ಬೆಂಗಳೂರು, ಮಾ.9 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ವರ್ಷಂಪ್ರತಿ ಸಾವಿರಾರು ಕೋಟಿ ರೂ. ಮೊತ್ತದಲ್ಲಿ ಎಂಜಿನಿಯರ್ ವಿಭಾಗದಲ್ಲಿ ನೂರಾರು ಕಾಮಗಾರಿಗಳು ಪಾಲಿಕೆಯ ಪ್ರಧಾನ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ನೇತೃತ್ವದಲ್ಲಿ ನಡೆಯುತ್ತಿದೆ. ಇಂತಹ ಮಹತ್ವದ ಜವಾಬ್ದಾರಿಯಲ್ಲಿ ಕೂತಿರುವ ಇವರ ವಿರುದ್ಧ ಪಾಲಿಕೆ ಗುತ್ತಿಗೆದಾರರೊಬ್ಬರಿಂದ ಕಾಮಗಾರಿ ಬಿಲ್ ಪಾವತಿಗೆ 70 ಲಕ್ಷ ರೂಪಾಯಿ ಹಣ ಪಡೆದ ಹಾಗೂ ಭ್ರಷ್ಟಾಚಾರ ಮಾರ್ಗದಿಂದ ಹಲವು ಸ್ಥಿರಾಸ್ತಿಗಳನ್ನು ಖರೀದಿಸಿರುವ ಆರೋಪಿಸಿ ಸಂಬಂಧ ಜಾರಿ ನಿರ್ದೇಶನಾಲಯ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.
ಆರ್ ಟಿಐ ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಎಸ್.ಭಾಸ್ಕರನ್ ಜಾರಿ ನಿರ್ದೇಶನಾಲಯ ಹಾಗೂ ಲೋಕಾಯುಕ್ತ ಸಂಸ್ಥೆಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಫೆ.28ರಂದು ದೂರು ದಾಖಲಿಸಿದ್ದಾರೆ. ಜಾರಿ ನಿರ್ದೇಶನಾಲಯ (Enforcement Directorate – ED)ಕ್ಕೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002 (PMLA)ರ ಅಡಿಯಲ್ಲಿ ಈ ದೂರು ನೀಡಿದ್ದಾರೆ. ಆ ದೂರಿನ ಪ್ರತಿಯು ಬೆಂಗಳೂರು ವೈರ್ ಬಳಿಯಿದೆ.
ಆ ಕಂಪ್ಲೆಂಟ್ ನಲ್ಲಿ, ಪಾಲಿಕೆ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಕಂಪನಿ ಶ್ರೀ ಲಕ್ಷ್ಮಿ ಕನ್ಸ್ಟ್ರಕ್ಷನ್ಸ್ ಆಗಸ್ಟ್ 2023 ರಲ್ಲಿ ಬಿಬಿಎಂಪಿಯ ಪ್ರಧಾನ ಅಭಿಯಂತರ ಬಿ.ಎಸ್. ಪ್ರಹ್ಲಾದ್ ಅವರ ಪತ್ನಿ ಸವಿತ ಬಿ.ಪ್ರಹ್ಲಾದ್ ಅವರ ಕೆನರಾ ಬ್ಯಾಂಕ್ ಖಾತೆಗೆ ₹ 70 ಲಕ್ಷವನ್ನು ವರ್ಗಾಯಿಸಿದೆ. 2023ರ ಸೆಪ್ಟೆಂಬರ್‌ನಲ್ಲಿ, 2 ಕಾಮಗಾರಿಗಳಿಗೆ ಸಂಬಂಧಿಸಿದಂತೆ 3.66 ಕೋಟಿ ರೂ. ಮೊತ್ತದ ಎರಡು ಬಾಕಿ ಬಿಲ್‌ಗಳನ್ನು ಬಿಬಿಎಂಪಿಯಿಂದ 26 ಸೆಪ್ಟೆಂಬರ್ 2023ರಂದು ಕ್ಲಿಯರ್ ಮಾಡಲಾಗಿದೆ.


