ಬೆಂಗಳೂರು, ಮಾ.13 www.bengaluruwire.com : ಬಿಬಿಎಂಪಿಯ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಸೃಷ್ಟಿಸಿ ನಕಲಿ ಖಾತೆಗಳನ್ನು ಅಕ್ರಮವಾಗಿ ಸ್ಕ್ಯಾನಿಂಗ್ ಮಾಡಿರುವ ಪ್ರಕರಣ ಹಸಿರಿರುವಾಗಲೇ ರಾಜರಾಜೇಶ್ವರಿನಗರ ವಾರ್ಡ್ ವ್ಯಾಪ್ತಿಯಲ್ಲಿ 808 ನಕಲಿ ಖಾತೆಗಳನ್ನು ಸೃಷ್ಟಿಸಿರುವ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ.
ರಾಜರಾಜೇಶ್ವರಿನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಯ ವ್ಯಾಪ್ತಿಗೆ ಬರುವ ರಾಜರಾಜೇಶ್ವರಿನಗರ ವಾರ್ಡ್ ವ್ಯಾಪ್ತಿಯ ಚನ್ನಸಂದ್ರ, ಹಲಗೆವಡೇರಹಳ್ಳಿ ಮತ್ತು ಹೊಸಕೆರೆಹಳ್ಳಿ ಪ್ರದೇಶಗಳಿಗೆ ಸಂಬಂಧಿಸಿದಂತೆ ಒಟ್ಟು 808 ನಕಲಿ ಖಾತೆಗಳನ್ನು ಸೃಷ್ಟಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ 20 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ವಂಚಿಸಿದ್ದಾರೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಈ ಕುರಿತಂತೆ ಅವರು ಲೋಕಾಯುಕ್ತಕ್ಕೆ ಮಾ.13ರಂದು 122 ಪುಟಗ ದಾಖಲೆಗಳೊಂದಿಗೆ ದೂರು ನೀಡಿದ್ದಾರೆ. ರಾಜರಾಜೇಶ್ವರಿನಗರ ವಾರ್ಡ್ ವ್ಯಾಪ್ತಿಯ ಕಛೇರಿಯಲ್ಲಿ ಸಹಾಯಕ ಕಂದಾಯ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದ ಅರುಣ್ ಕುಮಾರ್, ಕಂದಾಯ ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗಣೇಶ್ ಮತ್ತು ಪ್ರಥಮ ದರ್ಜೆ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಓಂಕಾರಮೂರ್ತಿ ಎಂಬುವವರು ಸೇರಿಕೊಂಡು ವಾರ್ಡ್ ನಂಬರ್ 160 ಕ್ಕೆ ಸಂಬಂಧಿಸಿದ `ಎ’ ವಹಿ (‘A’ Register) ಯಲ್ಲಿ ನಕಲಿ ದಾಖಲಿಸುವಿಕೆ (Fake Entry) ಗಳನ್ನು ಮಾಡುವ ಮೂಲಕ 808 ಸ್ವತ್ತುಗಳಿಗೆ ನಕಲಿ ಖಾತೆಗಳನ್ನು ಸೃಷ್ಟಿಸಿರುತ್ತಾರೆ.
ಇವರುಗಳ ಪೈಕಿ ಓಂಕಾರಮೂರ್ತಿ ಎಂಬ ಪ್ರಥಮ ದರ್ಜೆ ಗುಮಾಸ್ತನ ಪಾತ್ರವೇ ಎಲ್ಲರಿಗಿಂತಲೂ ಬಹಳ ದೊಡ್ಡದಾಗಿರುತ್ತದೆ. ಈ 808 ಸ್ವತ್ತುಗಳಿಗೆ ಕಾನೂನು ರೀತ್ಯಾ ಅಭಿವೃದ್ಧಿ ಶುಲ್ಕಗಳನ್ನು ಪಾವತಿಸಿಕೊಂಡು `ಎ’ ಖಾತಾಗಳನ್ನು ಮಾಡಿದ್ದೇ ಆದಲ್ಲಿ, ಅಭಿವೃದ್ಧಿ ಶುಲ್ಕದ ರೂಪದಲ್ಲಿ ಪಾಲಿಕೆಗೆ ಇಪ್ಪತ್ತು ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಸಂದಾಯವಾಗುತ್ತಿತ್ತು.
