ಬೆಂಗಳೂರು, ಏ.20 www.bengaluruwire.com : ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯನ್ನು ಕಾಂಗ್ರೆಸ್ ಹಾಳುಮಾಡಿದೆ. ಈ ನಗರವನ್ನು ಟ್ಯಾಂಕರ್ ಸಿಟಿ ಮಾಡಿದೆ. ಭ್ರಷ್ಟಾಚಾರದ ಕಡೆ ಕಾಂಗ್ರೆಸ್ಸಿಗರು ಗಮನ ಕೊಟ್ಟಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟೀಕಿಸಿದರು.
ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ‘ವಿಜಯ ಸಂಕಲ್ಪ’ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಇಂಡಿಯಾ ಒಕ್ಕೂಟ ತಂತ್ರಜ್ಞಾನದ ವಿರೋಧಿ. ಕಾಂಗ್ರೆಸ್ ಪಕ್ಷ ಆಧಾರ್, ಜನ್‍ಧನ್ ಖಾತೆ ವಿರೋಧಿಸಿತ್ತು. ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಭಾರತದಲ್ಲಿ ತಯಾರಾದ ಲಸಿಕೆಯನ್ನೂ ವಿರೋಧಿಸಿತ್ತು ಎಂದು ನೆನಪಿಸಿಕೊಂಡರು. ಬೆಂಗಳೂರು ಮತ್ತು ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಗಳ ಬಗ್ಗೆ ಸವಿವರವಾಗಿ ತಮ್ಮ ಭಾಷಣದಲ್ಲಿ ತಿಳಿಸಿದರು.
ದೇಶದ ಸಮಗ್ರ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ. ಇಲ್ಲಿ ಮೆಟ್ರೋ ವಿಸ್ತರಣೆ ನಡೆದಿದ್ದು, ಹಳದಿ ಮಾರ್ಗವೂ ಕೂಡ ಸದ್ಯದಲ್ಲಿಯೇ ಕಾರ್ಯಾರಂಭ ಮಾಡಲಿದೆ. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಮೋದಿ ಸೋಲಿಸುವುದೊಂದೇ ‘ಇಂಡಿ’ಯ ಧ್ಯೇಯವಾಗಿದೆ. ಕಾಂಗ್ರೆಸ್ ಪಕ್ಷ ಯುವಜನರ ವಿರೋಧಿ, ಹೂಡಿಕೆಗೆ ವಿರೋಧಿ, ಉದ್ಯಮಗಳ ವಿರೋಧಿ ಪಕ್ಷ. ಕಾಂಗ್ರೆಸ್ ಆಡಳಿತದಲ್ಲಿ ಬಾಂಬ್ ಸ್ಫೋಟವಾಗುತ್ತಿದೆ. ಯುವತಿಯರ ಹತ್ಯೆ ಆಗುತ್ತಿದೆ. ಕಾಂಗ್ರೆಸ್ ಬಗ್ಗೆ ಎಚ್ಚರದಿಂದಿರಿ ಎಂದು ತಿಳಿಸಿದರು.
ಕರ್ನಾಟಕದ ಕಾಂಗ್ರೆಸ್ ಸರಕಾರವು ರೈತರ ವಿರೋಧಿ ಎಂದು ಆಕ್ಷೇಪಿಸಿದ ಅವರು, ಕೇಂದ್ರ ಸರಕಾರವು ರೈತರ ಉತ್ಪನ್ನಗಳನ್ನು ಶೇಖರಿಸಲು ಗೋದಾಮುಗಳನ್ನು ನಿರ್ಮಿಸುತ್ತಿದೆ. ರಾಗಿಯನ್ನು ಜಗತ್ತಿನ ವಿವಿಧ ದೇಶಗಳಿಗೆ ಪರಿಚಯಿಸಿದ್ದೇವೆ. ನಿಮ್ಮ ಸಂಕಲ್ಪಗಳನ್ನು ಈಡೇರಿಸಲು ಬಿಜೆಪಿ- ಜೆಡಿಎಸ್ ಒಟ್ಟಾಗಿವೆ. ನಿಮ್ಮ ಕನಸು ನನಸಾಗಿಸುವುದೇ ನನ್ನ ಸಂಕಲ್ಪ. 24*7 ಮತ್ತು 2047 ನನ್ನ ಸಂಕಲ್ಪ. ವಿಕಸಿತ ಭಾರತಕ್ಕಾಗಿ 26ರಂದು ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಗರಿಷ್ಠ ಮತದಾನ ಮಾಡಿ; ಮನೆಮನೆಗೆ ತೆರಳಿ ‘ಮೋದಿಯವರು ಬಂದಿದ್ದರು; ನಿಮಗೆ ನಮಸ್ಕಾರ ಹೇಳಿದ್ದಾರೆ’ ಎಂದು ತಿಳಿಸಲು ವಿನಂತಿಸಿದರು.
