ಬೆಂಗಳೂರು, ಮಾ.27 www.bengaluruwire.com : ನಗರದ ಗ್ಯಾಸ್ ಏಜನ್ಸಿಯೊಂದರ ಮಾಲೀಕರನ್ನು ಹೆದರಿಸಿ 50 ಸಾವಿರ ಲಂಚ ಪಡೆದ ಪೀಣ್ಯ ಉಪ ವಿಭಾಗದ ಎಸಿಪಿ ವಾಹನ ಚಾಲಕ ನಾಗರಾಜ್ ಮತ್ತು ಪೀಣ್ಯ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಗಂಗಹನುಮಯ್ಯ ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಸಂಜೆ ಬಂಧಿಸಿದ್ದಾರೆ.
ಸುಂಕದಕಟ್ಟೆಯ ಮಾರುತಿನಗರ ನಿವಾಸಿ ಚೇತನ್ ಎಂಬುವವರು ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗ್ಯಾಸ್ ಏಜೆನ್ಸಿ ಹೊಂದಿದ್ದರು. ಗ್ಯಾಸ್ ಸಿಲಿಂಡರ್ ವಿತರಣೆ ಮುಂದುವರಿಸಲು 2 ಲಕ್ಷ ರೂ. ಲಂಚ ಕೊಡುವಂತೆ ಮತ್ತು ಮಾಸಿಕ ಲಂಚವನ್ನೂ ನೀಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ದೂರುದಾರರು ಆರೋಪಿಗಳ ಜತೆ ಮಾತುಕತೆ ನಡೆಸಿದ್ದರು. ಆಗ, ಮೊದಲ ಕಂತಿನಲ್ಲಿ 50,000 ರೂ. ನೀಡುವಂತೆ ಆರೋಪಿಗಳು ಸೂಚಿಸಿದ್ದರು. ಈ ಬಗ್ಗೆ ಚೇತನ್ ಅವರು, ಲೋಕಾಯುಕ್ತದ ಪೊಲೀಸ್ ವಿಭಾಗದ ಬೆಂಗಳೂರು ನಗರ ಘಟಕ-2ಕ್ಕೆ ದೂರು ನೀಡಿದ್ದರು. ಯಶವಂತಪುರದ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆ ಸಮೀಪದ ಟೀ ಅಂಗಡಿಯೊಂದರ ಬಳಿ ಮಂಗಳವಾರ ಸಂಜೆ ಆರೋಪಿಗಳನ್ನು ಭೇಟಿಮಾಡಿದ ದೂರುದಾರರು, 50,000 ರೂ. ನಗದು ತಲುಪಿಸಿದರು. ತಕ್ಷಣ ಲಂಚ ಪಡೆದ ಪೊಲೀಸರ ಮೇಲೆ ದಾಳಿಮಾಡಿದ ಲೋಕಾಯುಕ್ತ ಪೊಲೀಸರು ಆರೋಪಿಗಳನ್ನು ಬಂಧಿಸಿದರು.
ಲೋಕಾಯುಕ್ತದ ಬೆಂಗಳೂರು ನಗರ ಎಸ್‌ಪಿ-2 ಕೋನ ವಂಶಿ ಕೃಷ್ಣ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಉಮಾದೇವಿ, ಇನ್‌ಸ್ಪೆಕ್ಟರ್ ವಿಜಯ್ ಕೃಷ್ಣ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಮತ್ತೊಂದು ಪ್ರಕರಣದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯ್ತಿ, ಖಾನಾಪುರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದುರದುಂಡೇಶ್ವರ ಬನ್ನೂರು ಅವರು, ಕೇಂದ್ರ ಸರ್ಕಾರದ ನರೇಗಾ ಯೋಜನೆಯಡಿ ಕಾಮಗಾರಿ ಆಂದಾಜುಪಟ್ಟಿಗೆ ತಾಂತ್ರಿಕ ಮಂಜೂರಾತಿ ನೀಡಲು 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಖಾನಾಪುರ ತಾಲೂಕು ಕಂಜಾಲೆ ಹಳ್ಳಿಯ ಗ್ರಾಮಪಂಚಾಯಿತಿ ಸದಸ್ಯ ವಿನಾಯಕ ಮುಟಗೇಕರ್ ಅವರು ಬೆಳಗಾವಿಯ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಎಇಇ ಡಿಎಂ ಬನ್ನೂರು ಅವರ ಮನೆಯನ್ನು ಶೋಧಿಸಿದಾಗ ಲೆಕ್ಕಕ್ಕೆ ಸಿಗದ 27.75 ಲಕ್ಷ ರೂ. ಮೌಲ್ಯದ ನಗದು ಹಣ ಪತ್ತೆಯಾಗಿದೆ. ಈ ಪ್ರಕರಣದ ಸಂಬಂಧ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ತನಿಖೆ ಮುಂದುವರೆಸಿದ್ದಾರೆ.