ಬೆಂಗಳೂರು, ಮಾ.26 www.bengaluruwire.com : ದಟ್ಟಣೆ ಅವಧಿಯಲ್ಲಿ ಹೆಬ್ಬಾಳ ಮೇಲ್ಸೇತುವೆ ಮೇಲೆ ಓಡಾಡಲು ವಾಹನ ಸವಾರರು ಒರದಾಡುತ್ತಿದ್ದಾರೆ. ಇದನ್ನು ಪರಿಹರಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಹೆಬ್ಬಾಳ ಫ್ಲೈಓವರ್ ಹೆಚ್ಚುವರಿ ರ್ಯಾಂಪ್ (Addirional Ramps) ಅಳವಡಿಸುವ ಕಾಮಗಾರಿ ಕೈಗೆತ್ತಿಕೊಂಡಿದೆ.
ಹೆಬ್ಬಾಳ ಮೇಲು ಸೇತುವೆಗೆ ಎರಡು ಹೊಸ ಟ್ರ್ಯಾಕ್‌ಗಳನ್ನು ಸೇರಿಸಲು ಉದ್ದೇಶಿಸಿರುವುದರಿಂದ ಕೆ.ಆರ್.ಪುರಂ ಲೂಪ್ ಮುಖ್ಯ ಟ್ರ್ಯಾಕ್ ಬಳಿ ಸೇರುವ ಎರಡು ಸ್ಪ್ಯಾ ನ್ ಗಳನ್ನು ಕಿತ್ತುಹಾಕಲಾಗುತ್ತದೆ. ಇದರಿಂದ ಕೆ.ಆರ್.ಪುರಂ ಲೂಪ್‌ನಲ್ಲಿ ಮುಂದಿನ ನಾಲ್ಕು ತಿಂಗಳವರೆಗೆ ನಗರದ ಕಡೆಗೆ ಸಂಚಾರ ನಿಧಾನವಾಗಲಿದೆ.
ಹಾಗಾಗಿ ಕೆ.ಆರ್.ಪುರಂ ಕಡೆಯಿಂದ ನಗರದ ಕಡೆಗೆ ಬರುವ ಪ್ರಯಾಣಿಕರು ಪರ್ಯಾಯ ಮಾರ್ಗಗಳಾದ ಐ.ಒ.ಸಿ-ಮುಕುಂದ ಥಿಯೇಟರ್ ರಸ್ತೆ, ಲಿಂಗರಾಜಪುರಂ ಮೇಲ್ಸೇತುವೆ ಮಾರ್ಗ, ನಾಗವಾರ-ಟ್ಯಾನರಿ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸುವಂತೆ ನಗರದ ಹೆಬ್ಬಾಳ ಸಂಚಾರ ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ.
ಅದೇ ರೀತಿ ಹೆಗಡೆನಗರ-ಥಣಿಸಂದ್ರ ಕಡೆಯಿಂದ ಬರುವ ಜನರು ಜಿ.ಕೆ.ವಿ.ಕೆ-ಜಕ್ಕೂರು ರಸ್ತೆ ಮೂಲಕ ನಗರ ಪ್ರವೇಶಿಸುವಂತೆ ಸೂಚಿಸಿದ್ದಾರೆ. ಹಲವು ವರ್ಷಗಳಿಂದ ಫ್ಲೈ ಓವರ್ ವಿಸ್ತರಣೆ ಕಾಮಗಾರಿ ಕೇವಲ ಕಾಗದದಲ್ಲಿತ್ತೇ ವಿನಃ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಬಂದು ಹೋಗುವ ಮಾರ್ಗದಲ್ಲಿ ಹೆಬ್ಬಾಳ ಜಂಕ್ಷನ್ ದಿನೇ ದಿನೇ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿರುವ ಕಾರಣ ಬಿಡಿಎ ಗಾಢನಿದ್ದೆಯಿಂದ ಎದ್ದು ಕಾಮಗಾರಿ ಕೈಗೆತ್ತಿಕೊಂಡಿದೆ.