ಬೆಂಗಳೂರು, ಮಾ.19 www.bengaluruwire.com : ಲೋಕಸಭಾ ಚುನಾವಣೆ ಪಾರದರ್ಶಕವಾಗಿ, ಸಾರ್ವಜನಿಕರ ಶಾಂತಿ, ಸುವ್ಯವಸ್ಥೆ ಹಾಗೂ ಭದ್ರತೆಯನ್ನು ಕಾಪಾಡುವ ಸಲುವಾಗಿ ಮಾ.18ರಿಂದ ಜಾರಿಗೆ ಬರುವಂತೆ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಶಸ್ತ್ರಾಸ್ತ್ರಗಳ, ವರವಾನಿಗೆ ಹೊಂದಿರುವ ಸಾರ್ವಜನಿಕರು ತಮ್ಮ ಬಂದೂಕು, ಪಿಸ್ತೂಲು ಸೇರಿದಂತೆ ಇನ್ನಿತರ ಆಯುಧಗಳನ್ನು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಠೇವಣಿ ಮಾಡುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹಾಗೂ ಲೋಕಸಭಾ ಚುನಾವಣೆ-2024 ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ. 144ರೀತ್ಯಾ ತಮಗಿರುವ ಅಧಿಕಾರವನ್ನು ಚಲಾಯಿಸಿ, ಮಾ.18ರಿಂದ ಕೂಡಲೇ ಜಾರಿಗೆ ಬರುವಂತೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಶಸ್ತ್ರಗಳನ್ನು ಠೇವಣಿ ಮಾಡುವಂತೆ ತಿಳಿಸಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಶಸ್ತ್ರಗಳನ್ನು ಠೇವಣಿ ಮಾಡಿದ ಶಸ್ತ್ರ ಪರವಾನಿಗೆದಾರರು ಜೂನ್ 11ರ ನಂತರ ಸಂಬಂಧಟ್ಟ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ತಮ್ಮ ಶಸ್ತ್ರಗಳನ್ನು ಹಿಂದಕ್ಕೆ ಪಡೆಯಬಹುದು ಎಂದು ದಯಾನಂದ್ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಈ ಆದೇಶವು ಕೆಳಕಂಡ ಯಾವ ವರ್ಗಗಳಿಗೆ ಅನ್ವಯಿಸುವುದಿಲ್ಲ?:
1. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು.
2. ಸಾರ್ವಜನಿಕ ಮತ್ತು ಖಾಸಗಿ ವಲಯದ(ಬ್ಯಾಂಕ್ ಹಾಗೂ ಸೆಕ್ಯೂರಿಟಿ ಏಜೆನ್ಸಿಗಳು) ಸಂಸ್ಥೆಗಳು ತಮ್ಮ ಸಂಸ್ಥೆಯ ಭದ್ರತೆಗಾಗಿ ಶಸ್ತ್ರಾಸ್ತ್ರಗಳನ್ನು ಹೊಂದಲು ಶಸ್ತ್ರ, ಪರವಾನಿಗೆಯನ್ನು ಪಡೆದುಕೊಂಡು, ಸಂಸ್ಥೆಯ ಭದ್ರತೆಗಾಗಿ ಮಾತ್ರ ಉಪಯೋಗಿಸಿಕೊಳ್ಳುವ ಸ್ಪಷ್ಟ ನಿಬಂಧನೆಗೆ ಒಳಪಟ್ಟು ಪಡೆದುಕೊಂಡಿರುವ ಸಂಸ್ಥೆಗಳು.
3. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪತ್ರಾಂಕಿತ ವರ್ಗ-1ರ ಅಧಿಕಾರಿಗಳು.
4. ಶಸ್ತ್ರ, ಪರವಾನಿಗೆ ಹೊಂದಿರುವ ನ್ಯಾಷನಲ್ ರೈಫಲ್ ಅಸೋಸಿಯೇಷನ್ ಸದಸ್ಯರುಗಳಿಗೆ ಮತ್ತು ಕೊಡವ ಸಮಾಜದ ಶಸ್ತ್ರ ಪರವಾನಿಗೆದಾರರಿಗೆ.
ಆದ್ದರಿಂದ ಬೆಂಗಳೂರು ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆ ಸರಹದ್ದುಗಳಲ್ಲಿ 2024ನೇ ಸಾಲಿನ ಲೋಕಸಭಾ ಚುನಾವಣೆಯ ಸಂಬಂಧ ಶಸ್ತ್ರಗಳನ್ನು ಪೊಲೀಸ್ ಠಾಣೆಗಳಲ್ಲಿ ಠೇವಣಿ ಮಾಡುವ ಪ್ರಕ್ರಿಯೆಯಿಂದ ವಿನಾಯಿತಿ ನೀಡಲಾಗಿದೆ.
ಶಸ್ತ್ರ ಪರವಾನಿಗೆ ಹೊಂದಿರುವ ಸಾರ್ವಜನಿಕರು, ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ತಮ್ಮ ಶಸ್ತ್ರಗಳನ್ನು, ಠಾಣೆಗೆ ನೀಡುವುದರಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸ ಬಯಸುವವರು ತಮ್ಮ ವಿಭಾಗದ ಉಪ ಪೊಲೀಸ್ ಆಯುಕ್ತರವರ ಕಛೇರಿಯಲ್ಲಿ ಮಾ.25ರ ಒಳಗೆ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈ ಅರ್ಜಿಗಳನ್ನು ಸಂಬಂಧಪಟ್ಟ ಉಪ ಪೊಲೀಸ್ ಆಯುಕ್ತರುಗಳು, ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯ ವರದಿಯೊಂದಿಗೆ ಮುಂದಿನ ಕ್ರಮಕ್ಕಾಗಿ ಪೊಲೀಸ್ ಆಯುಕ್ತರವರ ಕಛೇರಿಯಲ್ಲಿರುವ ಪರಿಶೀಲನಾ ಸಮಿತಿ(Screening Committee)ಗೆ ಮಾ.26 ಒಳಗೆ ಕಳುಹಿಸುತ್ತಾರೆ. ಬಳಿಕವಷ್ಟೆ ವಿನಾಯಿತಿ ಬಗ್ಗೆ ಪೊಲೀಸ್ ಆಯುಕ್ತರ ಕಚೇರಿ ತೀರ್ಮಾನಿಸಲಿದೆ.