ನವದೆಹಲಿ, ಮಾ.24 www.bengaluruwire.com : ಚಂದ್ರಯಾನ-3 ಲ್ಯಾಂಡಿಂಗ್ ಮಾಡಿದ ಸ್ಥಳವನ್ನು ‘ಶಿವ ಶಕ್ತಿ’ ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಸುಮಾರು ಏಳು ತಿಂಗಳ ನಂತರ, ಮಾರ್ಚ್ 19 ರಂದು ಅಂತರರಾಷ್ಟ್ರೀಯ ಖಗೋಳ ಒಕ್ಕೂಟ (IAU) ಈ ಹೆಸರನ್ನು ಅಧಿಕೃತವಾಗಿ ಅನುಮೋದಿಸಿದೆ.
ಆಗಸ್ಟ್ 23, 2023 ರಂದು ವಿಕ್ರಮ್‌ನ ಐತಿಹಾಸಿಕ ಚಂದ್ರನಲ್ಲಿ ಇಳಿದ ಮೂರು ದಿನಗಳ ನಂತರ ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC – ಇಸ್ಟ್ರಾಕ್) ನಲ್ಲಿ ಮೋದಿ ಈ ಘೋಷಣೆ ಮಾಡಿದ್ದರು.
“…ಶಿವನಲ್ಲಿ, ಮಾನವೀಯತೆಯ ಕಲ್ಯಾಣಕ್ಕಾಗಿ ಸಂಕಲ್ಪವಿದೆ ಮತ್ತು ಶಕ್ತಿಯು ಆ ನಿರ್ಣಯಗಳನ್ನು ಪೂರೈಸಲು ನಮಗೆ ಶಕ್ತಿಯನ್ನು ನೀಡುತ್ತದೆ. ಚಂದ್ರನ ಈ ಶಿವಶಕ್ತಿ ಬಿಂದುವು ಹಿಮಾಲಯದಿಂದ ಕನ್ಯಾಕುಮಾರಿಗೆ ಸಂಪರ್ಕವನ್ನು ನೀಡುತ್ತದೆ ಎಂದು ಮೋದಿ ಹೇಳಿದ್ದರು.
ಗ್ರಹಗಳ ನಾಮಕರಣದ ಗೆಜೆಟಿಯರ್ ಪ್ರಕಟಣೆಯ ಪ್ರಕಾರ, ಹೆಸರಿನ ಮೂಲವನ್ನು ಹೀಗೆ ವ್ಯಾಖ್ಯಾನಿಸಲಾಗಿದೆ : “ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳವನ್ನು ಹೆಸರಿಸಿದ ಶಿವಶಕ್ತಿ ಎಂಬುದಾಗಿ ಇಟ್ಟ ಈ ಹೆಸರು, ಭಾರತೀಯ ಪುರಾಣದ ಸಂಯುಕ್ತ ಪದವಾಗಿದ್ದು, ಪುಲ್ಲಿಂಗ (“ಶಿವ”) ಮತ್ತು ಸ್ತ್ರೀಲಿಂಗ (“ಶಕ್ತಿ”) ಪ್ರಕೃತಿಯ ದ್ವಂದ್ವವನ್ನು ಚಿತ್ರಿಸುತ್ತದೆ.” ಎಂದು ತಿಳಿಸಲಾಗಿದೆ.
ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್‌ಗೆ ಹದಿನೈದು ವರ್ಷಗಳ ಮೊದಲು, ಭಾರತದ ಚಂದ್ರಯಾನ-1 ರ ಉಪಗ್ರಹ 2008ರ ನವೆಂಬರ್ 14 ರಂದು ಚಂದ್ರನ ಮೇಲ್ಮೈನ ದಕ್ಷಿಣ ಧೃವಕ್ಕೆ ಬಡಿಯಿತು ಪ್ರಭಾವ ಬೀರಿತ್ತು. ಚಂದ್ರನಲ್ಲಿ ಇಳಿದ ಇಂಪ್ಯಾಕ್ಟ್ ಪ್ರೋಬ್ ನ ಈ ಸ್ಥಳವನ್ನು ಅಂತರರಾಷ್ಟ್ರೀಯ ಖಗೋಳ ಒಕ್ಕೂಟ (IAU) ‘ಜವಾಹರ್ ಪಾಯಿಂಟ್’ ಅಥವಾ ‘ಜವಾಹರ್ ಸ್ಥಲ್’ ಎಂದು ಕರೆದಿತ್ತು.
ಶಿವಶಕ್ತಿಯ ಹೊರತಾಗಿ, ಚಂದ್ರಯಾನ-2 ತನ್ನ ಹೆಜ್ಜೆಗುರುತುಗಳನ್ನು ಬಿಟ್ಟ ಬಿಂದುವನ್ನು ‘ತಿರಂಗ’ ಎಂದು ಕರೆಯಲಾಗುವುದು ಎಂದು ಮೋದಿ ಅಂದು ಘೋಷಿಸಿದ್ದರು. ಭಾರತ ಮಾಡುವ ಪ್ರತಿಯೊಂದು ಪ್ರಯತ್ನಕ್ಕೂ ಇದು ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ವೈಫಲ್ಯವು ಅಂತ್ಯವಲ್ಲ ಎಂಬುದನ್ನು ನೆನಪಿಸುತ್ತದೆ ಎಂದು ಅವರು ಹೇಳಿದ್ದರು
“ಟಚ್‌ಡೌನ್ ಕ್ಷಣ” ಈ ಶತಮಾನದ ಅತ್ಯಂತ ಸ್ಪೂರ್ತಿದಾಯಕ ಕ್ಷಣಗಳಲ್ಲಿ ಒಂದಾಗಿದೆ ಎಂದು ಹೇಳಿದ ಮೋದಿ, ಇಡೀ ಜಗತ್ತು ಭಾರತದ ವೈಜ್ಞಾನಿಕ ಮನೋಭಾವ, ತಂತ್ರಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮದ ಶಕ್ತಿಯನ್ನು ವೀಕ್ಷಿಸುತ್ತಿದೆ ಮತ್ತು ಸ್ವೀಕರಿಸುತ್ತಿದೆ ಎಂದು ತಮ್ಮ ಭಾಷಣದಲ್ಲಿ ವಿವರಿಸಿದ್ದರು. ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, “ಈ ಐತಿಹಾಸಿಕ ಘಟನೆಯ ಬಗ್ಗೆ ಪ್ರಧಾನಿ ಭಾವುಕರಾಗಿದ್ದರು ಮತ್ತು ಎರಡು ಸೈಟ್‌ಗಳ ನಾಮಕರಣವನ್ನು ತಿಳಿದು ನಮಗೆಲ್ಲರಿಗೂ ತುಂಬಾ ಸಂತೋಷವಾಗಿದೆ” ಎಂದು ಹೇಳಿದ್ದನ್ನು ನಾವಿಲ್ಲಿ ಜ್ಞಾಪಕದಲ್ಲಿಟ್ಟುಕೊಳ್ಳಬೇಕಿದೆ.