ಬೆಂಗಳೂರು, ಏ.26 www.bengaluruwire.com : ಕರ್ನಾಕದಲ್ಲಿ ಲೋಕಸಭಾ ಚುನಾವಣೆಗೆ 14 ಕ್ಷೇತ್ರಗಳಿಗೆ ಇಂದು ರಾಜ್ಯದಲ್ಲಿ (ಏ.26) ಮೊದಲನೇ ಹಂತದಲ್ಲಿ ಮತದಾನ ನಡೆಯಿತು. ರಾಜಧಾನಿ ಬೆಂಗಳೂರು ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಶೇಕಡ 69.23 ರಷ್ಟು ಮತದಾನವಾಗಿದೆ.
ಇಂದು ಮಧ್ಯಾಹ್ನ 3 ಗಂಟೆಯವರೆಗೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಶೇ.50.93ರಷ್ಟು ಮತದಾನ ನಡೆದಿದೆ. ಸಂಜೆ 5 ಗಂಟೆಯ ಹೊತ್ತಿಗೆ ಸರಾಸರಿಯಾಗಿ ಶೇ.63.90ರಷ್ಟು ಮತದಾನವಾಗಿತ್ತು ಎಂದು ಈ ಕುರಿತಂತೆ ಚುನಾವಣಾ ಆಯೋಗ ತಿಳಿಸಿದೆ. ಏಪ್ರಿಲ್ 26 ರಂದು ಕರ್ನಾಟಕವೂ ಸೇರಿದಂತೆ ದೇಶಾದ್ಯಂತ 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 88 ಸಂಸದೀಯ ಕ್ಷೇತ್ರಗಳಲ್ಲಿ (ದೇಶದ ಮಟ್ಟಿಗೆ ಎರಡನೇ ಹಂತದ ಚುನಾವಣೆ) ಇಂದು ಮತದಾನವಾಗಿದೆ. 14 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯದಲ್ಲಿ ಶೇ.81.48ರಷ್ಟು ಮತದಾನವಾಗುವ ಮೂಲಕ ಹೆಚ್ಚಿನ ಮತದಾನವಾಗಿದ್ದರೆ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕೇವಲ ಶೇ.52.81ರಷ್ಟು, ಅತಿ ಕಡಿಮೆ ಮತದಾನವಾಗಿದೆ.
ಪ್ರಮುಖ ರಾಜಕೀಯ ಪಕ್ಷಗಳ ಒಂದು ತಿಂಗಳ ಹೆಚ್ಚಿನ ಮೆಗಾ ಪ್ರಚಾರಗಳ ನಂತರ, ರಾಜ್ಯದ 14 ಕ್ಷೇತ್ರಗಳಿಂದ ಒಟ್ಟು 2,88,19,342 ಅರ್ಹ ಮತದಾರರು ಏಪ್ರಿಲ್ 26 ರಂದು 18 ನೇ ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಮತ ಚಲಾಯಿಸಿದ್ದಾರೆ. ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಮೇ 7 ರಂದು ನಡೆಯಲಿರುವ ಮೂರನೇ ಹಂತದಲ್ಲಿ ರಾಜ್ಯದ ಉತ್ತರ ಭಾಗದ ಇನ್ನೂ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಪ್ರಸ್ತುತ ಎರಡನೇ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಕೆಲವೊಂದು ಗೊಂದಲಗಳು, ಸಮಸ್ಯೆಗಳನ್ನು ಹೊರತುಪಡಿಸಿದರೆ ಬಹುತೇಕವಾಗಿ ಶಾಂತಿಯುತವಾಗಿ ಮತದಾನ ನಡೆದಿದೆ.
25 ಸಹಾಯಕ ಮತಗಟ್ಟೆಗಳು ಸೇರಿದಂತೆ ಒಟ್ಟು 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 30,602 ಮತಗಟ್ಟೆಗಳಲ್ಲಿ ಸುಮಾರು 1.40 ಲಕ್ಷ ಮತಗಟ್ಟೆ ಅಧಿಕಾರಿಗಳು, 5,000 ಮೈಕ್ರೋ ಅಬ್ಸರ್ವರ್‌ಗಳು ಮತ್ತು 50,000 ಸಿವಿಲ್ ಪೊಲೀಸರನ್ನು ಹೊರತುಪಡಿಸಿ 65 ಸಿಆರ್‌ಪಿಎಫ್ ಮತ್ತು ಇತರ ರಾಜ್ಯಗಳ ಮೀಸಲು ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿತ್ತು.
ಭಾರತದ ಚುನಾವಣಾ ಆಯೋಗವು ಚುನಾವಣೆಯನ್ನು ಸುಗಮವಾಗಿ ನಡೆಸಲು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿತ್ತು. ನಗರಗಳ ನಿರಾಸಕ್ತಿ ಮತ್ತು ಮತದಾನದ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಜಾಗೃತಿಯನ್ನು ನಡೆಸುವುದರ ಹೊರತಾಗಿ, ರಾಜ್ಯದಲ್ಲಿ ತೀವ್ರವಾದ ರಣ ಬಿಸಿಲು ಮತದಾರರ ಮತದಾನದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 10 ಗಂಟೆಯೊಳಗೆ ಶೇ.22.34ರಷ್ಟು ಮತದಾನವಾಗಿತ್ತು.
2014 ರಿಂದ 2024ರ ವರೆಗೆ 14 ಲೋಕಸಭಾ ಕ್ಷೇತ್ರಗಳಲ್ಲಾದ ಮತದಾನದ ಪ್ರಮಾಣ (ಶೇ.ಗಳಲ್ಲಿ) | ||||
ಕ್ರಮಸಂಖ್ಯೆ | ಲೋಕಸಭಾ ಕ್ಷೇತ್ರ | 2014 | 2019 | 2024 |
1) | ಉಡುಪಿ-ಚಿಕ್ಕಮಗಳೂರು ಶೇ. | 74.56% | 76.07% | 76.06% |
2) | ಹಾಸನ- ಶೇ. | 73.49% | 77.35% | 77.51% |
3) | ದಕ್ಷಿಣ ಕನ್ನಡ- ಶೇ. | 77.15% | 77.99% | 77.43% |
4) | ಚಿತ್ರದುರ್ಗ – ಶೇ. | 66.07% | 70.80% | 73.11% |
5) | ತುಮಕೂರು- ಶೇ. | 72.57% | 77.43% | 77.70% |
6) | ಮಂಡ್ಯ- ಶೇ. | 71.47% | 80.59% | 81.48% |
7) | ಮೈಸೂರು – ಶೇ. | 67.3% | 69.51% | 70.45% |
8) | ಚಾಮರಾಜನಗರ – ಶೇ. | 72.85% | 75.35% | 76.59% |
9) | ಬೆಂಗಳೂರು ಗ್ರಾಮಾಂತರ- ಶೇ. | 66.45% | 64.98% | 67.29 |
10) | ಬೆಂಗಳೂರು ಉತ್ತರ – ಶೇ. | 56.53% | 54.76% | 54.42% |
11) | ಬೆಂಗಳೂರು ಕೇಂದ್ರ – ಶೇ. | 55.64% | 54.32% | 52.81% |
12) | ಬೆಂಗಳೂರು ದಕ್ಷಿಣ – ಶೇ. | 55.75% | 53.70% | 53.15% |
13) | ಚಿಕ್ಕಬಳ್ಳಾಪುರ – ಶೇ. | 76.21% | 76.74% | 76.82% |
14) | ಕೋಲಾರ- ಶೇ. | 75.71% | 77.25% | 78.07 |