ಬೆಂಗಳೂರು, ಮಾ.23 www.bengaluruwire.com : ರಾಜ್ಯದ ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ 2022-23ನೇ ಸಾಲಿನ ಮಿಕ್ಕುಳಿದ 3064 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾಂತ್ರಿಕ ಕಾರಣಗಳಿದಾಗಿ ಮುಂದೂಡಲಾಗಿದ್ದ ಪರೀಕ್ಷೆಗಳ ಬಗ್ಗೆ ಯಾರೋ ಕಿಡಿಗೇಡಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಇದಕ್ಕೆ ಕಿವಿಗೊಡಬಾರದು ಎಂದು ನೇಮಕಾತಿ ವಿಭಾಗದ ಹೆಚ್ಚುವರಿ ಮಹಾ ನಿರ್ದೇಶಕರು (ADGP) ತಿಳಿಸಿದ್ದಾರೆ.
ಮಾ.18, 19 ಹಾಗೂ ಮಾ.20 ರಂದು ದೈಹಿಕ ಸಾಮರ್ಥ್ಯ ಮತ್ತು ದೈಹಿಕ ಸಹಿಷ್ಣುತೆ (ಪಿ.ಎಸ್.ಟಿ- PST ಮತ್ತು ಪಿ.ಇ.ಟಿ – PET) ಪರೀಕ್ಷೆಗಳನ್ನು ನಿಗಧಿಪಡಿಸಲಾಗಿತ್ತು. ತಾಂತ್ರಿಕ ಕಾರಣಗಳಿದಾಗಿ ಆ ದಿನಗಳಂದು ನಡೆಯಬೇಕಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಈ ಸಂಬಂಧ ನೇಮಕಾತಿ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಕಛೇರಿಯಿಂದ ಎಲ್ಲಾ ಸಂಬಂಧಿಸಿದ ಘಟಕಗಳಿಗೆ ಸಂದೇಶವನ್ನು ರವಾನಿಸಲಾಗಿತ್ತು.
ಆದರೆ, ಎಡಿಜಿಪಿಯವರು ಸಹಿ ಮಾಡಿ ನೀಡಿದ ಸಂದೇಶವನ್ನು ಯಾರೋ ನಕಲು (Forgery) ಮಾಡಿ ಪಿ.ಎಸ್.ಟಿ ಮತ್ತು ಪಿ.ಇ.ಟಿ ಪರೀಕ್ಷೆಗಳನ್ನು ಮಾ.25, 26 ಹಾಗೂ ಮಾ.27 ರಂದು ನಡೆಸಲು ನಿಗಧಿಪಡಿಸಲಾಗಿರುತ್ತದೆ ಎಂದು ನಕಲು ದಾಖಲಾತಿಯನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಡಿ, ಅಭ್ಯರ್ಥಿಗಳಿಗೆ ಹಾಗೂ ಅಧಿಕಾರಿಗಳಿಗೆ ದಾರಿ ತಪ್ಪಿಸಲಾಗಿದೆ. ಆದರೆ ಈ ರೀತಿ ಬದಲಿ ದಿನಾಂಕಗಳನ್ನು ನೇಮಕಾತಿ ವಿಭಾಗವು ನಿಗದಿಪಡಿಸಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಆದ್ದರಿಂದ, ಈ ಸಂಬಂಧ ಬೆಂಗಳೂರು ನಗರದ ಕೇಂದ್ರ ವಿಭಾಗದ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ತಪ್ಪು ಮಾಹಿತಿ ನೀಡಿರುವವರ ವಿರುದ್ಧ ತನಿಖೆ ನಡೆಸಲು ಪ್ರಕರಣ ದಾಖಲಿಸಲಿದ್ದಾರೆ. ಅಭ್ಯರ್ಥಿಗಳು ಈ ರೀತಿಯ ಯಾವುದೇ ತಪ್ಪು ಮಾಹಿತಿಗೆ ಕಿವಿಗೊಡಬಾರದು. ನೇಮಕಾತಿಗೆ ಸಂಬಂಧಿಸಿದ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್ https://ksp-recruitment.in ಅನ್ನು ವೀಕ್ಷಿಸಿ ಅಥವಾ ಸಹಾಯವಾಣಿ ಸಂಖ್ಯೆ: 080-22943346 ಮತ್ತು 080-22943039 ಮುಖಾಂತರ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.