ಬೆಂಗಳೂರು, ಏ.26 www.bengaluruwire.com : ರಾಜ್ಯದಲ್ಲಿ ಇಂದು ದಕ್ಷಿಣದ 14 ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಯ ಎರಡನೆಯ ಮತದಾನ ನಡುವೆಯೇ ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭಾ ಚುನಾವಣೆಯ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮತದಾರರನ್ನು ಸೆಳೆಯಲು ಕ್ಯೂಆರ್ ಕೋಡ್ ಇರುವ ಗಿಫ್ಟ್ ಕೂಪನ್ ಕಾರ್ಡುಗಳನ್ನು ಹಂಚಿದ್ದಾರೆಂದು ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಈ ಕೂಪನ್ ಕಾರ್ಡ್ ಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದಾರೆ. ಪ್ರತಿ ಕ್ಯೂಆರ್ ಕೋಡ್ ಇರುವ ಕಾರ್ಡಿನಲ್ಲೂ ಸೀರಿಯಲ್ ನಂಬರ್ ಗಳಿವೆ.
ಪಾರದರ್ಶಕ, ಮುಕ್ತ ಚುನಾವಣೆ ನಡೆಸುವಲ್ಲಿ ಚುನಾವಣೆ ಆಯೋಗ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿರುವ ಅವರು, ಹಣ ಹಂಚಿಕೊಂಡು ಚುನಾವಣಾ ನಡೆಸಲು ಅವಕಾಶ ಮಾಡಿಕೊಟ್ಟುಬಿಡಿ ಎಂದು ಆಯೋಗದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಪರವಾಗಿ ಕ್ಯೂ ಆರ್ ಕೋಡ್ ಇರುವ ಕೂಪನ್ ಗಳ ಹಂಚಿಕೆ ಮಾಡುತ್ತಿರುವುದನ್ನು ತಡೆಯಲು ಹೋದ ಜೆಡಿಎಸ್- ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕುಸುಮ ಹನುಮಂತಯ್ಯ, ಕುಣಿಗಲ್ ಶಾಸಕ ಡಾ.ರಂಗನಾಥ್, ಮಾಗಡಿ ಶಾಸಕ ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಡಿಸಿಎಂ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಕೂಪನ್ ಕಾರ್ಡುಗಳ ಹಂಚಿಕೆಯಾಗಿರುವುದನ್ನು ಸಾಕ್ಷಿ ಸಮೇತ ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದಾರೆ. ಈ ಘಟನೆಯ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿಯೂ ಇದೇ ರೀತಿ ಕೂಪನ್ ಕಾರ್ಡುಗಳನ್ನು ಕಾಂಗ್ರೆಸ್ ಹಂಚಿತ್ತು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.