ಬೆಂಗಳೂರು ಏ.22 www.bengaluruwire.com : ಬೆಂಗಳೂರು ನಗರದ ಅಂತರ್ಜಲ ಮಟ್ಟವನ್ನು ನಿರಂತರಾಗಿ ಮೇಲ್ವಿಚಾರಣೆ ಮಾಡಲು ಐಐಎಸ್ಸ್ಸಿ ವಿಜ್ಞಾನಿಗಳು, ಸಿಜಿಡಬ್ಲೂಬಿ ಜೊತೆಗೂಡಿ ಕೃತಕ ಬುದ್ದಿಮತ್ತೆ ಆಧಾರಿತ ಸುಧಾರಿತ ಅಂತರ್ಜಲ ಮೇಲ್ವಿಚಾರಣಾ ವ್ಯವಸ್ಥೆ (AI BASED ADVANCED GROUND WATER MONITORING SYSTEM) ಅಳವಡಿಸಿಕೊಳ್ಳಲಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ವಿ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಸೋಮವಾರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)ಯ ಕೇಂದ್ರ ಕಚೇರಿಯಲ್ಲಿ ಐಐಎಸ್ಸ್ಸಿ ವಿಜ್ಞಾನಿಗಳು ಮತ್ತು ಕೇಂದ್ರ ಅಂತರ್ಜಲ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿ ಈ ವಿಷಯ ತಿಳಿಸಿದರು.
ಜಲಮಂಡಳಿಯಲ್ಲಿ “ಅಂತರ್ಜಲ ಕಾರ್ಯಪಡೆ” ರಚನೆ:
ಐಐಎಸ್ಸ್ಸಿ ವಿಜ್ಞಾನಿಗಳು, ಸಿಡಬ್ಲೂಜಿಬಿ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಜೊತೆಗೂಡಿ ಬೆಂಗಳೂರು ಜಲಮಂಡಳಿಯಲ್ಲಿ ಅಂತರ್ಜಲ ಕಾರ್ಯಪಡೆ (Undergroumd Taskforce) ರಚಿಸಲಾಗುವುದು. ಈ ಕಾರ್ಯಪಡೆ ಮೂಲಕ ನಗರದ ಅಂತರ್ಜಲ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುವುದು. ನಿರಂತರವಾಗಿ ದತ್ತಾಂಶಗಳ ಕ್ರೋಢೀಕರಣ ವಿಶ್ಲೇಷಣೆ ಮೂಲಕ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಈ ಟಾಸ್ಕ್ ಫೋರ್ಸ್ ಸಹಾಯ ಮಾಡಲಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಕೃತಕ ಬುದ್ದಿಮತ್ತೆ ಆಧಾರಿತ ಸುಧಾರಿತ ಅಂತರ್ಜಲ ಮೇಲ್ವಿಚಾರಣಾ ವ್ಯವಸ್ಥೆ :