ಸಾಧನೆಯ ಟ್ರ್ಯಾಕ್ ರೆಕಾರ್ಡ್ ಮೂಲಕ ಮತ್ತೆ ಮತ ಕೇಳಲು ಬಂದಿದ್ದೇನೆ :
ಕರ್ನಾಟಕಕ್ಕೂ ಬುಲೆಟ್ ಟ್ರೈನ್ ಸಿಗಲಿದೆ. ಯುವಜನರಿಗೆ ಉದ್ಯೋಗಾವಕಾಶ ಸಿಗುತ್ತಿದೆ. ಹೂಡಿಕೆ ಅವಕಾಶಗಳು ಹೆಚ್ಚಾಗಿವೆ. ಡ್ರೋಣ್ ಉಪಯೋಗದ ಅವಕಾಶಗಳು ಹೆಚ್ಚಿಸಿದ್ದೇವೆ. ಡಿಜಿಟಲ್ ಇಂಡಿಯಾದಿಂದ ಹೊಸ ಉದ್ಯಮಗಳು ಬಂದಿವೆ. ಎಚ್‍ಎಎಲ್‍ಗೆ ಗರಿಷ್ಠ ದಾಖಲೆಯ ಲಾಭ ದೊರಕಿದೆ. ಇದೆಲ್ಲವನ್ನೂ ಕಾಂಗ್ರೆಸ್ ಮಾಡಲು ಸಾಧ್ಯವಿತ್ತೇ? ಇಂದು ವಿದೇಶಿಗರೆಲ್ಲರೂ ಭಾರತದ ಸ್ನೇಹ ಬಯಸುತ್ತಾರೆ. ಹೂಡಿಕೆದಾರರು ಗರಿಷ್ಠ ಹಣ ಹೂಡುತ್ತಿದ್ದಾರೆ. ರಫ್ತಿನಲ್ಲಿ ಗಮನಾರ್ಹ ಸಾಧನೆ ನಮ್ಮದಾಗಿದೆ. ವಿಶ್ವದ 11ನೇ ಆರ್ಥಿಕ ಸ್ಥಾನದಿಂದ ಇದೀಗ ಭಾರತವು 5ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಈ ಬದಲಾವಣೆಯನ್ನು ನೀವೆಲ್ಲರೂ ನೋಡಿದ್ದೀರಿ. ಇದೆಲ್ಲವೂ 10 ವರ್ಷಗಳಲ್ಲಿ ಆಗಿದೆ. ಈ ಪರಿವರ್ತನೆಗೆ ಯಾರು ಕಾರಣರು ಎಂದಾಗ ‘ಮೋದಿ ಮೋದಿ’ ಎಂದು ಜನರು ಘೋಷಣೆ ಕೂಗಿದರು. ನಿಮ್ಮ ಒಂದು ಮತವು ಇದಕ್ಕೆ ಕಾರಣ. ಸಾಧನೆಯ ಟ್ರ್ಯಾಕ್ ರೆಕಾರ್ಡ್ ಮೂಲಕ ಮತ್ತೆ ಮತ ಕೇಳಲು ಬಂದಿದ್ದೇನೆ. ಎನ್‍ಡಿಎ- ಇಂಡಿಯಾ ಒಕ್ಕೂಟದ ಪ್ರಚಾರ ನೋಡಿದ್ದೀರಿ. ಕಾಂಗ್ರೆಸ್, ಇಂಡಿಯಾ ಒಕ್ಕೂಟ ಮೋದಿ ವಿರುದ್ಧ ಆರೋಪ ಮಾಡುತ್ತಾರೆ. ಆದರೆ ಮೋದಿ, 21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿ, ಭಾರತದ ಗ್ಲೋಬಲ್ ಇಮೇಜ್ ಕಡೆ ಗಮನ ನೀಡಿದ್ದಾರೆ ಎಂದು ತಿಳಿಸಿದರು.
ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಫಿರ್ ಏಕ್ ಬಾರ್ ಮೋದಿ ಸರಕಾರ ಎಂಬ ಸಂದೇಶ ಇದರಿಂದ ಲಭಿಸಿದೆ ಎಂದು ತಿಳಿಸಿದ ಅವರು, 2014ರ ಪೂರ್ವದಲ್ಲಿ ಭಾರತವು ಆರ್ಥಿಕವಾಗಿ ಹಿಂದುಳಿದ ದೇಶವಾಗಿತ್ತು. 2014, 2019ರಲ್ಲಿ ಎನ್‍ಡಿಎ ಸರ್ಕಾರವನ್ನು ಜನರು ಆಯ್ಕೆ ಮಾಡಿದ್ದು, ಭಾರತವು ಸಶಕ್ತ ರಾಷ್ಟ್ರವಾಗಿ ಹೊರಹೊಮ್ಮಿದೆ. ನಾವು ನುಡಿದಂತೆ ನಡೆದಿದ್ದೇವೆ.
ಬಡವರ ಕುಟುಂಬದಿಂದ ನಾನು ಬಂದಿದ್ದೇನೆ. ಬಡತನದ ಬಗ್ಗೆ ಅರಿವಿದೆ. ದೇಶದಲ್ಲಿ ವೇಗವಾಗಿ ನಗರೀಕರಣ ನಡೆದಿದೆ. ಜನರಿಗೆ ಉತ್ತಮ ಮೂಲಸೌಕರ್ಯ ಕೊಡಲು ನಾವು ಬದ್ಧತೆ ಪ್ರದರ್ಶಿಸಿದ್ದೇವೆ. 1 ಕೋಟಿ ಮನೆಗಳನ್ನು ಕೊಡಲಾಗಿದೆ. ಮಧ್ಯಮ ವರ್ಗದವರಿಗೆ ಮನೆಗಳಿಗೆ ಬಡ್ಡಿಗೆ ಸಹಾಯಧನ ನೀಡಲಾಗಿದೆ. ರೇರಾ ಕಾಯ್ದೆ ತಂದಿದ್ದೇವೆ ಎಂದು ವಿವರಿಸಿದರು.
ಶೇ.80ರಷ್ಟು ಕಡಿಮೆ ದರಕ್ಕೆ ಔಷಧಿ ಸಿಗುತ್ತಿದೆ :
ಈಗ 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಕೊಡಬೇಕಿಲ್ಲ. ಯುಪಿಎ ಇದ್ದಾಗ ಹತ್ತಾರು ತೆರಿಗೆಗಳು ಇದ್ದವು. ಜಿಎಸ್‍ಟಿ ಬಳಿಕ ಪರೋಕ್ಷ ತೆರಿಗೆಗಳು ಕಡಿಮೆ ಆಗಿವೆ. ಎಲ್‍ಇಡಿ ಬಲ್ಬ್ 400 ರೂ. ಇದ್ದುದು 40 ರೂ. ಆಗಿದೆ. ಇದರಿಂದ ವಿದ್ಯುತ್ ಬಿಲ್ ಕಡಿಮೆ ಆಗಿದೆ. ಎನ್‍ಡಿಎ ಈಗ ಪಿಎಂ ಸೂರ್ಯ ಘರ್ ಎಂಬ ಯೋಜನೆ ಜಾರಿ ಮಾಡಿದೆ. ಇದರಿಂದ ವಿದ್ಯುತ್ ಬಿಲ್ ಶೂನ್ಯವಾಗಲಿದೆ; ಇಲೆಕ್ಟ್ರಿಕ್ ವಾಹನಗಳಿಂದ ಚಾರ್ಜಿಂಗ್ ಕೂಡ ಮನೆಯಲ್ಲೇ ಮಾಡಬಹುದು. ಬಡವರು, ಮಧ್ಯಮ ವರ್ಗದ ಆರೋಗ್ಯದ ವೆಚ್ಚ ದೊಡ್ಡದಾಗಿತ್ತು. ಆಯುಷ್ಮಾನ್ ಭಾರತ್ ಮೂಲಕ ಉಳಿತಾಯ ಸಾಧ್ಯವಾಗಿದೆ. ಬಿಜೆಪಿ ಈ ಯೋಜನೆಯನ್ನು ಇದೀಗ ಹಿರಿಯ ನಾಗರಿಕರಿಗೂ ವಿಸ್ತರಿಸಿದೆ. ಎನ್‍ಡಿಎ ಸರಕಾರ ಜನೌಷಧಿ ಕೇಂದ್ರ ತೆರೆದಿದ್ದು, ಇದರಿಂದ ಶೇ. 80ರಷ್ಟು ಕಡಿಮೆ ದರಕ್ಕೆ ಔಷಧಿ ಸಿಗುತ್ತಿದೆ.
