ಬೆಂಗಳೂರು, ಮಾ.28 www.bengaluruwire.com : ಲೋಕಸಭಾ ಚುನಾವಣೆಗೆ ಇಂದಿನಿಂದ (ಮಾ.28) ನಾಮಪತ್ರ ಸ್ವೀಕರಿಸುವ ಎಲ್ಲಾ ಚುನಾವಣಾಧಿಕಾರಿಗಳ ಕಛೇರಿಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ, ಏಪ್ರಿಲ್ 8ರ ನಾಮಪತ್ರ ವಾಪಸ್ ಪಡೆಯುವ ತನಕ ಐಪಿಸಿ (ದಂಡ ಪ್ರಕ್ರಿಯಾ ಸಂಹಿತೆ) 144ನೇ ಕಲಂ ಅನ್ವಯ ಪ್ರತಿಬಂಧಕಾಜ್ಞೆಯನ್ನು (Restraining order) ವಿಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಆದೇಶಿಸಿದ್ದಾರೆ.
ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ದಂಡ ಪ್ರಕ್ರಿಯಾ ಸಂಹಿತೆಯ 144ನೇ ಕಲಂ ಅನ್ವಯ ಪ್ರದತ್ತವಾದ ಅಧಿಕಾರವನ್ನು ಉಪಯೋಗಿಸಿ ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ, ಮಾ.28ರ ಬೆಳಗ್ಗೆ 10 ರಿಂದ ಏ.08 ರ ಸಂಜೆ 6 ಗಂಟೆಯವರೆಗೆ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿರುವ ಲೋಕಸಭಾ ಚುನಾವಣೆಗೆ ನಾಮಪತ್ರ ಸ್ವೀಕರಿಸುವ ಎಲ್ಲಾ ಚುನಾವಣಾಧಿಕಾರಿಗಳ ಕಛೇರಿಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಯಲ್ಲಿರುತ್ತದೆ.
144 ಸೆಕ್ಷನ್ ಅನ್ವಯ ಈ ಕೆಳಕಂಡ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ :
1. ಕಾನೂನು ಭಂಗವುಂಟು ಮಾಡುವ ಉದ್ದೇಶದಿಂದ 5 ಅಥವಾ ಅದಕ್ಕಿಂತ ಹೆಚ್ಚು ಜನರುಗುಂಪು ಸೇರುವುದನ್ನು

2. ಮೆರವಣಿಗೆ, ಸಭೆಗಳನ್ನು ನಡೆಸುವುದು ಮತ್ತು ಧನಿವರ್ದಕಗಳು ಬಳಸುವುದನ್ನು

3. ಶಸ್ತ್ರಾಸ್ತ್ರಗಳನ್ನು, ದೊಣ್ಣೆಗಳನ್ನು, ಕತ್ತಿಗಳನ್ನು, ಈಟಿಗಳು, ಗದೆಗಳು, ಕಲ್ಲು, ಇಟ್ಟಿಗೆ, ಚಾಕು ಇನ್ನೂ ಮುಂತಾದ ಮಾರಾಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟುಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು
4. ಯಾವುದೇ ಸಂರಕ್ಷಾರ್ಹ ಪದಾರ್ಥ ಅಥವಾ ಸ್ಪೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲುಗಳನ್ನು ಕ್ಷಿಪಣಿಗಳನ್ನು ಎಸೆಯುವ ಸಾಧನಗಳ ಅಥವಾ ಉಪಕರಣೆಗಳನ್ನು ಒಯ್ಯುವಿಕೆಯನ್ನು ಮತ್ತು ಶೇಖರಿಸುವುದನ್ನು,
5. ವ್ಯಕ್ತಿಗಳ ಅಥವಾ ಅವರ ಶವಗಳ ಪ್ರತಿಕೃತಿಗಳ ಪ್ರರ್ದಶನ ಮಾಡುವುದನ್ನು, ಪ್ರಚೋದಿಸಬಹುದಾದ ಬಹಿರಂಗ ಘೋಷಣೆಗಳನ್ನು ಕೂಗುವುದು, ‘ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರಗಳನ್ನು, ಸಂಕೇತಗಳನ್ನು, ಭಿತ್ತಿಪತ್ರ ಅಥವಾ ಇತರೆ ಯಾವುದೇ ವಸ್ತುಗಳನ್ನು ಅಥವಾ ಪದಾರ್ಥಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.