ಬೆಂಗಳೂರು, ಮಾ.14 www.bengaluruwire.com : ಪರಿಸರಸ್ನೇಹಿ ಮತ್ತು ಸುಸ್ಥಿರ ಸಂಚಾರ ವ್ಯವಸ್ಥೆಯ ಮಾದರಿಗಳನ್ನು ಉತ್ತೇಜಿಸುವ ಆಶಯದೊಂದಿಗೆ ಉಬರ್ ಕಂಪನಿಯು ಏರ್ಪಡಿಸಿದ್ದ ರಾಷ್ಟ್ರ ಮಟ್ಟದ `ಉಬರ್ ಸಸ್ಟೈನೋವೇಟ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಗುರುಗ್ರಾಮದ `ಅಹೋಡ್ಸ್’ (ಅಡ್ವಾನ್ಸ್ಡ್ ಹೈಡ್ರೋಜನ್ ಆನ್ ಡಿಮ್ಯಾಂಡ್ ಸಪ್ಲೈ) ಕಂಪನಿಗೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಗುರುವಾರ ಇಲ್ಲಿ ಒಂದು ಕೋಟಿ ರೂ. ನಗದು ಬಹುಮಾನವನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, `ಹಳೆಯ ವಾಹನಗಳನ್ನು ಹೈಡ್ರೋಜನ್ ಮತ್ತು ಡೀಸೆಲ್ ಎರಡರ ಬಲದ ಮೇಲೂ ಓಡಿಸುವುದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ರೆಟ್ರೋ-ಫಿಟ್ಮೆಂಟ್ ಕಿಟ್ ತಯಾರಿಸುತ್ತಿರುವ ಅಹೋಡ್ಸ್ ಕಂಪನಿಯ ಸಾಧನೆ ಅನುಕರಣ ಯೋಗ್ಯವಾಗಿದೆ. ಇದು ನಮ್ಮ ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಸಾಧಿಸುವಲ್ಲಿ ಮೌಲಿಕ ನೆರವು ನೀಡಲಿದೆ’ ಎಂದರು.
ಒಟ್ಟು 140 ನವೋದ್ಯಮಗಳು ಭಾಗವಹಿಸಿದ್ದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಪುಣೆಯ ಗೋವಿದ್ಯುತ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಮತ್ತು ಗುರುಗ್ರಾಮದ ಮತ್ತೊಂದು ನವೋದ್ಯಮವಾದ ಮೆಟ್ಜ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವು. ಪ್ರಶಸ್ತಿಗೆ ಪಾತ್ರವಾಗಿರುವ ಮೂರೂ ಕಂಪನಿಗಳಿಗೆ ಉಬರ್ ಕಂಪನಿಯು ತಾಂತ್ರಿಕ ನೆರವು ನೀಡಲಿದೆ.
ಸಚಿವರು ತಮ್ಮ ಮಾತಿನಲ್ಲಿ, `ಕರ್ನಾಟಕವು ಸದ್ಯದಲ್ಲೇ ಶುದ್ಧ ಇಂಧನ ನೀತಿಯನ್ನು ಜಾರಿಗೆ ತರಲಿದೆ. ಈ ನೀತಿಯು ಈಗಾಗಲೇ ಸಿದ್ಧವಾಗಿದ್ದು, ಮುಖ್ಯವಾಗಿ ಮಾಲಿನ್ಯ ಉಂಟುಮಾಡದಂತಹ ಸುಗಮ ಸಂಚಾರ ವ್ಯವಸ್ಥೆಗೆ ಉತ್ತೇಜನ ನೀಡಲಿದೆ. ಸುಸ್ಥಿರತೆ ಎನ್ನುವುದು ಈಗ ಜೀವನ ವಿಧಾನವೇ ಆಗಿದೆ. ಸುಸ್ಥಿರ ಸಂಚಾರ ವಲಯಕ್ಕೆ ರಾಜ್ಯ ಸರಕಾರವು ಸಂಪೂರ್ಣ ಉತ್ತೇಜನ ಮತ್ತು ಸೌಲಭ್ಯಗಳನ್ನು ನೀಡಲಿದೆ. ಇದನ್ನು ಈ ವಲಯದ ನವೋದ್ಯಮಗಳು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು. ಇದಕ್ಕೆ ಸ್ಪಂದಿಸಿದ `ಅಹೋಡ್ಸ್’ ಕಂಪನಿಯು ರಾಜ್ಯದಲ್ಲಿ ತನ್ನ ರೆಟ್ರೋಫಿಟ್ ಕಿಟ್ ಉತ್ಪಾದನಾ ಘಟಕ ಆರಂಭಿಸುವ ಆಸಕ್ತಿಯನ್ನು ವ್ಯಕ್ತಪಡಿಸಿತು.
ಉಬರ್ ಕಂಪನಿಯ ಹಿರಿಯ ನಿರ್ದೇಶಕ ಮಣಿಕಂಠನ್ ತಂಗರತ್ನಂ, ಅಹೋಡ್ಸ್ ನವೋದ್ಯಮದ ಉನ್ನತಾಧಿಕಾರಿಗಳಾದ ಸಂಸ್ಥಾಪಕ ಸೌರಭ್ ಮೋಹನ್ ಸಕ್ಸೇನ, ಪಿ.ಕೆ. ಕುಶ್ವಾಹ, ನಂದೀಶ್ ಜಗದೀಶ್ ಉಪಸ್ಥಿತರಿದ್ದರು.
ಹೈಬ್ರಿಡ್ ಕಾರಿನಲ್ಲಿ ಪಯಣಿಸಿದ ಸಚಿವ ಎಂ.ಬಿ.ಪಾಟೀಲ :
ಕಾರ್ಯಕ್ರಮದ ನಂತರ ಸಚಿವ ಎಂ ಬಿ ಪಾಟೀಲ ಅವರು ಅಹೋಡ್ಸ್ ಕಂಪನಿಯ ನಿಸಾನ್ ಕಂಪನಿಯ ಏಳು ವರ್ಷ ಹಳೆಯ ಹೈಬ್ರೀಡ್ (ಹೈಡ್ರೋಜನ್-ಡೀಸೆಲ್) ಕಾರಿನಲ್ಲಿ ಐಟಿಸಿ ಗಾರ್ಡೆನೀಯ ಹೋಟೆಲ್ ನಿಂದ ಕಬ್ಬನ್ ಪಾರ್ಕಿನವರೆಗೂ ಸಂಚರಿಸಿ, ಅದರ ಅನುಭವ ಪಡೆದರು.
ಬಳಿಕ ಪ್ರತಿಕ್ರಿಯಿಸಿದ ಅವರು, ಹೈಡ್ರೋಜನ್ ಮತ್ತು ಡೀಸೆಲ್ ಎರಡರಲ್ಲೂ ಓಡುವ ಈ ಕಾರಿನ ಪ್ರಯಾಣ ಮುದ ನೀಡುವಂತಿತ್ತು. ಈ ಕಾರು ಎರಡೂವರೆ ವರ್ಷದಿಂದ ಸಂಚರಿಸುತ್ತಿದೆ ಎಂದು ತಿಳಿದು ಸಂತಸವಾಯಿತು’ ಎಂದು ಹರ್ಷಚಿತ್ತರಾದರು. ಇದರಿಂದ ಇಂಧನ ದಕ್ಷತೆ ಜತೆಗೆ ಪರಿಸರ ಮಾಲಿನ್ಯ ಕೂಡ ಕಡಿಮೆ ಆಗುತ್ತದೆ ಎನ್ನುವುದನ್ನು ತಿಳಿದು ಮತ್ತಷ್ಟು ಸಂತಸವಾಯಿತು ಎಂದರು.
ಸುಸ್ಥಿರ ಸಂಚಾರ ವ್ಯವಸ್ಥೆಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆ :
ಉಬರ್ ಕಂಪನಿಯು ಸುಸ್ಥಿರ ಸಂಚಾರ ವ್ಯವಸ್ಥೆಯನ್ನು ಉತ್ತೇಜಿಸಲು ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ `ಉಬರ್ ಸಸ್ಟೆನೋವೇಟ್’ ಸ್ಪರ್ಧೆಯಲ್ಲಿ 1 ಕೋಟಿ ರೂ.ಗಳ ಪ್ರಥಮ ಬಹುಮಾನಕ್ಕೆ ಪಾತ್ರವಾದ ಅಹೋಡ್ಸ್ ಕಂಪನಿಗೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಪುರಸ್ಕಾರ ಪ್ರದಾನ ಮಾಡಿದರು.