ಬೆಂಗಳೂರು, ಮಾ.13 www.bengaluruwire.com : ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಜ.1ರಿಂದ ಪೂರ್ವಾನ್ವಯವಾಗುವಂತೆ ಶೇ.3.75ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.
ಸರ್ಕಾರಿ ನೌಕರರಿಗೆ ಮೂಲವೇತನದ ಶೇಕಡಾ 38.75 ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇಕಡಾ 42.5 ಕ್ಕೆ ಪರಿಷ್ಕರಿಸಲು ಅನುಮೋದಿಸಿದೆ. ಕೇಂದ್ರೀಯ ವೇತನ ಶ್ರೇಣಿಯಲ್ಲಿರುವವರಿಗೆ ಇದು ಶೇ.46 ರಿಂದ ಶೇ.50 ಕ್ಕೆ ಏರಿದೆ. ಈ ಬದಲಾವಣೆಯು ಪ್ರತಿ ವರ್ಷ 1792.71 ಕೋಟಿ ರೂಪಾಯಿಗಳ ಗಮನಾರ್ಹ ಆರ್ಥಿಕ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ನಮ್ಮ ಉದ್ಯೋಗಿಗಳಿಗೆ ನಮ್ಮ ಸಮರ್ಪಣೆಯನ್ನು ಪುನರುಚ್ಚರಿಸುತ್ತದೆ ಎಂದು ಸಿಎಂ ಕಚೇರಿ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡಾ 38.75 ರಿಂದ ಶೇಕಡಾ 42.5ಕ್ಕೆ ಪರಿಷ್ಕರಿಸಿ ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನಿವೃತ್ತ ನೌಕರರು, ಕುಟುಂಬ ಪಿಂಚಣಿ ಪಡೆಯುತ್ತಿರುವವರಿಗೂ ಈ ಹೆಚ್ಚಳ ಅನ್ವಯವಾಗಲಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿ, ನ್ಯಾಯಾಂಗ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿಗಳ ಪೂರ್ಣಾವಧಿ ನೌಕರರಿಗೂ ತುಟ್ಟಿಭತ್ಯೆ ಹೆಚ್ಚಳವಾಗಲಿದೆ. ತುಟ್ಟಿ ಭತ್ಯೆಯ ಬಾಕಿ ಮೊತ್ತವನ್ನು ಮಾರ್ಚ್ ವೇತನ ಬಟವಾಡೆಯ ನಂತರವೇ ಪಾವತಿ ಮಾಡಲಾಗುತ್ತದೆ ಎಂದು ಹಣಕಾಸು ಇಲಾಖೆ ಆದರೆಶದಲ್ಲಿ ತಿಳಿಸಿದೆ.