ಈ ರಾಜರಾಜೇಶ್ವರಿನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಯಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರಿಗಿಂತಲೂ ಮಧ್ಯವರ್ತಿಗಳ ಹಾವಳಿಯೇ ಹೆಚ್ಚಾಗಿದ್ದು, ಪಾಲಿಕೆಗೆ ಸಂಬಂಧವೇ ಇಲ್ಲದ ಯಶವಂತ್ ಕುಮಾರ್, ವಿಜಯ್ ಕುಮಾರ್ ಮತ್ತು ಮುತ್ತುರಾಜ್ ಎಂಬ ಮಧ್ಯವರ್ತಿಗಳು ಕಛೇರಿಯ ಕಂದಾಯ ಪರಿವೀಕ್ಷಕರು ಮತ್ತು ಕಂದಾಯ ವಸೂಲಿಗಾರರ ಆಸನಗಳಲ್ಲಿ ಕುಳಿತು ಪಾಲಿಕೆಯ ದಾಖಲೆಗಳಲ್ಲಿ ತಮಗಿಷ್ಟಬಂದ ರೀತಿಯಲ್ಲಿ ಕಡತದಲ್ಲಿ ದಾಖಲಿಸುವ ಮೂಲಕ ಕಾನೂನು ಬಾಹಿರ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಈ ಮೂವರು ಬ್ರೋಕರ್ ಗಳಿಗೆ ಓಂಕಾರಮೂರ್ತಿ ಎಂಬ ಪ್ರಥಮ ದರ್ಜೆ ಗುಮಾಸ್ತ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದ್ದು, ಇವರುಗಳು ಹೇಳಿದಂತೆ ಕಂದಾಯ ಪರಿವೀಕ್ಷಕ ಗಣೇಶ್ ಮತ್ತು ಸಹಾಯಕ ಕಂದಾಯ ಅಧಿಕಾರಿಯಾದ ಅರುಣ್ ಕುಮಾರ್ ರವರು ಚಾಚೂ ತಪ್ಪದೇ ಪಾಲಿಸುತ್ತಾ ಅವರು ಮಾಡಿಕೊಟ್ಟ ನಕಲಿ ದಾಖಲೆಗಳಿಗೆ ಕಣ್ಣು ಮುಚ್ಚಿಕೊಂಡು ಸಹಿಗಳನ್ನು ಹಾಕುತ್ತಿದ್ದಾರೆ.
ಇವರೊಂದಿಗೆ ಈಗಾಗಲೇ 2022 ರಲ್ಲಿ ಕಂದಾಯ ವಸೂಲಿಗಾರರಾಗಿ ನಿವೃತ್ತರಾಗಿರುವ ಸಿದ್ದನಾಯಕ್ ಎಂಬಾತ ನಿವೃತ್ತರಾಗಿ ಒಂದೂವರೆ ವರ್ಷಗಳು ಕಳೆದರೂ ಸಹ ಪ್ರತಿನಿತ್ಯ ಕಛೇರಿಗೆ ಹಾಜರಾಗಿ ಕಛೇರಿಯ ಎಲ್ಲ ದಾಖಲೆಗಳನ್ನು ಪರಿಶೀಲಿಸುವ ಮತ್ತು ಕಡತಗಳಲ್ಲಿ ಬರೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಮೂರ್ತಿ ಅಲಿಯಾಸ್ ಕೆಂಚೇನಹಳ್ಳಿ ಮೂರ್ತಿ ಎಂಬಾತ, ವಾಟರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸಹ ಈ ಕಛೇರಿಯಲ್ಲಿ ಕಂದಾಯ ಅಧಿಕಾರಿಗಳ ಕಾರ್ಯವನ್ನು ಮಾಡುತ್ತಾ ಹತ್ತಾರು ಕೋಟಿ ರೂಪಾಯಿಗಳ ಆಸ್ತಿಯನ್ನು ಕಾನೂನು ಬಾಹಿರವಾಗಿ ಮಾಡಿರುತ್ತಾರೆ.
