ಬೆಂಗಳೂರು, ಮಾ.19 www.bengaluruwire.com : ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ಈ ಮಧ್ಯೆ ಪ್ರಸ್ತುತ ಹವಾಮಾನ ಪರಿಸ್ಥಿತಿಗಳ ಅನ್ವಯ, ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಭಾಗಗಳಲ್ಲಿ 19ನೇ ಮಾರ್ಚ್ ರಿಂದ 24ನೇ ತಾರೀಖಿನ ಅವಧಿಯಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ.
ಮಾ.19ರಿಂದ ಮುಂದಿನ ಮೂರು ದಿನ ಕೊಡಗು ಮತ್ತು ಮೈಸೂರಿನಲ್ಲಿ ಸಾಧಾರಣ ಮಳೆ ಬೀಳಲಿದೆ. ಮಾ.22ರಿಂದ ಮುಂದಿನ ಎರಡು ದಿನ ಬೆಂಗಳೂರು, ಬೆಂ. ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಹಾಸನ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಮತ್ತು ವಿಜಯನಗರದಲ್ಲಿ ಮಳೆ ಸುರಿಯಲಿದೆ. ಮಾ.23 ಮತ್ತು 24ರಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಕೆಎಸ್ ಎನ್ ಡಿಎಂಸಿ ತಿಳಿಸಿದೆ.
ರಾಜ್ಯದಲ್ಲಿ ನಿಧಾನವಾಗಿ ಉಷ್ಣಾಂಶ ಹೆಚ್ಚಳ :
ರಾಜ್ಯದಲ್ಲಿ ನಿಧಾನವಾಗಿ ತಾಪಮಾನ ಹೆಚ್ಚುತ್ತಿರುವುದರಿಂದ ಜನರು ತತ್ತರಿಸುವಂತಾಗಿದೆ. ಯಾದಗಿರಿ, ವಿಜಯಪುರ, ರಾಯಚೂರು, ಕಲಬುರಗಿ, ಗದಗ, ಬಾಗಲಕೋಟೆ, ಬಳ್ಳಾರಿ ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ವಾರ ವಾಡಿಕೆಗಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ದಾಖಲಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ವಾಡಿಕೆಯಂತೆ ಗರಿಷ್ಠ ತಾಪಮಾನದಲ್ಲಿ 36-37 ಡಿಗ್ರಿ ಸೆಲ್ಸಿಯಸ್ವರೆಗೆ ಉಷ್ಣಾಂಶ ದಾಖಲಾಗಲಿದೆ. ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಸರಾಸರಿ 35 ಡಿಗ್ರಿ ಸೆಲ್ಸಿಯಸ್ವರೆಗೆ ಉಷ್ಣಾಂಶ ಕಾಣಿಸಿಕೊಳ್ಳಲಿದೆ. ಮೈಸೂರು, ಮಂಡ್ಯ ಸೇರಿ ದಕ್ಷಿಣ ಕರ್ನಾಟಕದ ಒಂದೆರೆಡು ಜಿಲ್ಲೆಗಳಲ್ಲಿ 36-37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ.
ಫೆಬ್ರವರಿಯಲ್ಲಿ ಜಿಲ್ಲಾವಾರು ಸರಾಸರಿ ಗರಿಷ್ಠ ತಾಪಮಾನವು ಕಳೆದ 2 ವರ್ಷಗಳಿಗಿಂತ (2022 & 2023) 2024 ರಲ್ಲಿ ಹೆಚ್ಚಾಗಿದೆ. ದಕ್ಷಿಣ ಕರ್ನಾಟಕದ ಒಳನಾಡು, ಉತ್ತರ ಕರ್ನಾಟಕದ ಒಳನಾಡು ಪ್ರದೇಶದ ಜಿಲ್ಲೆಗಳು, ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಉಷ್ಣಾಂಶ 2024ರ ಫೆಬ್ರವರಿಯಲ್ಲಿ ಏರಿಕೆಯಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.
