ಬೆಂಗಳೂರು, ಮಾ.18 www.bengaluruwire.com : ರಾಜಧಾನಿಗೆ ಪ್ರತಿನಿತ್ಯ ಕುಡಿಯಲು ಮತ್ತು ಕೈಗಾರಿಕೆಗಳಿಗೆ ಒಟ್ಟು 2600 ದಶಲಕ್ಷ ಲೀಟರ್ (MLD) ಎಂ.ಎಲ್. ಡಿ. ನೀರು ಅಗತ್ಯವಿದೆ. ಇದರಲ್ಲಿ 1450 ಎಂ.ಎಲ್. ಡಿ. ನೀರು ಕಾವೇರಿ ನದಿಯಿಂದ ದೊರೆಯುತ್ತಿದೆ. 650 ಎಂ ಎಲ್ ಡಿ ನೀರು ಕೊಳವೆ ಬಾವಿಯಿಂದ ದೊರೆಯುತ್ತಿದ್ದು, 500 ಎಂ.ಎಲ್ ಡಿ ನೀರಿನ ಕೊರತೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸೋಮವಾರ ಗೃಹಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳಿಂದ ಸುದೀರ್ಘವಾಗಿ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ, 14,000 ಸರ್ಕಾರಿ ಬೋರ್ ವೆಲ್ ಗಳಲ್ಲಿ 6900 ಬತ್ತಿವೆ. ಹೀಗಾಗಿ ಸಮಸ್ಯೆ ಆಗಿದೆ. 110 ಹಳ್ಳಿಗಳಲ್ಲಿ 55 ಹಳ್ಳಿಗಳಿಗೆ ಸಮಸ್ಯೆ ಆಗಿದೆ. ಜೂನ್ ಅಂತ್ಯಕ್ಕೆ ಕಾವೇರಿ 5 ನೇ ಹಂತದ ಕಾಮಗಾರಿ ಮುಕ್ತಾಯವಾಗಿ 775 ಎಂಎಲ್ ಡಿ (MLD) ಹೆಚ್ಚುವರಿ ನೀರು ಸಿಗತ್ತೆ. ಇದು 110 ಹಳ್ಳಿಗಳಿಗೆ ಸರಬರಾಜು ಆಗಲಿದೆ. 313 ಸ್ಥಳಗಳಲ್ಲಿ ಹೊಸದಾಗಿ ಬೋರ್ ವೆಲ್ ಕೊರೆಸುತ್ತಿದ್ದೇವೆ. 1200 ನಿಷ್ಕ್ರಿಯ ಬೋರ್ ಗಳಿಗೆ ಮರುಜೀವ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಕಾವೇರಿ, ಕಬಿನಿಯಲ್ಲಿ ಕುಡಿಯುವ ನೀರಿಗೆ ಅಗತ್ಯ ಇರುವಷ್ಟು ನೀರನ್ನು ಸಂಗ್ರಹಿಸಿದ್ದೇವೆ. ಜೂನ್ ಅಂತ್ಯದವರೆಗೂ ಸಾಕಾಗುವಷ್ಟು ನೀರು ಸಂಗ್ರಹವಿದ್ದು, ಕೃಷ್ಣರಾಜ ಸಾಗರ (KRS)ದಲ್ಲಿ 11.02 ಟಿಎಂಸಿ ಹಾಗೂ ಕಬಿನಿಯಲ್ಲಿ 9.02 ಟಿಎಂಸಿ ನೀರು ಸಂಗ್ರಹವಿದೆ. ಕೊಳೆಗೇರಿ, ಎತ್ತರದ ಪ್ರದೇಶದಲ್ಲಿ ಹಾಗೂ ಬೋರ್ ವೆಲ್ ಮೇಲೆ ಅಬಲಂಬಿತ ಪ್ರದೇಶಗಳಲ್ಲಿ ಕೆಎಂಎಫ್ (KMF) ಸೇರಿ ಎಲ್ಲಾ ಖಾಸಗಿ ಟ್ಯಾಂಕರ್ ಗಳನ್ನು ಬಳಸಲು ಹೇಳಿದ್ದೇನೆ. ಕಂಟ್ರೋಲ್ ರೂಮ್ ಗಳ ಸಂಖ್ಯೆ ಹೆಚ್ಚಿಸಿ ದೂರುಬಂದ ತಕ್ಷಣ ಆ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಸೂಚಿಸಲಾಗಿದೆ. ಟಾಸ್ಕ್ ಫೋರ್ಸ್ ಹೆಚ್ವಿಸಿ ದೂರುಗಳಿಗೆ ತಕ್ಷಣ ಸ್ಪಂದಿಸಲು ಹೇಳಲಾಗಿದೆ. ಪಾರ್ಕ್ ಗಳಲ್ಲಿ ಕುಡಿಯುವ ನೀರು ಬಳಸದಂತೆ ಮತ್ತು ಶುದ್ದೀಕರಿಸಿದ ನೀರು ಬಳಸುವಂತೆ ಸೂಚನೆ ನೀಡಲಾಗಿದೆ. ಕೆ.ಸಿ.ವ್ಯಾಲಿ ರೀತಿ ಬೆಂಗಳೂರಿನ ಕೆರೆಗಳನ್ನೂ ಭರ್ತಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.
