ಬೆಂಗಳೂರು, ಮಾ.18 www.bengaluruwire.com : ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅನುಮಾನಾಸ್ಪದ ವಹಿವಾಟುಗಳು ನಡೆಯುತ್ತಿರುವುದು ಕಂಡುಬಂದಲ್ಲಿ ಕೂಡಲೆ ಚುನಾವಣಾ ವಿಭಾಗದ ಗಮನಕ್ಕೆ ತರಬೇಕೆಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ ರವರು ಬ್ಯಾಂಕ್ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲೋಕಸಭಾ ಚುನಾವಣೆ ಸಂಬಂಧ ಬ್ಯಾಂಕ್ ನೋಡಲ್ ಅಧಿಕಾರಿಗಳೊಂಡಿಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದೇ ಖಾತೆಯಿಂದ ಸುಮಾರು ಖಾತೆಗಳಿಗೆ ಹಣ ವರ್ಗಾವಣೆಯಾದರೆ ಅದರ ಮಾಹಿತಿಯನ್ನು ನಮಗೆ ಕೊಡಬೇಕು. ಮಾಹಿತಿ ಕೊಡದಿದ್ದರೆ ಮುಂದಿನ ದಿನಗಳಲ್ಲಿ ನೀವೇ ಜವಾಬ್ದಾರರಾಗುತ್ತೀರಾ. ಅಲ್ಲದೇ ಚುನಾವಣಾ ಆಗೋಗದಿಂದ ಕಾನೂನು ಕ್ರಮ ಜರುಗಿಸಲಾಗುತ್ತದೆ. ಯಾವುದೇ ಪೂರ್ವನಿರ್ದೇಶನವಿಲ್ಲದೆ ಚುನಾವಣಾ ಪ್ರಕ್ರಿಯೆಯ ಸಮಯದಲ್ಲಿ ಹಲವಾರು ವ್ಯಕ್ತಿಗಳ ಖಾತೆಗಳಿಗೆ ಒಂದು ಬ್ಯಾಂಕ್ ಖಾತೆಯಿಂದ ಆರ್.ಟಿ.ಜಿ.ಎಸ್/ನೆಫ್ಟ್ (RTGS/NEFT) ಮೂಲಕ ಹೆಚ್ಚು ಹಣ ವರ್ಗಾವಣೆ ಮಾಡುವುದು, ಯಾವುದೇ ನಗದು ಠೇವಣಿ ಅಥವಾ 1 ಲಕ್ಷ ರೂ.ಗಿಂತ ಹೆಚ್ಚಿನ ನಗದು ಹಿಂಪಡೆಯುವಿಕೆ, ಮತದಾರರಿಗೆ ಹಣ ನೀಡಲು ಬಳಸಬಹುದಾದ ಯಾವುದೇ ಅನುಮಾನಾಸ್ಪದ ನಗದು ವಹಿವಾಟುಗಳ ಬಗ್ಗೆ ಚುನಾವಣಾ ವಿಭಾಗಕ್ಕೆ ಕೂಡಲೇ ಮಾಹಿತಿ ನೀಡಲು ತಿಳಿಸಿದರು.
ನಗದು ಠೇವಣಿ ಅಥವಾ ಹಿಂಪಡೆಯುವಿಕೆಯ ಮೊತ್ತವು 10 ಲಕ್ಷ ರೂ.ಗಳಿಗಿಂತ ಹೆಚ್ಚಿದ್ದರೆ, ಅಂತಹ ಮಾಹಿತಿಯನ್ನು ಆದಾಯ ತೆರಿಗೆ ಕಾನೂನುಗಳ ಅಡಿಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಆದಾಯ ತೆರಿಗೆ ಇಲಾಖೆಯ ನೋಡಲ್ ಅಧಿಕಾರಿಗೆ ರವಾನಿಸಲಾಗುವುದು ಎಂದರು.
ಜನಪ್ರತಿನಿಧಿಗಳ ಹೆಸರು/ಭಾವಚಿತ್ರಗಳನ್ನು ತೆಗೆಯಿರಿ:
ಚುನಾವಣಾ ಆಯೋಗದ ನಿರ್ದೇಶನದಂತೆ ಖಾಸಗಿ ಆಸ್ತಿಗಳಲ್ಲಿ 72 ಗಂಟೆಗಳಲ್ಲಿ ಜನಪ್ರತಿನಿಧಿಗಳ ಹೆಸರು ಹಾಗೂ ಭಾವಚಿತ್ರಗಳನ್ನು ಕಡ್ಡಾಯವಾಗಿ ತೆಗೆಯಬೇಕು. ಇಲ್ಲವಾದಲ್ಲಿ ಚುನಾವಣಾ ಆಯೋಗದಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಭದ್ರತಾ ಸಿಬ್ಬಂದಿಯೊಂದಿಗೆ ನಗದು ರವಾನಿಸಿ:
ಯಾವುದೇ ಬ್ಯಾಂಕ್ ಗಳಿಂದ ನಗದು ಅಥವಾ ಎಟಿಎಂಗಳಿಂದ ತೆಗೆಯುವ ನಗದನ್ನು ಭದ್ರತಾ ಸಿಬ್ಬಂದಿಯೊಂದಿಗೆ ಸರಿಯಾದ ದಾಖಲೆಗಳನ್ನು ಇಟ್ಟುಕೊಂಡು ಚುನಾವಣಾ ಆಯೋಗದ ನಿಯಮಾನುಸಾರ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರವಾನೆ ಮಾಡಬೇಕು. ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳದೆ ನಗದು ರವಾನೆ ಮಾಡಿ ಸೀಜ್ ಮಾಡಿಕೊಳ್ಳುವ ಹಾಗೆ ಮಾಡಿಕೊಳ್ಳಬೇಡಿ ಎಂದು ಸೂಚನೆ ನೀಡಿದರು. ಸಭೆಯಲ್ಲಿ ಚುನಾವಣಾ ವಿಭಾಗದ ಸಹಾಯಕ ಆಯುಕ್ತರಾದ ರಾಮ ಚಂದ್ರ ನಾಯ್ಕ್, ಮುಖ್ಯ ಲೆಕ್ಕಾಧಿಕಾರಿ ಭೀನಾ, ವಿವಿಧ ಬ್ಯಾಂಕ್ ಗಳ ನೋಡಲ್ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.