ಹೊಸಕೋಟೆ, ಮಾ.19 www.bengaluruwire.com : ತಾಲ್ಲೂಕಿನ ದೊಡ್ಡಗಟ್ಟಗನಬ್ಬೇ ಗ್ರಾಮ ಪಂಚಾಯ್ತಿಯ ಜಿನ್ನಾಗರ ಹೊರವಲಯದಲ್ಲಿನ ಪ್ಲಾಸ್ಟಿಕ್ ಸಂಗ್ರಹಣಾ ಕೇಂದ್ರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಂಗಡಣೆಯಲ್ಲಿ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವುದಾಗಿ ದೂರು ಬಂದ ಹಿನ್ನಲೆಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆ ಅಧಿಕಾರಿಗಳು ಇತರೆ ಇಲಾಖೆಗಳ ಜೊತೆ ಸೇರಿ ಜಂಟಿ ದಾಳಿ ನಡೆಸಿ 5 ಬಾಲಕಾರ್ಮಿಕರನ್ನು ರಕ್ಷಿಸಿದ್ದಾರೆ.
ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್ ಗಳ ಇಲಾಖೆ, ಪೊಲೀಸ್ ಇಲಾಖೆ ಮತ್ತು ಮಕ್ಕಳ ಸಹಾಯವಾಣಿ ಜಂಟಿ ದಾಳಿಯಲ್ಲಿ ಭಾಗಿಯಾಗಿದ್ದವು. ರಕ್ಷಿಸಲಾದ ಬಾಲ ಕಾರ್ಮಿಕರನ್ನು ತಾತ್ಕಾಲಿಕ ಪುನರ್ವಸತಿಗಾಗಿ ಸರ್ವೋದಯ ಸರ್ವೀಸ್ ಸೊಸೈಟಿ ಹಾಗೂ ಸ್ನೇಹ ಭಾರತಿ ಶಿಕ್ಷಣ ಸಂಸ್ಥೆಯ ತೆರೆದ ಮಕ್ಕಳ ತಂಗುದಾಣದಲ್ಲಿ ಪುನರ್ವಸತಿ ಗೊಳಿಸಲಾಗಿರುತ್ತದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗೇಂದ್ರ ಹೆಚ್.ಆರ್, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಸುಬ್ಬರಾವ್.ಎಸ್, ಕಾರ್ಮಿಕ ನಿರೀಕ್ಷಕ ಯತೀಶ ಕುಮಾರ್, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ನಂಜಪ್ಪ ಮತ್ತಿತರರು ಹಾಜರಿದ್ದರು.