ಬತ್ತಿ ಹೋಗಿರುವ ಪ್ರಮುಖ 14 ಕೆರೆಗಳನ್ನು ಭರ್ತಿ ಮಾಡಲು ಸೂಚನೆ ನೀಡಲಾಗಿದೆ. ಇದರಿಂದ ಅಂತರ್ಜಲ ಭರ್ತಿ ಆಗಿ ಬೋರ್ ವೆಲ್ ಗಳಿಗೆ ಮರುಜೀವ ಬರುತ್ತದೆ. ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ. ಬೇಕಾದಷ್ಟು ಹಣವನ್ನು ಸರ್ಕಾರ ಮತ್ತು ಬಿಬಿಎಂಪಿ ಒದಗಿಸುತ್ತಿದೆ. ಪ್ರತಿ ದಿನ ಅಧಿಕಾರಿಗಳು ಸಭೆ ನಡೆಸಿ ವಾರಕ್ಕೊಮ್ಮೆ ಕ್ರಿಯಾಯೋಜನೆ ಸಿದ್ದಪಡಿಸುತ್ತಾರೆ.
ಭವಿಷ್ಯದಲ್ಲಿ ಯಾವುದೇ ಸಂದರ್ಭದಲ್ಲೂ ನೀರಿನ ಕೊರತೆ ಆಗದಂತೆ ತಜ್ಞರ ಸಮಿತಿಯನ್ನು ರಚಿಸಲು ಕ್ರಮ ಕೈಗೊಳ್ಳಲಾಗಿದೆ. ದೂರು ಬಂದರೆ ಬಿಬಿಎಂಪಿ (BBMP), ಬಿಡಬ್ಲ್ಯೂಎಸ್ ಎಸ್ ಬಿ (BWSSB) ನವರು ಹೊಣೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಬೆಂಗಳೂರಿಗೆ 500 ಎಂಎಲ್ ಡಿ (MLD) ನೀರು ಕೊರತೆ ಇದೆ. ಈ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬೋರ್ ವೆಲ್ ಗಳ ಮೇಲೆ ಅವಲಂಬಿತ ಜನರಿಗೆ ನೀರಿನ ತೊಂದರೆ ಆಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. 1700 ನೀರಿನ ಟ್ಯಾಂಕರ್ ನೋಂದಣಿ ಆಗಿವೆ. ಮಾಲ್ ಗಳು ಸೇರಿ ಖಾಸಗಿಯಾಗಿ ಇರುವ ಬೋರ್ ವೆಲ್ ಗಳಿಂದ ಟ್ಯಾಂಕರ್ ತುಂಬಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ಎಲ್ಲೂ ನೀರಿಗೆ ತೊಂದರೆ ಆಗದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಕುಡಿಯುವ ನೀರಿನ ದುಂದುವೆಚ್ಚ ಮಾಡಬಾರದು. ತಮ್ಮಲ್ಲಿನ ಹೂದೋಟಗಳಿಗೆ ಕುಡಿಯುವ ನೀರು ಬಳಸದಂತೆ ಎಚ್ಚರಿಕೆ ನೀಡಲಾಗಿದೆ. ಮಳೆನೀರು ಕೊಯ್ಲು, ಬಳಕೆ ನೀರನ್ನು ಶುದ್ದೀಕರಿಸಿ ಹೆಚ್ಚಿನ ಪ್ರಮಾಣದಲ್ಲಿ ಮರು ಬಳಸುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮುಖ್ಯವಾಗಿ ಕೊಳೆಗೆರಿಗಳು, ಎತ್ತರದ ಪ್ರದೇಶಗಳು ಹಾಗೂ ಬಿಬಿಎಂಪಿ ಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಸಮಸ್ಯೆ ಆಗದಂತೆ ಸೂಚಿಸಲಾಗಿದೆ. ನೀರಿನ ದುರುಪಯೋಗ ತಡೆಗಟ್ಟಲು ಸೂಚಿಸಲಾಗಿದ್ದು, ಈ ಬಗ್ಗೆ 143 ಟಾಸ್ಕ್ ಫೋರ್ಸ್ ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪ್ರಮಾಣ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಕೇಂದ್ರೀಯ ಸಹಾಯವಾಣಿ ಸಂಖ್ಯೆ 1916 ಹಾಗೂ ವಾಟ್ಸಾಪ್ ಮೂಲಕ ದೂರು ದಾಖಲಿಸಬಹುದು. ಈ ದೂರುಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಸೂಚಿಸಲಾಗಿದೆ. ಬೆಂಗಳೂರು ನಗರದ ಪ್ರಮುಖ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲು ತಾಕೀತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
“ನಮ್ಮಲ್ಲಿ ಹಣವಿಲ್ಲ ಎಂದು ಆರೋಪಿಸುವ ನೈತಿಕತೆ ಅವರಿಗಿಲ್ಲ” :
ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬರಗಾಲ ಬಂದು ಐದು ತಿಂಗಳಾಯ್ತು. ಮೋದಿಯವರು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಒಂದೇ ಒಂದು ಪೈಸೆ ಹಣ ಕೊಟ್ಟಿಲ್ಲ. ಏಕೆ? 18,171 ಕೋಟಿ ಬರ ಪರಿಹಾರ ಹಣ ಕೇಳಿದ್ದೆವು. ಒಂದು ರೂಪಾಯಿಯನ್ನೂ ಕೊಡಲಿಲ್ಲ. 48 ಸಾವಿರ ಹೆಕ್ಟೇರ್ ನಲ್ಲಿ ಬೆಳೆ ಹಾನಿ ಆಗಿದೆ. ಬರ ಪರಿಹಾರ ಕೊಡಿ ಅಂದರೂ ಕೊಡಲಿಲ್ಲ. ಮತ್ತೆ ಮೋದಿಯವರಿಗೆ “ನಮ್ಮಲ್ಲಿ ಹಣ ಇಲ್ಲ” ಎಂದು ಆರೋಪಿಸುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಅವರು, ಕೇಂದ್ರದಿಂದ ನಯಾಪೈಸೆ ಬರದಿದ್ದರೂ ನಾವು ರಾಜ್ಯ ಬೊಕ್ಕಸದಿಂದಲೇ ರೈತರ ಖಾತೆಗೆ ಬರ ಪರಿಹಾರ ಹಾಕಿದ್ದೇವೆ.
ಬರಗಾಲದಲ್ಲಿ ನರೇಗಾ ದಿನಗಳನ್ನು ಹೆಚ್ಚಿಸಿ ಎಂದು ಕೇಳಿದ್ದೆವು. ಇವತ್ತಿನವರೆಗೂ ಮಾಡಿಲ್ಲ. ಕೇಂದ್ರ ಸರ್ಕಾರ ಅಂದರೆ ಕೇವಲ ಸರಕು ಮತ್ತು ಸೇವಾ ತೆರಿಗೆ (GST) ತೆಗೆದುಕೊಳ್ಳುತ್ತದೆ. ತೆರಿಗೆ ಸಂಗ್ರಹಿಸಿ ತಮ್ಮಲ್ಲಿ ಇಟ್ಟುಕೊಂಡು ರಾಜ್ಯಗಳಿಗೆ ಅನ್ಯಾಯ ಮಾಡೋಕೆ ಮಾತ್ರ ಇರೋದಾ ? ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಇದೆ, ಅವರು ನಮ್ಮ ಮೇಲೆ ವೃಥಾ ಆರೋಪಿಸುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನುಡಿದಂತೆ ನಡೆದಿದ್ದೇವೆ. ಜನರ ಕೆಲಸ ಮಾಡಿದ್ದೇವೆ. ಜನರ ಭಾವನೆಗಳನ್ನು ಕೆರಳಿಸಿ ಅವರಿಗೆ ದ್ರೋಹ ಆಗಿಲ್ಲ. ಹೀಗಾಗಿ ನಾವು ಕನಿಷ್ಠ 20 ಲೋಕಸಭಾ ಸ್ಥಾನ ಗೆಲ್ಲುತ್ತೇವೆ. ರಾಮ ಮತ್ತು ಮೋದಿ ಹೆಸರಲ್ಲಿ ಚುನಾವಣೆಗೆ ಹೋಗ್ತೀವಿ ಎನ್ನುವ ಬಿಜೆಪಿ ನಾಯಕರ ಮಾತಿಗೆ ಪ್ರತಿಕ್ರಿಯಿಸಿದ ಸಿಎಂ, “ವಿಧಾನಸಭಾ ಚುನಾವಣೆಯಲ್ಲಿ ಮೋದಿಯವರು ಪ್ರಚಾರ ಮಾಡಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಮೋದಿ ಪ್ರಚಾರದ ಫಲ ಇಷ್ಟೆ” ಎಂದು ವ್ಯಂಗ್ಯವಾಡಿದರು.