ನವದೆಹಲಿ, ಮಾ.20 www.bengaluruwire.com : ದೇಶ ವಿದೇಶಗಳಲ್ಲಿ ಖ್ಯಾತಿ ಹೊಂದಿರುವ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ( Popular spiritual guru Sadhguru Jaggi Vasudev ) ಅವರು ದೆಹಲಿಯ ಅಪೋಲೋದಲ್ಲಿ ಇತ್ತೀಚೆಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ವಿಷಯ ಬಹಿರಂಗವಾಗಿದೆ. ಪ್ರಸ್ತುತ ಅವರು ಚೇತರಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಮಾರ್ಚ್ 17ರಂದು ಮೆದುಳಿನಲ್ಲಿ ಭಾರಿ ಊತ ಮತ್ತು ರಕ್ತಸ್ರಾವ ಪತ್ತೆಯಾದ ನಂತರ ಅವರನ್ನು ದೆಹಲಿಯ ಅಪೊಲೊಗೆ ದಾಖಲಿಸಲಾಗಿತ್ತು. ಬಳಿಕ ತುರ್ತಾಗಿ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ಚೇತರಿಸಿಕೊಂಡಿರುವ ಆಧ್ಯಾತ್ಮ ಗುರು ಜಗ್ಗಿ ವಾಸುದೇವ್ “ಅಪೋಲೋ ಆಸ್ಪತ್ರೆಯ ನರರೋಗ ತಜ್ಞರು ನನ್ನ ತಲೆಬುರುಡೆಯನ್ನು ಕತ್ತರಿಸಿ ಏನೋ ಹುಡುಕಲು ಪ್ರಯತ್ನಿಸಿದರು. ಆದರೆ ಅವರಿಗೇನು ಸಿಗಲಿಲ್ಲ” ಎಂದು ನಕ್ಕು, “ಒಳಗೆ ಪೂರ್ತಿ ಖಾಲಿಯಿತ್ತು. ಹಾಗಾಗಿ ಕತ್ತರಿಸಿದ ತಲೆ ಬುರುಡೆಯ ಭಾಗವನ್ನು ಪುನಃ ಹಾಗೆಯೇ ಹೊಲಿಗೆ ಹಾಕಿದರು. ನಾನೀನ ನವದೆಹಲಿಯಲ್ಲಿ ತಲೆಬುರುಡೆಗೆ ತೇಪೆ ಹಾಕಿಸಿಕೊಂಡಿದ್ದೇನೆ. ಆದರೆ ಮೆದುಳಿಗೆ ಯಾವ ಹಾನಿಯಾಗಿಲ್ಲ” ಎಂದು ಅವರ ಹೇಳಿಕೆಯನ್ನು ಸದ್ಗುರುಗಳ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಪತ್ರಕರ್ತ ಆನಂದ್ ನರಸಿಂಹನ್ ಅವರು ಸದ್ಗುರು ಅವರ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಕಳೆದ ಹಲವಾರು ದಿನಗಳಿಂದ ಸದ್ಗುರುಗಳು ತೀವ್ರ ತಲೆನೋವಿನಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.
ಪುನರಾವರ್ತಿತ ವಾಂತಿ ಮತ್ತು ಉಲ್ಬಣಗೊಂಡ ತಲೆನೋವಿನ ನಂತರ ಅವರ ಆರೋಗ್ಯವು ವೇಗವಾಗಿ ಹದಗೆಟ್ಟಿತು. ಆಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಗುರು ಜಗ್ಗಿ ವಾಸುದೇವ್ ಅವರನ್ನು ನವದೆಹಲಿಯ ಅಪೊಲೊ ಆಸ್ಪತ್ರೆಯ ನರರೋಗ ತಜ್ಞ ಡಾ.ವಿನೀತ್ ಸೂರಿ ಪರೀಕ್ಷಿಸಿ, ಎಂಆರ್‌ಐಗೆ ಸಲಹೆ ನೀಡಿದ್ದರು. ಪರೀಕ್ಷೆಯ ನಂತರ ಸದ್ಗುರುಗಳ ಅವರ ಮೆದುಳಿನಲ್ಲಿ ಭಾರಿ ರಕ್ತಸ್ರಾವ ಪತ್ತೆಯಾಗಿದೆ. ಸಿಟಿ ಸ್ಕ್ಯಾನ್ ರಕ್ತಸ್ರಾವದ ಜೊತೆಗೆ ಅವರ ಮೆದುಳಿನಲ್ಲಿ ಗಂಭೀರ ಊತವಾಗಿದ್ದನ್ನು ಬಹಿರಂಗಪಡಿಸಿತ್ತು.
ಅಪೋಲೋ ದೆಹಲಿಯ ವೈದ್ಯರಾದ ಡಾ.ವಿನೀತ್ ಸೂರಿ, ಡಾ.ಪ್ರಣವ್ ಕುಮಾರ್, ಡಾ.ಸುಧೀರ್ ತ್ಯಾಗಿ ಮತ್ತು ಡಾ.ಎಸ್.ಚಟರ್ಜಿ ಅವರ ತಂಡವು ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿತು. ಶಸ್ತ್ರಚಿಕಿತ್ಸೆಯ ನಂತರ, ಸದ್ಗುರು ಅವರಿಗೆ ಅಳವಡಿಸಿದ್ದ ವೆಂಟಿಲೇಟರ್ ತೆಗೆಯಲಾಯಿತು. ಈಗ ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಹಾಗೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.
“ಕೆಲವು ದಿನಗಳ ಹಿಂದೆ, ಸದ್ಗುರುಗಳು ಮೆದುಳಿನಲ್ಲಿ ಜೀವಕ್ಕೆ ಅಪಾಯಕಾರಿ ರಕ್ತಸ್ರಾವದ ನಂತರ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಗುರುಗಳು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅವರ ಸ್ಥಿತಿ ನಿರೀಕ್ಷೆಗೂ ಮೀರಿ ಸುಧಾರಿಸುತ್ತಿದೆ” ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡವು ಹೇಳಿದೆ. ಇನ್ನು ಡಾ.ವಿನೀತ್ ಸೂರಿ ಅವರು ಸದ್ಗುರು ಜಗ್ಗಿ ವಾಸುದೇವ್ ಆರೋಗ್ಯ ಸ್ಥಿತಿ ಕುರಿತಂತೆ ನೀಡಿದ ಹೇಳಿಕೆಯನ್ನು ಇಶಾ ಫೌಂಡೇಷನ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.