ಬೆಂಗಳೂರು, ಏ.23 www.bengaluruwire.com : ಲೋಕಸಭೆ ಚುನಾವಣೆ ಏ.26ರಂದು ನಡೆಯಲಿದ್ದು, ಬೆಂಗಳೂರಿನಲ್ಲಿ ಒಟ್ಟು ಮತದಾರರ ಸಂಖ್ಯೆ 10,127,869 ರಷ್ಟಿದೆ. ಈ ಪೈಕಿ ಯುವ ಮತದಾರರ ಸಂಖ್ಯೆ 1,60,232 ರಷ್ಟಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಅಂತಿಮ ಹಂತದ ಸಿದ್ದತೆ ಕುರಿತು ಮಂಗಳವಾರ ಮಲ್ಲೇಶ್ವರಂ ಐಪಿಪಿ ತರಬೇತಿ ಕೇಂದ್ರದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ 31,173 ವಿಶೇಷ ಚೇತನರು, ಸೇವಾ ಮತದಾರರು 1665, ಎನ್ ಆರ್ ಐ ಮತದಾರರು 2,158, ಒಟ್ಟು 28 ಮಸ್ಟರಿಂಗ್ ಕೇಂದ್ರಗಳು, 102 ಚೆಕ್ ಪೋಸ್ಟ್ ಗಳಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 8,984 ಮತಗಟ್ಟೆಗಳಿವೆ. ಆ ಪೈಕಿ, 2003 ಸೂಕ್ಷ್ಮ ಮತಗಟ್ಟೆಗಳು, 253 ವಲ್ನರಬಲ್ ಮತಗಟ್ಟೆಗಳು ಹಾಗೂ 30 ವೆಚ್ಚ ಸೂಕ್ಷ್ಮ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ.
ಒಟ್ಟು ಮತಗಟ್ಟೆಗಳ ಪೈಕಿ 50 ಪ್ರತಿಶತ ಮತಗಟ್ಟೆಗಳು ಅಂದರೆ 4492 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ 11,793 ಸಿಆರ್ ಪಿಎಫ್ ಸಿಬ್ಬಂದಿಗಳನ್ನು ಹಾಗೂ ನಾನ್ ಸಿಆರ್ ಪಿಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 43,123 ಮತಗಟ್ಟೆ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಕ್ಷಮ್ ತಂತ್ರಾಂಶದ ಮೂಲಕ ವಿಶೇಷ ಚೇತನರು ಹಾಗೂ ಹಿರಿಯ ನಾಗರೀಕರು ಸಾರಿಗೆ ಸೌಲಭ್ಯವನ್ನು ನೋಂದಣಿ ಮಾಡಿಕೊಳ್ಳಬಹುದು. ಐವಿಆರ್‌ಎಸ್ ಹಾಗೂ ಬಲ್ಕ್ ಎಸ್.ಎಂ.ಎಸ್ ಮೂಲಕ ಏಪ್ರಿಲ್ 26 ರಂದು ತಪ್ಪದೆ ಮತದಾನ ಮಾಡಲು ಎಲ್ಲರ ಮೊಬೈಲ್ ಗಳಿಗೆ ಸಂದೇಶಗಳನ್ನು ಕಳುಹಿಸಲಾಗುವುದು ಎಂದು ತುಷಾರ್ ಗಿರಿನಾಥ್ ಹೇಳಿದರು.
ಪೊಲೀಸ್ ಸಿಬ್ಬಂದಿಗಳ ವಿವರ:
• ಎಸಿಪಿ: 53
• ಪಿಎಸ್‌ಐ: 737
• ಎಎಸ್‌ಐ: 902
• ಎಸ್‌ಐ: 3555
• ಪೊಲೀಸ್ ಕಾನ್ಸ್ಟೆಬಲ್: 6352
• ಹೋಮ್ ಗಾರ್ಡ್: 3919
• ಸಿವಿಲ್ ಡಿಫೆನ್ಸ್: 500
• ಪಾರೆಸ್ಟ್ ಗಾರ್ಡ್: 32
• ಸಶಸ್ತ್ರ ತುಕಡಿಗಳು: 44
• ಕೇಂದ್ರೀಯ ಪೊಲೀಸ್ ತುಕಡಿ: 11
ಮಾಧ್ಯಮ ಗೋಷ್ಠಿಯಲ್ಲಿ ಸಾಮಾನ್ಯ ವೀಕ್ಷಕರು, ಚುನಾವಣಾ ವೆಚ್ಚ ವೀಕ್ಷಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ದಯಾನಂದ್, ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ, ಎಂಸಿಸಿ ನೋಡಲ್ ಅಧಿಕಾರಿಯಾದ ಮುನೀಶ್ ಮೌದ್ಗಿಲ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.