ಜಕ್ಕೂರು ವಾರ್ಡ್ ನಲ್ಲಿ 2021ರ ಇಸವಿಯವಲ್ಲಿ ಸಾದಿಕ್ ಲೇಔಟ್ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ರಸ್ತೆ ಮತ್ತು ಮೋರಿಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು 1,84,23,453 ರೂ. ಮೊತ್ತದ (ಜಾಬ್ ಕೋಡ್ ಸಂಖ್ಯೆ 006-21-000004) ಕಾಮಗಾರಿಗಳು ಹಾಗೂ 1,81,99,479 ರೂ. ಮೊತ್ತದಲ್ಲಿ ಹೆಗಡೆ ನಗರ ಸುತ್ತಮುತ್ತ ಅದೇ ರೀತಿಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು (ಜಾಬ್ ಕೋಡ್ ಸಂಖ್ಯೆ : 006-21-000005) ಅವುಗಳ ಬಿಲ್ ಪೇಮೆಂಟ್ ಮಾಡಲಾಗಿತ್ತು. ಇದು ಬಾಕಿ ಬಿಲ್‌ಗಳನ್ನು ಪಾವತಿ ಮಾಡಲು ಕಿಕ್‌ಬ್ಯಾಕ್ ಆಗಿದೆ ಎಂದು ಭಾಸ್ಕರನ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಇನ್ನೊಂದೆಡೆ “ಬಿ.ಎಸ್.ಪ್ರಹ್ಲಾದ್ ಹಾಗೂ ಅವರ ಪತ್ನಿ ಬಿ.ಸವಿತಾ ಪ್ರಹ್ಲಾದ್ ಅವರು ಬೇರೆ ಬೇರೆ ರೀತಿಯ ಭ್ರಷ್ಟಾಚಾರ ಹಾಗೂ ಅಕ್ರಮ ಮಾರ್ಗಗಳಿಂದ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ” ಎಂದು ತಮ್ಮ ದೂರಿನಲ್ಲಿ ಆರೋಪಿಸಿರುವ ಎಸ್.ಭಾಸ್ಕರನ್, ಆ ಸ್ಥಿರಾಸ್ತಿಗಳ ಕುರಿತಂತೆ ಸವಿಸ್ತಾರವಾದ ದಾಖಲೆಗಳೊಂದಿಗೆ ಜಾರಿ ನಿರ್ದೇಶನಾಲಯ ಹಾಗೂ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದಾರೆ. ಆ ದೂರಿನಲ್ಲಿರುವಂತೆ ಸ್ಥಿರಾಸ್ತಿಗಳ ವಿವರ ಈ ಕೆಳಕಂಡಂತಿದೆ.
ಪ್ರಹ್ಲಾದ್ ಮತ್ತವರ ಪತ್ನಿಯವರ ಸ್ಥಿರಾಸ್ತಿ ಮಾಹಿತಿ :
ಸವಿತಾ ಬಿ.ಪ್ರಹ್ಲಾದ್ ಅವರ ಹೆಸರಿನಲ್ಲಿ 2.12.2004ರಂದು ಗಾಂಧಿನಗರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸ್ಥಿರಾಸ್ತಿ ಕ್ರಯಪತ್ರ ನೋಂದಣಿಯಾಗಿದೆ. ಅದೇ ರೀತಿ 12.02.2007ರಲ್ಲಿ ಬಿ.ಎಸ್.ಪ್ರಹ್ಲಾದ್ ಹೆಸರಿನಲ್ಲಿ ಇದೇ ಗಾಂಧಿನಗರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸ್ಥಿರಾಸ್ತಿ ಕ್ರಯಪತ್ರ ನೋಂದಣಿಯಾಗಿದೆ. ಹೆಬ್ಬಾಳ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ 10.02.2010ರಂದು ಸವಿತಾ ಪ್ರಹ್ಲಾದ್ ಹೆಸರಿನಿಂದ ಬಿ.