ನವದೆಹಲಿ/ಬೆಂಗಳೂರು, ಏ.27 www.bengaluruwire.com : ರಾಜ್ಯದ ಕಾಂಗ್ರೆಸ್ ಹೋರಾಟಕ್ಕೆ ಅಲ್ಪ ಮಟ್ಟಿಗಿನ ಜಯ ದೊರಕಿದೆ. ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 3,454 ಕೋಟಿ ರೂ.ಗಳ ಬರ ಪರಿಹಾರ ಬಿಡುಗಡೆ ಮಾಡಿದೆ. ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ಇದರ ಹಿನ್ನೆಲೆಯಲ್ಲಿ ಈಗ ಕೇಂದ್ರ ಹಣಕಾಸು ಇಲಾಖೆ ಬರ ಪರಿಹಾರ ಬಿಡುಗಡೆ ಮಾಡಿದೆ.
ಈ ಹಿಂದೆ ಬರ ಕುರಿತು ಪರಿಶೀಲನೆ ನಡೆಸಿದ ರಾಜ್ಯ ಸರ್ಕಾರ 18,174 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೇಂದ್ರಕ್ಕೆ 7 ತಿಂಗಳ ಹಿಂದೆ ಮನವಿ ಮಾಡಿತ್ತು. ಸದ್ಯ ಕೇಂದ್ರ ಸರ್ಕಾರ ರಾಜ್ಯಕ್ಕೆ 3455 ಕೋಟಿ ರೂಪಾಯಿಗಳನ್ನು ಮಾತ್ರ ಬಿಡುಗಡೆ ಮಾಡಿದೆ.
ಬರ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಸಂಘರ್ಷ ತಾರಕಕ್ಕೇರಿ ರಾಜ್ಯಕ್ಕೆ ಬರ ಪರಿಹಾರ ನೀಡುವಲ್ಲಿ ಮೋದಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ, ಸಚಿವರುಗಳು ಸೇರಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಧರಣಿ ನಡೆಸಿದ್ದರು. ಬರ ಪರಿಹಾರ ಸಿಗದಿದ್ದಾಗ ರಾಜ್ಯ ಸರ್ಕಾರ ದೆಹಲಿಯಲ್ಲಿ ಕೂಡ ಪ್ರತಿಭಟನೆ ಮಾಡಿತ್ತು.
ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿ 7 ತಿಂಗಳಾಗಿತ್ತು. 18,172 ಕೋಟಿ ರು.ಗಳನ್ನು ಎನ್.ಡಿ.ಆರ್.ಎಫ್ ನಿಂದ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಒತ್ತಾಯ ಮಾಡಿತ್ತು. ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದಾಗ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಸರ್ಕಾರ ದಾವೆ ಹೂಡಿ ಸರ್ಕಾರದ ಕ್ರಮವನ್ನು ಪ್ರಶ್ನಿಸಿತ್ತು. ಸಂವಿಧಾನಬದ್ದವಾಗಿ ಕರ್ನಾಟಕಕ್ಕೆ ಬಿಡುಗಡೆ ಮಾಡಬೇಕಿದ್ದ ಬರ ಪರಿಹಾರವನ್ನು ಬಿಡುಗಡೆ ಮಾಡದೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ತೀವ್ರ ರೀತಿಯ ಬರದಿಂದ ಕಂಗೆಟ್ಟಿರುವ ಕರ್ನಾಟಕದ ರೈತರು ಸೋತಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರಕ್ಕೆ ಬರ ಪರಿಹಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿಧಿಯಿಂದ ಕರ್ನಾಟಕಕ್ಕೆ ತಕ್ಷಣ ಹಣ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಕೇಂದ್ರ ಸರ್ಕಾರವು ಮುಂದಿನ ಸೋಮವಾರದೊಳಗೆ ಪರಿಹಾರ ಸಂಬಂಧ ಕ್ರಮ ಕೈಗೊಳ್ಳುತ್ತೇವೆ ಎಂದು ಸುಪ್ರೀಂಕೋರ್ಟಿನಲ್ಲಿ ಭರವಸೆ ನೀಡಿತ್ತು. ಸದ್ಯ ಪ್ರಕರಣದ ವಿಚಾರಣೆ ಏ.29ಕ್ಕೆ ನಡೆಯಲಿದೆ. ಈ ನಡುವೆ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯವು ಹಣ ಬಿಡುಗಡೆ ಮಾಡುವಂತೆ ಏ.26ರಂದು ತನ್ನ ಅಧಿಕಾರಿಗಳಿಗೆ ಸೂಚಿಸಿದೆ.
ಕೇಂದ್ರ ಗೃಹ ಸಚಿವಾಲಯವು 3,498.82 ಕೋಟಿ ರೂ. ಗಳ ಬರ ಪರಿಹಾರಕ್ಕೆ ಒಪ್ಪಿಗೆ ಸೂಚಿಸಿತ್ತು. ಆ ಪೈಕಿ 44.60 ಕೋಟಿ ರೂ. ಹಣ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿ (SDRF) ಯಲ್ಲಿರುವ ಕಾರಣ ನೀಡಿ 3454.22 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ತನ್ನ ಆದೇಶದಲ್ಲಿ ತಿಳಿಸಿದೆ.
ಕರ್ನಾಟಕದ ಜೊತೆಗೆ ಕೇರಳ ಮತ್ತು ತಮಿಳುನಾಡು ರಾಜ್ಯಗಳು ಕೂಡ ಪರಿಹಾರಕ್ಕಾಗಿ ಸುಪ್ರೀಂ ಮೆಟ್ಟಲೇರಿತ್ತು. ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ಪರಿಹಾರವಾಗಿ ತಮಿಳುನಾಡಿಗೆ 276 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ.
ಕಂದಾಯ ಸಚಿವ ಕೃಷ್ಣಭೈರೇಗೌಡರಿಂದ ಅಸಮಾಧಾನ :
ಕೇಂದ್ರದಿಂದ ಬರ ಪರಿಹಾರ (Drought Relief) ಬಿಡುಗಡೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ನಾವು 18,000 ಕೋಟಿಗೆ ಮನವಿ ಸಲ್ಲಿಸಿದ್ದೆವು. ಸಮಸ್ಯೆ ಗಂಭೀರವಾಗಿರುವ ಆಧಾರದ ಮೇಲೆ ಪರಿಹಾರ ಕೇಳಿದ್ದೆವು. ಈಗ 3,400 ಕೋಟಿಯಷ್ಟು ಹಣ ಕೊಟ್ಟಿದ್ದಾರೆ.
ಅಲ್ಪ ಪ್ರಮಾಣದ ಹಣ ಕೊಟ್ಟು ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಕೇಂದ್ರ ಸರ್ಕಾರದ ಜೊತೆ ಮಾತುಕತೆ ಮಾಡಿದ್ದೇವೆ. ಆದರೆ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲ. ನಾವು ಅಧಿಕೃತ ಆದೇಶದ ನಿರಿಕ್ಷೇಯಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ.