ಬೆಂಗಳೂರು, ಏ.20 www.bengaluruwire.com : ರಾಜಧಾನಿಯ ಐತಿಹಾಸಿಕ ಬೆಂಗಳೂರು ಕರಗ (Bengaluru Karaga) ಉತ್ಸವ ಏ.15ರಿಂದಲೇ ಆರಂಭವಾಗಿದ್ದು, ಏಪ್ರಿಲ್ 25ರ ತನಕ ನಡೆಯಲಿದೆ. ಕರಗ ಶಕ್ತ್ಯೋತ್ಸವಕ್ಕೆ ಪೂರ್ವಭಾವಿಯಾಗಿ ನಗರದ ಹಲವೆಡೆ ನಿನ್ನೆ ಮತ್ತು ಇಂದು ಚದುರಿದಂತೆ ಹಗುರ ಮಳೆಯಾಗಿದೆ. ಹೀಗಾಗಿ ನಗರದ ಜನತೆ ತುಸು ನೆಮ್ಮದಿ ಪಡುವಂತಾಗಿದೆ.
ಸಂಪಂಗಿ ಕೆರೆ ಅಂಗಳದಲ್ಲಿ ಏಪ್ರಿಲ್ 21ರಂದು ಮಧ್ಯರಾತ್ರಿ 3 ಗಂಟೆಗೆ ಹಸಿ ಕರಗ ನಡೆಯಲಿದೆ. ಬೆಂಗಳೂರು ಕರಗ ಮಹೋತ್ಸವ (Karaga Festival) ಏ.23ರಂದು ಚೈತ್ರ ಪೌರ್ಣಮಿಯಂದು ರಾತ್ರಿ 12.30ಕ್ಕೆ ಕರಗ ಶಕ್ತ್ಯೋತ್ಸವ ನಡೆಯಲಿದೆ. 13 ಬಾರಿ ಕರಗ ಹೊತ್ತಿರುವ ಪೂಜಾರಿ ಎ. ಜ್ಞಾನೇಂದ್ರ ಈ ಬಾರಿಯೂ ಕರಗ ಹೊರಲಿದ್ದಾರೆ. ಏಪ್ರಿಲ್ 24ರಂದು ದೇವಸ್ಥಾನದಲ್ಲಿ ಗಾವು ಪೂಜೆ, 25ಕ್ಕೆ ಕೊನೆಯ ದಿನದ ವಸಂತೋತ್ಸವ ಧ್ವಜಾವರೋಹಣ ಕಾರ್ಯಕ್ರಮ ನಡೆಯಲಿದೆ.
ಈ ವರ್ಷ ಸುಮಾರು 3000 ವೀರ ಕುಮಾರರು ಕರಗದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಕೋವಿಡ್ 19 ಸಾಂಕ್ರಾಮಿಕದ ಕಾರಣದಿಂದ ಕಳೆದ ಕೆಲವು ವರ್ಷಗಳಿಂದ ಕರಗ ಸಾಧಾರಣವಾಗಿ ಆಚರಿಸಲಾಗುತ್ತಾ ಬರಲಾಗುತ್ತಿದೆ. ಈ ಬಾರಿ ಅದ್ದೂರಿಯಾಗಿ ಉತ್ಸವ ಜರಗುವ ಸಾಧ್ಯತೆಯಿದೆ. ಕರಗದ ದಿನ ರಾತ್ರಿ ಧರ್ಮರಾಯಸ್ವಾಮಿ ದೇಗುಲದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆಯನ್ನು ನೆರವೇರಿಸಲಾಗುತ್ತದೆ. ನಡುರಾತ್ರಿಯ ವೇಳೆಗೆ ಕಳಸದ ಆಕೃತಿಗೆ ಮಲ್ಲಿಗೆ ಹೂವಿನಿಂದ ಶೃಂಗಾರವನ್ನು ಮಾಡಿ ಕರಗವನ್ನು ಸಿದ್ದಪಡಿಸಲಾಗುತ್ತದೆ. ಸಂಪಗಿರಾಮನಗರದ ಬಳಿಯಿಂದ ಕರಗಕ್ಕೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಕರಗದ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ರಂಗೋಲಿಯನ್ನು ಹಾಕಲಾಗುತ್ತದೆ. ಮನೆ ತಳಿರು ತೋರಣಗಳಿಂದ ಶೃಂಗಾರವಾಗಿರುತ್ತವೆ. ತಿಗಳರ ಪೇಟೆ, ಬಳೇಪೇಟೆ, ಚಿಕ್ಕಪೇಟೆ, ಅಣ್ಣಮ್ಮ ದೇವಸ್ಥಾನಗಳಲ್ಲಿ ಕರಗಧಾರಿಗಳು ಸಂಚರಿಸಿ ಸೂರ್ಯೋದಯದ ವೇಳೆಗೆ ಧರ್ಮರಾಯಸ್ವಾಮಿ ಗುಡಿಗೆ ಬರುತ್ತಾರೆ. ಕರಗದಾರಿಗಳು ಮೊದಲು ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ, ಅಲ್ಲಿ ಧೂಪಾರತಿ ಸ್ವೀಕರಿಸಿ ನಂತರ ನಗರದ ಪ್ರದಕ್ಷಿಣೆ ಹೊರಡುತ್ತಾರೆ. ಇದು ಭಾವೈಕ್ಯತೆಯ ಸಂಕೇತದ ಪ್ರತೀಕವಾಗಿದೆ.
ಕರಗದ ಪೌರಾಣಿಕ ಹಿನ್ನಲೆಯೇನು? :
ಪುರಾಣ ಕಥೆಗಳು ಮತ್ತು ನಂಬಿಕೆಯ ಪ್ರಕಾರ, ಕುರುಕ್ಷೇತ್ರ ಯುದ್ಧದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ವೇಳೆ ದ್ರೌಪದಿ ಮೂರ್ಛೆ ಹೋಗುತ್ತಾಳೆ. ಆದರೆ ಇದು ಪಾಂಡವರ ಅರಿವಿಗೆ ಬರುವುದಿಲ್ಲ. ಅವರು ತಿಳಿಯದೆ ಮುಂದೆ ನಡೆಯುತ್ತಾರೆ. ಸ್ವಲ್ಪ ಸಮಯದ ನಂತರ ಎಚ್ಚರವಾದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿರುವುದು ದ್ರೌಪದಿಯ ಕಣ್ಣಿಗೆ ಬೀಳುತ್ತದೆ. ಆಗ ದ್ರೌಪದಿ ಆದಿಶಕ್ತಿಯ ರೂಪವನ್ನು ತೋರುತ್ತಾ ತಿಮರಾಸುರನನ್ನು ಸದೆ ಬಡಿಯಲು, ತನ್ನ ತಲೆಯಿಂದ ‘ಯಜಮಾನ’ರನ್ನು, ಹಣೆಯಿಂದ ‘ಗಣಾಚಾರಿ’ಗಳನ್ನು, ಕಿವಿಗಳಿಂದ ‘ಗೌಡ’ರನ್ನು, ಬಾಯಿಯಿಂದ ‘ಗಂಟೆಪೂಜಾರಿ’ಗಳನ್ನು ಮತ್ತು ಹೆಗಲಿನಿಂದ ‘ವೀರಕುಮಾರ’ರನ್ನು ಸೃಷ್ಟಿ ಮಾಡುತ್ತಾಳೆ.
ಆಗ ದ್ರೌಪದಿ ಸೃಷ್ಟಿ ಮಾಡಿದ ಈ ಕಿರು ಸೇನೆ ರಕ್ಕಸನ ವಿರುದ್ಧ ಹೋರಾಡಿ ಗೆಲ್ಲುತ್ತದೆ. ನಂತರ ದ್ರೌಪದಿ ಆದಿಶಕ್ತಿಯಾಗಿ ಭೂಮಿಗೆ ಮರಳಿ ಬಾರದಂತೆ ಕೈಲಾಸಕ್ಕೆ ಹೋಗಿ ನೆಲೆಸಲು ನಿರ್ಧರಿಸುತ್ತಾಳೆ. ಇದರ ನೆನಪಿಗಾಗಿ ಕರಗ ಆಚರಿಸಲಾಗುತ್ತದೆ ಎಂಬುದು ಭಕ್ತರ ನಂಬಿಕೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Dailyhunt, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.