ಬೆಂಗಳೂರು ಮಾ.24 www.bengaluruwire.com : ಕುಡಿಯುವ ನೀರಿನ ಕೊರತೆಯಿಂದ ಮೊದಲೇ ಕಂಗೆಟ್ಟಿರುವ ಬೆಂಗಳೂರಿಗೆ ಕಾವೇರಿ ನೀರಿನ ಪೂರೈಕೆಯಲ್ಲಿ ಆಗಬಹುದಾಗಿದ್ದ ದೊಡ್ಡ ವ್ಯತ್ಯಯವನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಜಲಮಂಡಳಿ (BWSSB) ಅಧಿಕಾರಿಗಳ ಸಮಯೋಚಿತ ಕಾರ್ಯಾಚರಣೆಯ ಮೂಲಕ ನಿವಾರಿಸಿದ್ದಾರೆ.
ಶಿಂಷಾ ಗೂ ಹಾಗೂ ಬೆಂಗಳೂರಿಗೂ ಕಾವೇರಿ ನೀರು ಸರಬರಾಜು ಮಾಡುವ ನೆಟ್ಕಲ್ಲಪ್ಪ ಜಲಾಶಯದ (NBR) ಪ್ರಮುಖ ನಾಲೆಗಳ ಪಾತ್ರದಲ್ಲಿ ಬೆಳೆದುಕೊಂಡಿರುವ ಜೊಂಡು (ನೀರಿನಲ್ಲಿ ಬೆಳೆಯುವ ಸಸ್ಯಗಳು) ಕಾವೇರಿ ನೀರಿನ ಪೈಪ್ಲೈನ್ ನಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ನೀರಿನ ಹರಿವಿನಲ್ಲಿ ತೊಂದರೆ ಎದುರಾಗಿತ್ತು. ನಿನ್ನೆ ರಾತ್ರಿ ಏಕಾಏಕಿ ಬೀಸಿದ ಗಾಳಿಯ ಪರಿಣಾಮ ನೀರಿನಲ್ಲಿದ್ದ ಕಳೆ ಗಿಡಗಳು ನಾಲೆಯ ಪ್ರವೇಶದ ಹರಿವಿನಲ್ಲಿ ಸಿಕ್ಕಿಕೊಂಡು, ಬೆಂಗಳೂರಿಗೆ ನೀರು ಸರಬರಾಜು ಆಗುತ್ತಿದ್ದ ಪ್ರಮುಖ ನಾಲೆಯಲ್ಲಿ ನೀರಿನ ಹರಿವನ್ನು ಶೇಕಡಾ 50 ರಷ್ಟು ಇಳಿಸಿದ್ದವು.
ಇದರ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಜಲಮಂಡಳಿ ಅಧ್ಯಕ್ಷರು ವಿಶೇಷ ತಂಡಕ್ಕೆ ತುರ್ತಾಗಿ ರಿಪೇರಿ ನಡೆಸುವಂತೆ ಸೂಚಿಸಿದ್ದರು. ಸಿಬ್ಬಂದಿಗಳು ಯುದ್ದೋಪಾದಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಳೆಗಳಿಂದ ಆಗಿದ್ದ ಹರಿವಿನ ತಡೆಯನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 2 ಗಂಟೆಯ ವರೆಗೆ ಮಧ್ಯರಾತ್ರಿಯಲ್ಲಿ ಕಾರ್ಯಾಚರಣೆ ಮಾಡಿರುವ ಸಿಬ್ಬಂದಿಗಳು ಆಗಿದ್ದ ತೊಂದರೆಯನ್ನು ಸರಿಪಡಿಸಿದ್ದಾರೆ. ಸರಿಯಾದ ಸಮಯದಲ್ಲಿ ಈ ತೊಂದರೆಯನ್ನು ನಿವಾರಿಸದೇ ಇದ್ದಲ್ಲಿ, ನಗರಕ್ಕೆ 1000 ಎಂಎಲ್ಡಿ ಯಷ್ಟು ನೀರು ಕೊರತೆ ಉಂಟಾಗುತ್ತಿತ್ತು. ಇದನ್ನ ಈಗ 100 ಎಂಎಲ್ಡಿ ಗೆ ಇಳಿಸಲಾಗಿದೆ. 100 ಎಂಎಲ್ಡಿ ಕೊರತೆಯಿಂದ ನಗರದ ಕೆಲವೇ ಭಾಗದಲ್ಲಿ ಇಂದು ಮತ್ತು ನಾಳೆ ಕಾವೇರಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ. ಆದರೆ, ನಗರದ ಬಹುತೇಕ ಪ್ರದೇಶಗಳಲ್ಲಿ ನೀರಿನ ಸರಬರಾಜು ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ.
ನೀರು ಪೂರೈಕೆಯಲ್ಲಿನ ವ್ಯತ್ಯಯ ಆಗಿರುವ ಕಡೆಗಳಲ್ಲಿ ಜಲಮಂಡಳಿಯು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಿದೆ. ಆಕಸ್ಮಿಕವಾಗಿ ಆಗಿರುವ ತಾಂತ್ರಿಕ ತೊಂದರೆಯಿಂದ ಜನರಿಗೆ ಆಗಿರುವ ಅನಾನುಕೂಲಕ್ಕೆ ಜಲಮಂಡಳಿ ವಿಷಾದ ವ್ಯಕ್ತಪಡಿಸಿದೆ. ಜಲಮಂಡಳಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮಯೋಚಿತ ಕಾರ್ಯಕ್ಕೆ ನಗರದ ಜನತೆಯ ಪರವಾಗಿ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅಭಿನಂದಿಸಿದ್ದಾರೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.