ರ ತನಕ ರಾಜ್ಯದ ಮಲೆನಾಡು ಮತ್ತು ದಕ್ಷಿಣ ಒಳನಾಡು ಕರ್ನಾಟಕದ (SIK) ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗುಡುಗು ಮತ್ತು ಮಿಂಚಿನ ಚಟುವಟಿಕೆಯೊಂದಿಗೆ ಅತಿ ಹಗುರದಿಂದ ಸಾಧಾರಣ ಮಳೆ ಹಾಗೂ ಚದುರಿದ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.
ಪ್ರಮುಖವಾಗಿ 03ನೇ ಮೇ ನಿಂದ 06ರ ತನಕ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಆದಾಗ್ಯೂ, ಮೇ 7ನೇ ರಿಂದ 11ರ ತಾರೀಖಿನ ತನಕ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳು ಮತ್ತು ಮಲೆನಾಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ವ್ಯಾಪಕವಾದ ಸ್ಥಳಗಳಲ್ಲಿ ಮತ್ತು ಮೇ 09 ರಿಂದ ರಾಜ್ಯದ ಉಳಿದ ಭಾಗಗಳಲ್ಲಿ ಚದುರಿದ ಸ್ಥಳಗಳಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗುವ ಮುನ್ಸೂಚನೆಯಿದೆ ಎಂದು ಹೇಳಿದೆ.
ಮೇ.8 ನಂತರ 11ರ ವರೆಗೆ ದಿನೇ ದಿನೇ ಮಳೆಯ ಪ್ರಮಾಣ ರಾಜ್ಯದೆಲ್ಲಡೆ ಹಂತಹಂತವಾಗಿ ಹೆಚ್ಚಾಗುವ ಗ್ರಾಫಿಕ್ಸ್ ನಕ್ಷೆಯ ಮಾಹಿತಿಯನ್ನು ಕೆ.ಎಸ್.ಎಮ್.ಡಿ.ಎಂಸಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಮೇ.06 ರವರೆಗೆ ಉತ್ತರ ಒಳನಾಡಿನ ರಾಯಚೂರು, ಕಲಬುರ್ಗಿ, ಬಾಗಲಕೋಟೆ, ಯಾದಗಿರಿ, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸುಮಾರು 40 ರಿಂದ 46 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇರುವ ಸಾಧ್ಯತೆಯಿದೆ.