ಚಾಮರಾಜನಗರ, ಏ. 23 www.bengaluruwire.com : ರಾಜ್ಯದ ಪ್ರಮುಖ ಹುಲಿಧಾಮಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ಹುಲಿಧಾಮ ವ್ಯಾಪ್ತಿಯಲ್ಲಿ ಎರಡು ದಿನ ಹಿಂದೆ ಭಾರೀ ಬೆಂಕಿ ಬಿದ್ದು ಸೋಮವಾರವಿಡೀ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ. ಇಂದು ಮಂಗಳವಾರವೂ ಕೆಲವು ಕಡೆ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಆರಿಸುವ ಕೆಲಸ ಅರಣ್ಯ ಇಲಾಖೆಯಿಂದ ನಡೆದಿದೆ.
ಬೆಂಕಿ ತೀವ್ರತೆ ಎಷ್ಟಿದೆ ಎಂದರೆ ಬಿಳಿಗಿರಿರಂಗನಾಥಸ್ವಾಮಿ ಜಾತ್ರೆಗೆ ಬಂದವರು ದೂರದ ಬಿಆರ್ ಟಿ ಹುಲಿಧಾಮದ ಬೆಟ್ಟಗಳ ಮೇಲೆ ಕಾಡ್ಗಿಚ್ಚಿನ ಬೆಂಕಿ ಆ ಮೂಲಕ ಕಂಡುಬಂದಿರುವ ಹೊಗೆ ಕಂಡುಬಂದಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಈ ಬಾರಿ ಬಿಳಿಗಿರಿರಂಗನಾಥ ಬೆಟ್ಟದಲ್ಲಿ ಮಂಗಳವಾರ ಶ್ರೀ ಬಿಳಿಗಿರಿರಂಗನಾಥನ ಬ್ರಹ್ಮರಥೋತ್ಸವ ಸಂಭ್ರಮ ಸಡಗರದಿಂದ ನಡೆಯಿತು. ಬೇಸಿಗೆ ಬಿಸಿಲ ಬೇಗೆ, ಲೋಕಸಭಾ ಚುನಾವಣೆಯ ಕಾವೂ ರಥೋತ್ಸವ ಕಾರ್ಯಕ್ರಮದ ಮೇಲೆಯೂ ಬಿದ್ದಿದೆ. ಹೀಗಾಗಿ ರಥೋತ್ಸವ ಕಾರ್ಯಕ್ರಮದಲ್ಲಿ ಭಕ್ತರ ಸಂಖ್ಯೆ ಕಡಿಮೆಯಿತ್ತು.
ಮಿತಿ ಮೀರಿದ ಕಾಡ್ಗಿಚ್ಚು ಪ್ರಕರಣ :
ಬಿಆರ್ ಟಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬೆಟ್ಟದಲ್ಲಿ ಬೆಂಕಿ ಬಿದ್ದಿರುವುದರಿಂದ ಬೆಂಕಿ ಆರಿಸಲು ಅರಣ್ಯ ಇಲಾಖೆ ಪ್ರಯತ್ನ ಮಾಡುತ್ತಿದೆ. ಡಿಸಿಎಫ್ ದೀಪ್ ಜೆ ಕಂಟ್ರಾಕ್ಟರ್ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಂಕಿ ಆರಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಬಾರಿಯೂ ಬಿಆರ್ ಟಿ ಸೇರಿದಂತೆ ರಾಜ್ಯದ ಬಹುತೇಕ ಕಾಡಿನ ವ್ಯಾಪ್ತಿಯಲ್ಲಿ ಸೂಕ್ತ ರೀತಿ ಮಳೆಯಾಗಿಲ್ಲ. ಈ ಬಾರಿ ಏಪ್ರಿಲ್ ನಾಲ್ಕು ವಾರ ಕಳೆದರೂ ವರುಣನ ಸುಳಿವೇ ಇಲ್ಲ. ಹೀಗಾಗಿ ಕಾಡಿನಬೆಂಕಿ ಪ್ರಕರಣ ಮಿತಿ ಮೀರಿದೆ ಎಂದು ಹೇಳಲಾಗುತ್ತಿದೆ.