ಬೆಂಗಳೂರು ನಗರದಲ್ಲಿ ನೀರಿನ ಕೊರತೆ ಎದುರಾಗಲು ಅಂತರ್ಜಲ ಮಟ್ಟ ಕಡಿಮೆಯಾಗಿರುವುದೇ ಪ್ರಮುಖ ಕಾರಣ. ಅಂತರ್ಜಲ ಮಟ್ಟ ಯಾವ ಹಂತದಲ್ಲಿದೆ, ಯಾವ ಪ್ರದೇಶಗಳಲ್ಲಿ ನೀರಿನ ಲಭ್ಯತೆ ವಿಫುಲವಾಗಿದೆ. ಸಾಂಪ್ರದಾಯಿಕ ವ್ಯವಸ್ಥೆಯಿಂದ ನೀರು ಸರಿಯಾಗಿ ಲಭ್ಯವಾಗದೇ ಇರುವುದರಿಂದ ಬಹಳಷ್ಟು ತೊಂದರೆಯಾಗುತ್ತಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಆಧಾರಿತ ಮಾನಿಟರಿಂಗ್ ಸಿಸ್ಟಮ್ ಅಳವಡಿಕೆಯ ಅಗತ್ಯವಿದೆ. ಇದನ್ನ ಮನಗಂಡಿರುವ ಜಲಮಂಡಳಿ ಐಐಎಸ್ಸ್ಸಿ ವಿಜ್ಞಾನಿಗಳು, ಸಿಡಬ್ಲೂಜಿಬಿ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಜೊತೆಗೂಡಿ ಕೃತಕ ಬುದ್ದಿಮತ್ತೆ ಆಧಾರಿತ ಸುಧಾರಿತ ಅಂತರ್ಜಲ ಮೇಲ್ವಿಚಾರಣಾ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗಿದೆ. ಎಐ ಮತ್ತು ಐಓಟಿ (AI & IOT) ತಂತ್ರಜ್ಞಾನ ನಿರ್ಮಾಣ ಮತ್ತು ಅಳವಡಿಕೆಯ ಮುಂದಾಳತ್ವವನ್ನು ಐಐಎಸ್ ಸ್ಸಿ ವಹಿಸಲಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆಯ ನಿರ್ವಹಣೆ ಮತ್ತು ಪರಿಹಾರದಲ್ಲಿ ಸಹಕಾರಿ :
ಮಾಹಿತಿಯ ಸಂಗ್ರಹಣೆ, ದತ್ತಾಂಶದ ವಿಶ್ಲೇಷಣೆ ಸೇರಿದಂತೆ ಅಗತ್ಯ ಮಾಹಿತಿಯ ಕ್ರೋಢೀಕರಣ ಹಾಗೂ ವರದಿಯನ್ನು ನೀಡುವ ನಿಟ್ಟಿನಲ್ಲಿ ಈ ತಂತ್ರಜ್ಞಾನ ಬಳಕೆಯಾಗಲಿದೆ. ಈ ಹೊಸ ತಂತ್ರಜ್ಞಾನದ ಅಳವಡಿಕೆಯಿಂದ, ಬೆಂಗಳೂರು ನಗರದ ಅಂತರ್ಜಲವನ್ನು ಸಮರ್ಪಕ ನಿರ್ವಹಣೆ ಮತ್ತು ಎದುರಾಗುವ ಸಮಸ್ಯೆಗಳನ್ನ ಪರಿಹರಿಸಲು ಅನುವು ಮಾಡಿಕೊಡಲಿದೆ. ಬೆಂಗಳೂರು ನಗರದ ಯಾವ ಪ್ರದೇಶದಲ್ಲಿ ಅಂತರ್ಜಲ ನೀರಿನ ಲಭ್ಯತೆಯಿದೆ.
ಅಂತರ್ಜಲ ಮಟ್ಟ ಯಾವ ಹಂತದಲ್ಲಿದೆ, ಇದರಲ್ಲಿ ಆಗುತ್ತಿರುವ ಏರು ಪೇರಿನ ಬಗ್ಗೆ ಸಮಗ್ರ ಮಾಹಿತಿ ಲಭ್ಯವಾಗಲಿದೆ. ಇದರಿಂದ ಜಲಮಂಡಳಿ ಸಮಸ್ಯೆಯ ಪರಿಹಾರಕ್ಕೆ ಗುರಿ ಆಧಾರಿತ ಅನುಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಫ್ರೊ.ಶೇಖರ್ ಎಂ, ಅಸೋಸಿಯೇಟ್ ಪ್ರೊಫೇಸರ್ ಎಲ್.ಎನ್ ರಾವ್, ಸಿಜಿಡಬ್ಲೂಬಿ ಯ ಪ್ರಾದೇಶಿಕ ನಿರ್ದೇಶಕರಾದ ಜ್ಯೋತಿ ಕುಮಾರ್, ವಿಜ್ಞಾನಿಗಳಾದ ಹೆಚ್.ಪಿ ಜಯ ಪ್ರಕಾಶ್ ಮತ್ತು ರಾಹುಲ್ ಉಪಸ್ಥಿತರಿದ್ದರು.