ಎಸ್.ಪ್ರಹ್ಲಾದ್ ಹೆಸರಿಗೆ ಸ್ಥಿರಾಸ್ತಿಯೊಂದನ್ನು ಉಡುಗೊರೆಯಾಗಿ ನೀಡಲಾಗಿರುವ ಸಂಬಂಧ ನೇಂದಣಿ ಮಾಡಲಾಗಿದೆ. ಜಾಲ ಹೋಬಳಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 16.02.2010ರಂದು ಸವಿತಾ ಪ್ರಹ್ಲಾದ್ ಹೆಸರಿನಲ್ಲಿ ಸ್ಥಿರಾಸ್ತಿ ಕ್ರಮಪತ್ರ ನೋಂದಣಿಯಾಗಿದೆ. 24.07.2020ರಲ್ಲಿ ಪುನಃ ಸವಿತಾ ಪ್ರಹ್ಲಾದ್ ಹೆಸರಿನಲ್ಲಿ ಯಲಹಂಕ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸ್ಥಿರಾಸ್ತಿ ಕ್ರಮಪತ್ರವು ನೋಂದಣಿಯಾಗಿದೆ. ಇನ್ನು 28.10.2022ರಲ್ಲಿ ಬಿ.ಸವಿತಾ ಪ್ರಹ್ಲಾದ್ ಹೆಸರಿನಲ್ಲಿ ಪುನಃ ಗಾಂಧಿನಗರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕ್ರಯಪತ್ರ ನೋಂದಾವಣಿಯಾಗಿದೆ. 14.03.2023ರಲ್ಲಿ ಮತ್ತೆ ಬ್ಯಾಟರಾಯನಪುರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸ್ಥಿರಾಸ್ತಿ ಕ್ರಯಪತ್ರ ನೋಂದಣಿಯಾಗಿದೆ. ಮತ್ತು ಅದೇ ದಿನ ಮತ್ತೊಂದು ಸ್ಥಿರಾಸ್ತಿ ಕ್ರಮಪತ್ರವು ಸವಿತ ಅವರ ಹೆಸರಿನಲ್ಲಿ ನೋಂದಣಿಯಾಗಿದೆ.
ಒಟ್ಟಾರೆ ಪ್ರಹ್ಲಾದ್ ಅವರ ಹೆಸರಿನಲ್ಲಿ ಒಂದು ಉಡುಗೊರೆಯಾಗಿ ಬಂದ ಸ್ಥಿರಾಸ್ತಿ ಹಾಗೂ ಅವರ ಪತ್ನಿ ಹೆಸರಿನಲ್ಲಿ 7 ಸ್ಥಿರಾಸ್ತಿಗಳು 2004ರ ಅವಧಿಯಿಂದ 2023ರ 19 ವರ್ಷಗಳಲ್ಲಿ ನೋಂದಣಿಯಾಗಿದೆ ಎಂದು ಎಸ್.ಭಾಸ್ಕರನ್ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಕೆನರಾ ಬ್ಯಾಂಕ್ ಗಂಗಾನಗರ ಶಾಖೆಯಲ್ಲಿ ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಅವರ ಪತ್ನಿ ಬಿ.