ಈ ಬಾರಿ ಉತ್ತಮ ಮುಂಗಾರು ಮಳೆ ಸಾಧ್ಯತೆ :
ಕಳೆದ ವರ್ಷ ತೀವ್ರ ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಬರ ಕಾಣಿಸಿಕೊಂಡಿತ್ತು. ಆದರೆ, ಈ ಬಾರಿ ಮುಂಗಾರು ಆಶಾದಾಯಕವಾಗಿದೆ. ಉತ್ತಮ ಮಳೆಯಾಗಲಿದೆ. ಫೆಸಿಫಿಕ್ ಸಮುದ್ರದ ಪೂರ್ವ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ 1 ಡಿಗ್ರಿ ಸೆಲ್ಸಿಯಸ್ನಿಂದ 1.5 ಡಿಗ್ರಿ ಸೆಲ್ಸಿಯಸ್ವರೆಗೆ ಹೆಚ್ಚು ದಾಖಲಾದರೆ ಎಲ್ ನಿನೋ ಉಂಟಾಗುತ್ತದೆ. ಕಳೆದ ವರ್ಷ ಎಲ್ ನಿನೋ ಪ್ರಭಾವವು ಮುಂಗಾರು ಮೇಲೆ ಪರಿಣಾಮ ಬೀರಿತ್ತು. ಇದರಿಂದಾಗಿ ರಾಜ್ಯದಲ್ಲಿ ಮಳೆ ಕೊರತೆಯಾಗಿತ್ತು.
ಆದರೆ, ಜಾಗತಿಕ ನಿಯಂತ್ರಕ ಸೂಚ್ಯಂಕ ಪ್ರಕಾರ ಕಳೆದ ಫೆಬ್ರವರಿಯಿಂದ ಎಲ್ ನಿನೋ ದುರ್ಬಲಗೊಂಡು ಮಧ್ಯಮ ಹಂತಕ್ಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಮುಂಗಾರು ಮಳೆಯ ಮೇಲೆ ಇದು ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ. ಹೀಗಾಗಿ, ಉತ್ತಮ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ರಾಜ್ಯದ ಕೆಲವೆಡೆ ಸೋಮವಾರ ಮಳೆಯಾದ ಸ್ಥಳಗಳು :
ರಾಯಚೂರು, ಕೊಡಗು, ಕಲಬುರಗಿ ಜಿಲ್ಲೆಯ ಕೆಲವೆಡೆ ಸೋಮವಾರ ಜೋರು ಮಳೆಯಾಗಿದೆ. ಮಡಿಕೇರಿ ಹಾಗೂ ಕುಶಾಲನಗರ, ವಿರಾಜಪೇಟೆ ತಾಲೂಕಿನ ವಿವಿಧೆಡೆ ಮಳೆ ಸುರಿದಿದೆ. ಬಿಸಿಲ ಧಗೆಯಿಂದ ತತ್ತರಿಸಿದ್ದ ಜನರು ನಿಟ್ಟುಸಿರುಬಿಟ್ಟರು. ಮಳೆಯಿಂದಾಗಿ ಕಾಫಿ ತೋಟಗಳಿಗೆ ಅನುಕೂಲವಾಗಿದ್ದು, ಬೆಳೆಗಾರರು ಸಂತೋಷಗೊಂಡಿದ್ದಾರೆ.
ಬೀದರ್ ಜಿಲ್ಲೆಯ ಹಲವೆಡೆ ಮತ್ತು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕೆಲ ಭಾಗಗಳಲ್ಲಿ ಸೋಮವಾರ ಸಂಜೆ ಹೊತ್ತಿಗೆ ಮೋಡಕವಿದ ವಾತಾವರಣ ಕಂಡು ಬಂದಿತ್ತು. ಕುಂಚಾವರಂ ಸುತ್ತಲಿನ ಪ್ರದೇಶದಲ್ಲಿ ಮಧ್ಯಾಹ್ನ ಸುಮಾರು 25 ನಿಮಿಷಗಳ ಕಾಲ ಉತ್ತಮ ಮಳೆಯಾಗಿದೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಹಸಮಕಲ್ ಮತ್ತು ಪರಾಪುರ ಗ್ರಾಮದಲ್ಲಿ ಸೋಮವಾರ ಸಂಜೆ ಸುಮಾರಿಗೆ ಸಾಧಾರಣ ಮಳೆಯಾಗಿದೆ. ತಣ್ಣನೆ ಗಾಳಿಯೊಂದಿಗೆ ಸುಮಾರು ಹದಿನೈದು ನಿಮಿಷ ಮಳೆಯಾಗಿದೆ.