ಬೆಂಗಳೂರು, ಮಾ.22 www.bengaluruwire.com : ನಗರದ ದೊಡ್ಡನೆಕ್ಕುಂದಿಯಲ್ಲಿ ಮನೆ ಮುಂದಿನ ಖಾಲಿ ನಿವೇಶನದಲ್ಲಿ ಕಾರು ನಿಲ್ಲಿಸಿದರೆಂಬ ಕಾರಣಕ್ಕೆ ದಂಪತಿಗಳಿಬ್ಬರಿಗೆ ಮನೆಯವರೆಲ್ಲ ಸೇರಿ ನಿಂದಿಸುತ್ತಾ, ಮನಸೋ ಇಚ್ಛೆ ಹೊಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಳಗಾವಿಯಿಂದ ಇತ್ತೀಚೆಗಷ್ಟೇ ನಗರಕ್ಕೆ ಬಂದಿದ್ದ ದಂಪತಿಗಳು, ದೊಡ್ಡ ನೆಕ್ಕುಂದಿಯಲ್ಲಿನ ಖಾಲಿ ನಿವೇಶದಲ್ಲಿ ಮಾ.17ರಂದು ಕಾರು ನಿಲ್ಲಿಸಿದ್ದರು. ಇದರಿಂದ ಕುಪಿತರಾದ ಮನೆಯೊಂದರ ಮಾಲೀಕ ಹಾಗೂ ಆತನ ಮನೆಯವರೆಲ್ಲ ಸೇರಿ ದಂಪತಿಗಳಿಬ್ಬರ ಮೇಲೆ ಅವ್ಯಾಚ್ಯ ಶಬ್ದಗಳಿಂದ ಬೈಯ್ಯುತ್ತಾ, ಹಲ್ಲೆ ನಡೆಸಿದ್ದಾರೆ ಎಂದು ಎಕ್ಸ್ ನಲ್ಲಿ ಅನಘ ಎಂಬುವರು ಮಾ.18ರಂದು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ನಲ್ಲಿ, “ಆ ಮನೆಯ ಮತ್ತೊಬ್ಬ ಮಹಿಳೆ, ಹಲ್ಲೆಗೊಳಗಾದ ಮಹಿಳೆಯ ಬಟ್ಟೆಯನ್ನು ಬಿಚ್ಚಲು ಪ್ರಯತ್ನ ಮಾಡುತ್ತಾ, ಆಕೆಯನ್ನು ಹೊಡೆಯುತ್ತಾ, ಈ ಬೆಂಗಳೂರು ನಮಗೆ ಸೇರಿದ್ದು, ಈ ಸ್ಥಳ ಬಿಟ್ಟು ಹೋಗುವಂತೆ ಬೈಯ್ಯುತ್ತಾ ಹೇಳುತ್ತಿದ್ದರು. ಅವರು ಬಳಸಿದ ಅವಾಚ್ಯ ಭಾಷೆಗಳನ್ನು ಇಲ್ಲಿ ತಿಳಿಸುತ್ತಿಲ್ಲ. ಈ ಯುವ ದಂಪತಿಗಳು ಸಾಕಷ್ಟು ಹೆದರಿದ್ದು ಪೊಲೀಸರು ಆದಷ್ಟು ಶೀಘ್ರವಾಗಿ ಮಧ್ಯಸ್ಥಿಕೆ ವಹಿಸಬೇಕಿದೆ” ಎಂದು ಅವರು ತಿಳಿಸಿದ್ದಾರೆ.
ಈ ಪೋಸ್ಟ್ ಗೆ ಕಮೆಂಟ್ ಮಾಡಿರುವ ಮತ್ತೊಂದು ಎಕ್ಸ್ ಖಾತೆದಾರರು, “ಇಲ್ಲಿ ಪರಿಸ್ಥಿತಿ ಕೆಟ್ಟದಾಗುತ್ತಿದೆ. ಖಾಲಿ ಜಾಗಗಳಲ್ಲಿ ವಾಹನ ನಿಲುಗಡೆಗೆ ಪೊಲೀಸರು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಬೇಕು. ಈ ರೌಡಿ ಪುರುಷ ಮತ್ತು ಮಹಿಳೆಯನ್ನು ಕಂಬಿ ಹಿಂದೆ ಇಡಬೇಕು. ಪೊಲೀಸರು ಕ್ರಮ ಕೈಗೊಳ್ಳುತ್ತಾರಾ?” ಎಂದು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು ನಗರ ಪೊಲೀಸರು ಈ ಎಕ್ಸ್ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿದ್ದು, ಎಚ್ ಎಎಲ್ ಪೊಲೀಸರಿಗೆ ನಿಮ್ಮ ದೂರನ್ನು ಹಸ್ತಾಂತರಿಸುತ್ತಿರುವುದಾಗಿ ತಿಳಿಸಿದ್ದಾರೆ.