ಬೆಂಗಳೂರು, ಮಾ.20 www.bengaluruwire.com : ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಮಾ.25ರಂದು ನಡೆಯುವ ಹೋಳಿಹಬ್ಬದಲ್ಲಿ ರೈನ್ ಡ್ಯಾನ್ಸ್ ಮತ್ತು ಪೂಲ್ ಡ್ಯಾನ್ಸ್ ಗೆ ಕಾವೇರಿ ನೀರು ಹಾಗೂ ಕೊಳವೆಬಾವಿ ನೀರು ಬಳಸದಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಾರ್ವಜನಿಕರಿಗೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಹೊರವಲಯ ಮತ್ತು ಕೇಂದ್ರ ಭಾಗದ ಕೆಲವೊಂದು ಏರಿಯಾಗಳಲ್ಲಿ ವ್ಯಾಪಕ ನೀರಿನ ಸಮಸ್ಯೆ ತಲೆದೋರಿ ಜಲಮಂಡಳಿಯು ಉಚಿತವಾಗಿ ಕೊಳಗೇರಿ ಮತ್ತಿತರ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದೆ. ಕಳೆದ ವರ್ಷವೂ ನಗರದಲ್ಲಿ ವಾಡಿಕೆಯಷ್ಟು ಮಳೆಯಾಗದ ಕಾರಣ ಕೆರೆ- ಕಟ್ಟೆ, ಅಂತರ್ಜಲ ಮಟ್ಟವು ಕುಸಿದ ಕಾರಣ ಹಲವು ಕಡೆಗಳಲ್ಲಿ ಬೋರ್ ವೆಲ್ ನಲ್ಲಿ ನೀರಿಲ್ಲದೆ ಸ್ಧಗಿತಗೊಂಡಿವೆ.
ಮುಂಬರುವ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಸಲಹಾ ರೂಪದ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ಮಂಡಳಿಯು ಹೋಳಿ ಹಬ್ಬ ಸಾಂಸ್ಕೃತಿಕವಾದ ಆಚರಣೆಯ ಹಬ್ಬ. ಇದನ್ನ ತಮ್ಮ ಮನೆಗಳಲ್ಲಿ, ವಾಸಸ್ಥಳಗಳಲ್ಲಿ ಆಚರಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ. ಸಾಂಸ್ಕೃತಿವಾಗಿ ಆಚರಣೆ ಮಾಡುವುದಕ್ಕೆ ಯಾವುದೇ ನಿಷೇಧ ಹೇರುವುದಿಲ್ಲ. ಆದರೆ, ಈ ಸಂದರ್ಭದಲ್ಲಿ ಮನೋರಂಜನೆಯಾಗಿ ವಾಣಿಜ್ಯ ಉದ್ದೇಶದಿಂದ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಆಯೋಜಿಸುವುದು ಸಮಂಜಸವಾಗಿರುವುದಿಲ್ಲ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.
ಮನೋರಂಜನೆಗಾಗಿ ವಾಣಿಜ್ಯ ಉದ್ದೇಶದಿಂದ ಆಯೋಜಿಸುವಂತಹ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಗಳಿಗೆ ಸಾರ್ವಜನಿಕ ಹಿತದೃಷ್ಠಿಯಿಂದ ಕಾವೇರಿ ನೀರು ಹಾಗೂ ಬೋರ್ ವೆಲ್ ನೀರು ಬಳಸದಂತೆ ಈ ಮೂಲಕ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.