ಸವಿತಾ ಅವರು ಹೊಂದಿರುವ ಖಾತೆಯನ್ನು ಬೆಂಗಳೂರು ವಲಯದ ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿಕೊಳ್ಳಬೇಕು. ಈ ಇಬ್ಬರು ಪತಿ ಪತ್ನಿಯರು ಭ್ರಷ್ಟಾಚಾರದ ಮೂಲಕ ಹಣ ಸಂಪಾದಿಸಿದ್ದು, ಪ್ರಹ್ಲಾದ್ ದಂಪತಿಗಳು ಹೊಂದಿರುವ ಎಲ್ಲಾ ಬ್ಯಾಂಕ್ ಖಾತೆಗಳ ವ್ಯವಹಾರಗಳ ಬಗ್ಗೆ ಇಡಿ ತನಿಖೆ ಕೈಗೊಳ್ಳಬೇಕು. ಮತ್ತು ಅಕ್ರಮ ಮಾರ್ಗಗಳ ಮೂಲಕ ಸಂಪಾದಿಸಿರುವ ಹಣದ ಮೂಲದ ಬಗ್ಗೆ ಹಾಗೂ ಹಲವು ಸ್ಥಿರಾಸ್ತಿಗಳನ್ನು ಖರೀದಿಸಲು ಬಳಸಿರುವ ಹಣ ಮೂಲವನ್ನು ಪತ್ತೆ ಹಚ್ಚಿ ಇಬ್ಬರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಭಾಸ್ಕರನ್ ಜಾರಿ ನಿರ್ದೇಶನಾಲಯ ಹಾಗೂ ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಆರ್ ಟಿಐ ಕಾರ್ಯಕರ್ತ ಎಸ್.ಭಾಸ್ಕರನ್ ಅವರನ್ನು ಬೆಂಗಳೂರು ವೈರ್ ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು,
“ಅಕ್ರಮ ಮಾರ್ಗಗಳಿಂದ ಮತ್ತು ಭ್ರಷ್ಟಾಚಾರದಿಂದ ಬಿಬಿಎಂಪಿಯ ಪ್ರಧಾನ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಹಾಗೂ ಅವರ ಪತ್ನಿ ಬಿ.ಸವಿತ ಪ್ರಹ್ಲಾದ್ ಹಣ ಸಂಪಾದಿಸಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಕೂಡಲೇ ಪ್ರಹ್ಲಾದ್ ಅವರು ಹೊಂದಿರುವ ಬಿಬಿಎಂಪಿ ಪ್ರಧಾನ ಅಭಿಯಂತರರು, ಬೃಹತ್ ನೀರುಗಾಲುವೆ ಚೀಫ್ ಎಂಜಿನಿಯರ್ ಹಾಗೂ ಬೃಹತ್ ರಸ್ತೆ ಮತ್ತು ಮೂಲ ಸೌಕರ್ಯ ವಿಭಾಗ ಚೀಫ್ ಎಂಜಿನಿಯರ್ ಹುದ್ದೆಯಿಂದ ತೆರವು ಮಾಡಬೇಕು. ಇವರ ವಿರುದ್ಧ ನಾನು ಫೆಬ್ರವರಿ 28ರಂದು ಜಾರಿ ನಿರ್ದೇಶನಾಲಯ ಹಾಗೂ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದೇನೆ. ಈ ಸಂಬಂಧ ಎರಡು ಸಂಸ್ಥೆಗಳು ಕೂಡಲೇ ಈ ದೂರಿನ ಸಂಬಂಧ ತನಿಖೆ ಆರಂಭಿಸಬೇಕು. ಈ ವಿಷಯದ ಬಗ್ಗೆ ಸದ್ಯದಲ್ಲೇ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಿದ್ದೇನೆ.”
– ಎಸ್.ಭಾಸ್ಕರನ್, ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟಗಾರ
ಬಿಬಿಎಂಪಿಯಲ್ಲಿ ಎಂಜಿನಿಯರ್ ಗಳಿಗೆ ಬರವೇ?
ಒಬ್ಬ ವ್ಯಕ್ತಿಗೆ ಹಲವು ಮಹತ್ವದ ಹುದ್ದೆಗಳನ್ನು ನೀಡುವುದು ಎಷ್ಟು ಸರಿ?