ಯಶವಂತ್ ಕುಮಾರ್, ವಿಜಯ್ ಕುಮಾರ್ ಮತ್ತು ಮುತ್ತುರಾಜ್ ಅವರುಗಳ ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳಿಗೆ ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತರ ಆಪ್ತ ಸಹಾಯಕನಾಗಿರುವ ಗುರುಶಾಂತಪ್ಪ ಎಂಬ ಮತ್ತೊಬ್ಬ ವ್ಯಕ್ತಿ ಎಲ್ಲ ರೀತಿಯ ಸಹಾಯ ಮಾಡುತ್ತಿದ್ದಾರೆ. ಈ ಗುರುಶಾಂತಪ್ಪ ಸಿಎಂಸಿ (CMC) ಅವಧಿ (2006-07) ಯಿಂದಲೂ ಇದೇ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಸಹ ಈತನನ್ನು ಬೇರೆಡೆಗೆ ವರ್ಗಾವಣೆಗೊಳಿಸಲು ಇದುವರೆವಿಗೂ ಯಾವುದೇ ಅಧಿಕಾರಿಗೆ ಸಾಧ್ಯವಾಗಿಲ್ಲ.
ರಾಜರಾಜೇಶ್ವರಿನಗರ ವಲಯದ ಉಪ ಆಯುಕ್ತರಾದ ಅಬ್ದುಲ್ ರಬ್ ರವರು ಈ ಎಲ್ಲಾ ವಂಚಕ ಅಧಿಕಾರಿಗಳು ಹಾಗೂ ನೌಕರರು ಹಾಗೂ ಮಧ್ಯವರ್ತಿಗಳ ಕಾನೂನು ಬಾಹಿರ ಕಾರ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ.
ಮಧ್ಯವರ್ತಿಗಳು ರಾಜರಾಜೇಶ್ವರಿನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಯ ಅಧಿಕಾರಿಗಳ ಆಸನಗಳಲ್ಲಿ ಕುಳಿತು ಪಾಲಿಕೆ ದಾಖಲೆಗಳನ್ನು ಪರಿಶೀಲಿಸುತ್ತಿರುವ ಮತ್ತು Entry ಮಾಡುತ್ತಿರುವ ಛಾಯಾಚಿತ್ರಗಳನ್ನು ಲಗತ್ತಿಸಿರುತ್ತೇನೆ.
ಆದ್ದರಿಂದ, ಈ ಬೃಹತ್ ಹಗರಣವನ್ನು ಗಂಭೀರವಾಗಿ ಪರಿಗಣಿಸಿ ಮೇಲೆ ತಿಳಿಸಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಮತ್ತು ಈ ದಾಖಲೆಗಳೊಂದಿಗೆ ಲಗತ್ತಿಸಿರುವ ಎಲ್ಲ 808 ಸ್ವತ್ತುಗಳಿಗೆ ಸಂಬಂಧಿಸಿದ ನಕಲಿ `ಎ’ ಖಾತಾಗಳನ್ನು ಕೂಡಲೇ ರದ್ದುಗೊಳಿಸುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಹಾಗೂ ಮಧ್ಯವರ್ತಿಗಳನ್ನು ಕಛೇರಿಯಲ್ಲಿ ಸರ್ಕಾರಿ ನೌಕರರು ಕುಳಿತುಕೊಳ್ಳುವ ಜಾಗದಲ್ಲಿ ಕೂರಲು ವ್ಯವಸ್ಥೆ ಮಾಡಿಕೊಟ್ಟಿರುವ ಓಂಕಾರಮೂರ್ತಿ ಎಂಬ ಪ್ರಥಮ ದರ್ಜೆ ಸಹಾಯಕ ಮತ್ತು ಈ ಬೃಹತ್ ಹಗರಣದಲ್ಲಿ ಶಾಮೀಲಾಗಿರುವ ಸಹಾಯಕ ಕಂದಾಯ ಅಧಿಕಾರಿ ಅರುಣ್ ಕುಮಾರ್, ಕಂದಾಯ ಪರಿವೀಕ್ಷಕ ಗಣೇಶ್ ಹಾಗೂ ರಾಜರಾಜೇಶ್ವರಿನಗರ ವಲಯದ ಉಪ ಆಯುಕ್ತರಾದ ಅಬ್ದುಲ್ ರಬ್ ರವರನ್ನು ಕೂಡಲೇ ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಬೇಕೆಂದು ಪಾಲಿಕೆಯ ಮುಖ್ಯ ಆಯುಕ್ತರನ್ನು ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.
ಅಲ್ಲದೆ ಇವರೆಲ್ಲರ ವಿರುದ್ಧ ಭ್ರಷ್ಟಾಚಾರ, ವಂಚನೆ, ನಕಲಿ ದಾಖಲೆ ತಯಾರಿಕೆ ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.