ಬೆಂಗಳೂರು, ಮಾ.29 www.bengaluruwire.com : ದೇಶಾದ್ಯಂತ 18ನೇ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಈ ನಡುವೆ 2019ರಿಂದ 2024 ಮಾ.29ರ ವರೆಗೆ ರಾಜ್ಯವನ್ನು ಪ್ರತಿನಿಧಿಸಿದ 28 ಸಂಸದರಿಗೆ 17ನೇ ಲೋಕಸಭೆಯ ಅವಧಿಯಲ್ಲಿ ಕೇಂದ್ರದಿಂದ ಈತನಕ ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿ ( Members Of Parliament Local Area Development Scheme – MPLADS)ಗೆ 225 ಕೋಟಿ ರೂ. ಬಿಡುಗಡೆಯಾಗಿದ್ದು, ಆ ಪೈಕಿ ಜಿಲ್ಲಾಡಳಿತಗಳು ಬಿಡುಗಡೆಯಾಗಿದ್ದಕ್ಕಿಂತ ಶೇ.107ರಷ್ಟು ಹಣವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ವಿನಿಯೋಗಿಸಿದೆ.
ಒಟ್ಟಾರೆ ಬಿಡುಗಡೆಯಾದ 225 ಕೋಟಿ ರೂ. ಹಣಕ್ಕೆ 8.93 ಕೋಟಿ ರೂ. ಬಡ್ಡಿ ಹಾಗೂ ಹಿಂದಿನ ಸಂಸತ್ ಸದಸ್ಯರ ಬಳಕೆಯಾಗದೆ ಉಲಿದ 46.03 ಕೋಟಿ ರೂ. ಸೇರಿದಂತೆ ಒಟ್ಟಾರೆ 279.96 ಕೋಟಿ ರೂ. ರಾಜ್ಯದಲ್ಲಿನ ವಿವಿಧ ಜಿಲ್ಲಾಡಳಿತಗಳ ಖಜಾನೆಯಲ್ಲಿ ಲಭ್ಯವಿತ್ತು. ಒಟ್ಟಾರೆಯಾಗಿ 8802 ವಿವಿಧ ಕಾಮಗಾರಿಗಳನ್ನು ಶಿಫಾರಸ್ಸು ಮಾಡಲಾಗಿದ್ದರೆ, ಆ ಪೈಕಿ ಕೇವಲ 8164 ಕಾಮಗಾರಿಗಳಿಗೆ ಮಂಜೂರಾತಿ ದೊರಕಿದೆ. ಆದರೆ ವಾಸ್ತವದಲ್ಲಿ ಒಟ್ಟಾರೆ 5544 ಕಾಮಗಾರಿಗಳಿಗೆ 225.49 ಕೋಟಿ ರೂ. ಹಣವನ್ನು ವೆಚ್ಚ ಮಾಡಲಾಗಿದೆ.
28 ಸಂಸತ್ ಸದಸ್ಯರು ಈ ಅವಧಿಯಲ್ಲಿ ಒಟ್ಟಾರೆ 319.95 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳಿಗೆ ಶಿಫಾರಸ್ಸು ಮಾಡಿದ್ದರೆ, ವಿವಿಧ ಜಿಲ್ಲಾಡಳಿತಗಳು ಒಟ್ಟಾರೆ 293.03 ಕೋಟಿ ರೂ. ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯನ್ನು ಬಳಕೆ ಮಾಡಲು ಶಿಫಾರಸ್ಸು ಮಾಡಿದ್ದವು. ಎಂಪಿಎಲ್ಎಡಿಎಸ್ ನಿಧಿ ಮಂಜೂರಾತಿಯಾದಕ್ಕಿಂತ ಬಿಡುಗಡೆಯಾದ ಮೊತ್ತವು ಶೇ.130ರಷ್ಟಿದೆ. ಅಂದರೆ ಜಿಲ್ಲಾಡಳಿತಗಳು 246.807 ಕೋಟಿ ರೂ.ಗಳಷ್ಟು ಹಣವನ್ನು ಇಲ್ಲಿಯ ತನಕ ಖರ್ಚು ಮಾಡಿದೆ. ಒಟ್ಟಾರೆಯಾಗಿ ಬಿಡುಗಡೆ ಮಾಡಲಾದ ನಿಧಿಯಲ್ಲಿ ಶೇ.107ರಷ್ಟು ಹಣವನ್ನು ಬಳಸಲಾಗಿದೆ. 33.15 ಕೋಟಿ ರೂ. ಹಣ ಜಿಲ್ಲಾಡಳಿತಗಳ ಬಳಿ ಲಭ್ಯವಿದೆ ಎಂದು ಕೇಂದ್ರ ಸರ್ಕಾರ ತನ್ನ ಎಂಪಿಲ್ಯಾಡ್ಸ್ ವೆಬ್ ಸೈಟಿನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಒಟ್ಟಾರೆ 12 ವಿವಿಧ ವರ್ಗಗಳ 5,544 ಕಾಮಗಾರಿಗಳನ್ನು ಕೈಗೊಳ್ಳಲು 225.49 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿತ್ತು. ಆ ಪೈಕಿ ಅತಿ ಹೆಚ್ಚು ಬಳಕೆಯಾದ ಟಾಪ್-5 ವರ್ಗಗಳೆಂದರೆ :

ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿ ಹೆಚ್ಚು ಕರ್ಚು ಮಾಡಲಾದ ಟಾಪ್-5 ವರ್ಗಗಳು | |||
ಕ್ರಮ ಸಂಖ್ಯೆ | ವರ್ಗ | ಕಾಮಗಾರಿಗಳ ಸಂಖ್ಯೆ | ಬಳಕೆಯಾದ ನಿಧಿ (ಕೋಟಿ ರೂ.ಗಳಲ್ಲಿ) |
1) | ರೈಲ್ವೆ, ರಸ್ತೆ, ಸೇತುವೆ, ಇನ್ನಿತರ ಮಾರ್ಗಗಳು | 2591 | 101.78 |
2) | ಇತರೆ ಸಾರ್ವಜನಿಕ ಸೌಲಭ್ಯಗಳು | 1771 | 72.67 |
3) | ಕುಡಿಯುವ ನೀರಿನ ಸೌಲಭ್ಯ | 497 | 16.63 |
4) | ಶಿಕ್ಷಣ | 338 | 17.78 |
5) | ವಿದ್ಯುತ್ ಸೌಲಭ್ಯ | 157 | 5.77 |
ಒಟ್ಟಾರೆ | 5544 | 225.49 ಕೋಟಿ ರೂ. |
ಪ್ರತಿಯೊಬ್ಬಸದಸ್ಯರಿಂದ ಸರಾಸರಿ 159 ಪ್ರಶ್ನೆ:

2019ರ ಜೂನ್ ನಿಂದ ಜನವರಿ 2024ರ ಫೆಬ್ರವರಿ ತನಕ ಒಟ್ಟಾರೆ 15 ಅಧಿವೇಶನಗಳು ನಡೆದಿದ್ದು, ಆ ಪೈಕಿ ಪ್ರತಿವರ್ಷ ಸರಾಸರಿಯಾಗಿ ವರ್ಷಕ್ಕೆ 55 ದಿನ ಅಧಿವೇಶನ ಹಮ್ಮಿಕೊಳ್ಳಲಾಗಿದೆ. ಒಟ್ಟಾರೆ 273 ದಿನಗಳ ಅಧಿವೇಶನದಲ್ಲಿ ಸರಾಸರಿಯಾಗಿ 164 ದಿನಗಳು ಮಾತ್ರ ರಾಜ್ಯದಿಂದ ಆಯ್ಕೆಯಾದ ಲೋಕಸಭಾ ಸದಸ್ಯರು ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ. ಸರಾಸರಿಯಾಗಿ ಪ್ರತಿಯೊಬ್ಬ ಸಂಸತ್ ಸದಸ್ಯರು 159 ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಅಸೋಸಿಯೇಷನ್ ಡೆಮೊಕ್ರಾಟಿಕ್ ರಿಫಾರ್ಮ್ಸ್ (ADR) ಎಂಬ ಸರ್ಕಾರೇತರ ಸಂಸ್ಥೆಯು ನಡೆಸಿದ ಮೌಲ್ಯ ಮಾಪನದಿಂದ ತಿಳಿದು ಬಂದಿದೆ.
ಸಂಸದರ ಪ್ರದೇಶಾಭಿವೃದ್ಧಿ ನಿಧಿ ಕುರಿತು :
MPLADS ಕೇಂದ್ರ ವಲಯದ ಯೋಜನೆಯಾಗಿದ್ದು, ಇದು ಭಾರತ ಸರ್ಕಾರದಿಂದ ಸಂಪೂರ್ಣವಾಗಿ ಹಣ ಪಡೆದಿದೆ. ಪ್ರಾಥಮಿಕವಾಗಿ ತಮ್ಮ ಕ್ಷೇತ್ರಗಳಲ್ಲಿ ಕುಡಿಯುವ ನೀರು, ಪ್ರಾಥಮಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಮತ್ತು ರಸ್ತೆಗಳು ಇತ್ಯಾದಿ ಕ್ಷೇತ್ರಗಳಲ್ಲಿ ಬಾಳಿಕೆ ಬರುವ ಸಮುದಾಯ ಆಸ್ತಿಗಳ ಸೃಷ್ಟಿಗೆ ಒತ್ತು ನೀಡುವ ಮೂಲಕ ಅಭಿವೃದ್ಧಿಶೀಲ ಸ್ವಭಾವದ ಕೆಲಸಗಳನ್ನು ಶಿಫಾರಸು ಮಾಡಲು ಸಂಸದರನ್ನು ಸಕ್ರಿಯಗೊಳಿಸುವುದು ಯೋಜನೆಯ ಉದ್ದೇಶವಾಗಿದೆ. ಪ್ರತಿ ಸಂಸತ್ ಸದಸ್ಯರ (MP) ಕ್ಷೇತ್ರದ ವಾರ್ಷಿಕ ಎಂಪಿಎಲ್ಎಡಿಎಸ್ ನಿಧಿಯು 5 ಕೋಟಿ ರೂ.ಗಳಾಗುತ್ತದೆ, ಈ ನಿಧಿಯು ಮಾರ್ಗಸೂಚಿಗಳ ಪ್ರಕಾರ ಷರತ್ತುಗಳ ನೆರವೇರಿಕೆಗೆ ಒಳಪಟ್ಟು ತಲಾ 2.5 ಕೋಟಿ ರೂ.ನಂತೆ ಎರಡು ಕಂತುಗಳಲ್ಲಿ ಬಿಡುಗಡೆಯಾಗುತ್ತದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.