ಬೆಂಗಳೂರು ಡಿಜಿಟಲ್ ಇಂಡಿಯದ ದೊಡ್ಡ ಹಬ್ ಆಗಿದೆ. ಭಾರತದಲ್ಲಿ ಮೊಬೈಲ್ ಡೇಟಾ ದರ 2014ರಲ್ಲಿ 1 ಜಿಬಿಗೆ 250 ರೂ. ಹತ್ತಿರ ಇತ್ತು. ಈಗ ಅದು 10 ರೂ. ಗಳಷ್ಟಾಗಿದೆ. ಎಷ್ಟು ಉಳಿತಾಯ ಆಗಿದೆ ಎಂದು ಯೋಚಿಸಿ. ಡೇಟಾ ಸೆಕ್ಯುರಿಟಿಗೆ ನಾವು ಆದ್ಯತೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ರಾಜ್ಯದಿಂದ 28 ಎನ್‍ಡಿಎ ಸಂಸದರನ್ನು ಕೇಂದ್ರಕ್ಕೆ ಕಳಸುತ್ತೇವೆ : ಬಿಎಸ್ ವೈ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ರಾಜ್ಯದಿಂದ 28 ಎನ್‍ಡಿಎ ಸಂಸದರನ್ನು ಕಳಿಸಿಕೊಡಲಿದ್ದೇವೆ. ಬಿಜೆಪಿ- ಜೆಡಿಎಸ್ ಹೊಂದಾಣಿಕೆ ಆಗಿರುವುದರಿಂದ ಎಲ್ಲ 28 ಸ್ಥಾನಗಳು ಎನ್‍ಡಿಎ ಪರವಾಗಲಿದೆ. ಕಾಂಗ್ರೆಸ್ ಸ್ನೇಹಿತರು ಜನಹಿತ ಮರೆತು ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ. ದೇಶದಲ್ಲಿ ಕಳೆದ ಬಾರಿಯಷ್ಟು ಅಂದರೆ 52 ಸೀಟನ್ನಾದರೂ ಗೆದ್ದು ತೋರಿಸಿ ಎಂದು ಕಾಂಗ್ರೆಸ್ಸಿಗರಿಗೆ ಸವಾಲು ಹಾಕಿದರು.
ಬೆಂಗಳೂರು ದಕ್ಷಿಣ, ಬೆಂಗಳೂರು ಮಧ್ಯ, ಬೆಂಗಳೂರು ಉತ್ತರ ಕ್ಷೇತ್ರಗಳು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಸಭೆ ಇದಾಗಿತ್ತು. ಅಭ್ಯರ್ಥಿಗಳಾದ ಡಾ.ಮಂಜುನಾಥ್, ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ವಿಪಕ್ಷ ನಾಯಕ ಅಶೋಕ, ಬಿಜೆಪಿ- ಜೆಡಿಎಸ್ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.