ಎರಡು ತಿಂಗಳ ಅವಧಿಯಲ್ಲಿ 15ಕ್ಕೂ ಹೆಚ್ಚು ಬಾರಿ ಬೆಂಕಿ ಬಿದ್ದಿದೆ ಎನ್ನಲಾಗಿದೆ. ಅದರಲ್ಲೂ ತಮಿಳುನಾಡು ಗಡಿ ಭಾಗಕ್ಕೆ ಹೊಂದಿಕೊಂಡಿರುವ ಬೈಲೂರು ಪುಣಜನೂರು ಭಾಗದಲ್ಲಿಯೇ ಹೆಚ್ಚಿನ ಕಾಡು ನಾಶವಾಗಿದೆ. ಬೇಸಿಗೆ ಇನ್ನೂ ಒಂದೂವರೆ ತಿಂಗಳು ಇರುವುದರಿಂದ ಮತ್ತೆ ಬೆಂಕಿ ಬಿದ್ದರೆ ಹೇಗೆ ಎಂದು ಅರಣ್ಯ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಭಾಗದಲ್ಲಿ ಮಳೆಯೂ ಆಗದೇ ಇರುವುದರಿಂದ ಒಣಗಿರುವ ಮರಗಳಿಗೆ ಬೆಂಕಿ ಬಿದ್ದರೆ ಇನ್ನಷ್ಟು ಅನಾಹುತ ಆಗಬಹುದು ಎನ್ನುವ ಆತಂಕವೂ ಅರಣ್ಯ ಇಲಾಖೆಯಲ್ಲಿ ಮನೆ ಮಾಡಿದೆ.
ಬೈಲೂರು ಅರಣ್ಯ ವಲಯ ವ್ಯಾಪ್ತಿಯಲ್ಲಿಯೇ ಬೆಂಕಿಗೆ ಹೆಚ್ಚಿನ ಹಾನಿ :
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಅರಣ್ಯ ಪ್ರದೇಶ ಹುಲಿಧಾಮವಾಗಿ ದಶಕಗಳೇ ಕಳೆದಿವೆ. ಈ ಹುಲಿಧಾಮ ತಮಿಳುನಾಡು ಗಡಿ ಭಾಗವನ್ನೇ ಹೆಚ್ಚು ಹೊಂದಿದೆ. ಅದರಲ್ಲೂ ಎತ್ತರದ ಗುಡ್ಡ, ಬೆಟ್ಟಗಳನ್ನೊಳಗೊಂಡ ಅರಣ್ಯ ಇಲ್ಲಿನ ವಿಶೇಷ. ಈಗಲೂ 12 ಸಾವಿರಕ್ಕೂ ಅಧಿಕ ಜನಸಂಖ್ಯೆ ಅರಣ್ಯ ಪ್ರದೇಶ ಹಾಗೂ ಕಾಡಿನ ಅಂಚಿನಲ್ಲೇ ವಾಸವಿದೆ. ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ ಹಾಗೂ ಹನೂರು ತಾಲ್ಲೂಕು ವ್ಯಾಪ್ತಿಯ ಈ ಅರಣ್ಯದಲ್ಲಿ ಈ ಬಾರಿಯಂತೂ ಹೆಚ್ಚು ಪ್ರಮಾಣದಲ್ಲಿ ಬೆಂಕಿ ಬಿದ್ದಿದೆ. ಐವತ್ತಕ್ಕೂ ಹೆಚ್ಚು ಬಾರಿ ಬೆಂಕಿ ಬಿದ್ದಿದ್ದು. ದೊಡ್ಡ ಪ್ರಮಾಣದಲ್ಲಿ ಹತ್ತಕ್ಕೂ ಹೆಚ್ಚು ಬಾರಿ ಕಾಡಿನ ಬೆಂಕಿ ಕಾಣಿಸಿಕೊಂಡಿದೆ. ಬೈಲೂರು ಅರಣ್ಯ ವಲಯ ವ್ಯಾಪ್ತಿಯಲ್ಲಿಯೇ ಬೆಂಕಿಗೆ ಭಾರೀ ಹಾನಿಯಾಗಿದೆ. ಇದನ್ನು ಉಪಗ್ರಹ ಆಧರಿತ ತಂತ್ರಜ್ಞಾನದ ಮೂಲಕವೂ ಪತ್ತೆ ಮಾಡಲಾಗಿದೆ.
ಯಾರೋ ಕಿಡಿಗೇಡಿಗಳ ಕೃತ್ಯಕ್ಕೆ ಕಾಡಿಗೆ ಬೆಂಕಿ ಹಾಕುತ್ತಿರುವುದು ಕಂಡು ಬಂದಿದೆ. ಹೊರಗಿನಿಂದ ಬಂದವರ ಜತೆಗೆ ಸ್ಥಳೀಯರು ಬೆಂಕಿ ನೀಡುತ್ತಿರುವ ಆರೋಪಗಳು ಕೇಳಿ ಬಂದಿವೆ. ಆ ಮಾಹಿತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ಹನೂರು ಠಾಣೆಯಲ್ಲಿ ಈ ಸಂಬಂಧ ದೂರನ್ನೂ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.