ಬಿಬಿಎಂಪಿಯ ಇಂಜಿನಿಯರ್ ಚೀಫ್ ಆಗಿರುವ ಬಿ.ಎಸ್.ಪ್ರಹ್ಲಾದ್ ಇಡೀ ಬಿಬಿಎಂಪಿಯ ಎಲ್ಲಾ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ಗಳಿಗಿಂತ ಮೇಲಿನ ಶ್ರೇಣಿಯಲ್ಲಿರುವ ಅಧಿಕಾರಿ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಮೊತ್ತದ ಕಾಮಗಾರಿ ನಡೆಸುವ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದಲ್ಲಿ 2016ರಲ್ಲಿ ಸೂಪರಿಟೆಂಡೆಂಟ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ಆನಂತರ 2020ರಲ್ಲಿ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಬೃಹತ್ ನೀರುಗಾಲುವೆಯಂತಹ ಚಿನ್ನದ ಮೊಟ್ಟೆಯಿಡುವ ಹುದ್ದೆಯನ್ನು ಇನ್ ಚೀರ್ಜ್ ಚೀಫ್ ಎಂಜಿನಿಯರ್ ಆಗಿ 2016ರಿಂದ ಕೆಲಸ ಮಾಡಿ ನಂತರ 2019ರಲ್ಲಿ ಚೀಫ್ ಎಂಜಿನಿಯರ್ ಆಗಿ ಮುಂದುವರೆದಿದ್ದಾರೆ. ಇಂಜಿನಿಯರ್ ಚೀಫ್ ಆಗಿರುವ ಪ್ರಹ್ಲಾದ್ ಈತನಕ ಕೆಳ ಹಂತದ ಹುದ್ದೆಯಾದ ಚೀಫ್ ಎಂಜಿನಿಯರ್ ಪದವಿಯನ್ನು ಈಗಲೂ ಬಿಟ್ಟು ಕೊಡುತ್ತಿಲ್ಲ ಎಂಬುದರ ಹಿಂದೆ ಹಲವು ಅನುಮಾನಗಳು ಎದ್ದಿವೆ.
ಇದೇ ಇಂಜಿನಿಯರ್ ಚೀಫ್ ಬೃಹತ್ ನೀರುಗಾಲುವೆ ಹಾಗೂ ರಸ್ತೆ ಮೂಲಸೌಕರ್ಯ ವಿಭಾಗದ ಚೀಫ್ ಎಂಜಿನಿಯರ್ ಹುದ್ದೆಯನ್ನು ಹೊಂದಿದ್ದಾರೆ. ಹೀಗಿರುವಾಗ ಗುಣಮಟ್ಟ ನಿಯಂತ್ರಣ ವಿಭಾಗದ ಚೀಫ್ ಎಂಜಿನಿಯರ್, ಪಾಲಿಕೆಯ ಎಂಜಿನಿಯರಿಂಗ್ ಚೀಫ್ ಆಗಿರೋ ಹಾಗೂ ಇದೇ ರಸ್ತೆಮೂಲಸೌಕರ್ಯ ಮತ್ತು ಬೃಹತ್ ನೀರುಗಾಲುವೆ ವಿಭಾಗದ ಚೀಫ್ ಎಂಜಿನಿಯರ್ ಆಗಿರುವ ಪ್ರಹ್ಲಾದ್ ಅವರಿಗೆ ಅದೇ ಎರಡು ವಿಭಾಗಗಳಲ್ಲಿ ತಮ್ಮ ಉಸ್ತುವಾರಿಯಲ್ಲಿ ಕೈಗೊಂಡ ಸಾವಿರಾರು ಕೋಟಿ ರೂ. ಮೊತ್ತದ ಕಾಮಗಾರಿಗಳ ಗುಣಮಟ್ಟದ ವರದಿ ನೀಡುವುದು ಎಷ್ಟು ಸರಿ. ಒಂದೊಮ್ಮೆ ರಸ್ತೆ ಮೂಲಸೌಕರ್ಯ ಮತ್ತು ಬೃಹತ್ ನೀರುಗಾಲುವೆಯಲ್ಲಿ ಕಳಪೆ ಗುಣಮಟ್ಟದ ಕಾಮಗಾರಿಯನ್ನು ಕೈಗೊಂಡಾಗ, ಗುಣಮಟ್ಟ ನಿಯಂತ್ರಣ ವಿಭಾಗದವರು ಈ ಸಂಬಂಧ ಇಂಜಿನಿಯರಿಂಗ್ ಚೀಫ್ ಪ್ರಹ್ಲಾದ್ ಗೆ ವರದಿ ನೀಡಿದಾಗ, ತನ್ನ ಎರಡು ವಿಭಾಗವನ್ನು ಸಮರ್ಥನೆ ಮಾಡಿಕೊಳ್ಳಲು ಈ ವರದಿ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇದಲ್ಲದೆ ಕೆಸಿ ವ್ಯಾಲಿ ಚೀಫ್ ಎಂಜಿನಿಯರ್ ಹಾಗೂ ಬೆಂಗಳೂರು ಸ್ಮಾರ್ಟ್ ಸಿಟಿಯಲ್ಲಿ ಪ್ರಭಾವಿ ಹುದ್ದೆಯನ್ನು ಪ್ರಹ್ಲಾದ್ ಹೊಂದಿದ್ದಾರೆ. ಪಾಲಿಕೆಯಲ್ಲಿ ಈ ಎಲ್ಲಾ ಹುದ್ದೆಗಳಿಗೆ ಅರ್ಹ ಎಂಜಿನಿಯರ್ ಗಳು ಲಭ್ಯವಿಲ್ಲವಾ ಎಂಬ ಮಾತುಗಳು ಪಾಲಿಕೆ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ಶೆಡ್ ಗುತ್ತಿಗೆಗೆ ನೀಡಿದ ಹಣವದು, ಕಿಕ್ ಬ್ಯಾಕ್ ದುಡ್ಡಲ್ಲ :
“ಆರ್ ಟಿಐ ಕಾರ್ಯಕರ್ತ ಎಸ್.ಭಾಸ್ಕರನ್ ಆರೋಪಿಸುವಂತೆ ನನ್ನ ಹಾಗೂ ನನ್ನ ಪತ್ನಿಯಲ್ಲಿರೋ ಸ್ಥಿರಾಸ್ತಿಗಳು ನಮ್ಮ ಹೆಸರಿನಲ್ಲೇ ಇದೆ. ಇದು ನಮ್ಮ ಅಧಿಕೃತ ಆಸ್ತಿಗಳು. ಇತ್ತೀಚೆಗೆ ಕಾವೇರಿ ತಂತ್ರಾಂಶದಲ್ಲಿ ಯಾರ ಸ್ಥಿರಾಸ್ತಿಗಳನ್ನು ಬೇಕಾದರೂ ಸುಲಭವಾಗಿ ಹುಡುಕಬಹುದು. ಅದನ್ನು ಬಳಸಿಕೊಂಡು ವೃತಾ ಆರೋಪ, ದೂರು ನೀಡುವುದು ಸರಿಯಲ್ಲ. , ದೊಡ್ಡಬಳ್ಳಾಪುರ ಮುಖ್ಯರಸ್ತೆ ಮಾರಸಂದ್ರದಲ್ಲಿನ ನಮ್ಮ ಶೆಡ್ ಅನ್ನು ಶ್ರೀ ಲಕ್ಷ್ಮಿ ಕನ್ ಸ್ಟ್ರಕ್ಷನ್ ಸಂಸ್ಥೆಯ ಮಾಲೀಕ ಮಂಜುನಾಥ್ ಅವರಿಗೆ ಲೀಸ್ ಗೆ ನೀಡಲಾಗಿತ್ತು. ಇದಕ್ಕಾಗಿ ತಮ್ಮ ಪತ್ನಿಯ ಬ್ಯಾಂಕ್ ಖಾತೆಗೆ 70 ಲಕ್ಷ ಹಣವನ್ನು ಅವರು ವರ್ಗಾವಣೆ ಮಾಡಿದ್ದರು. ಬಹಳ ಕಡಿಮೆ ದುಡ್ಡಿಗೆ ಲೀಸ್ ಅಗ್ರಿಮೆಂಟ್ ಮಾಡಿದ್ದು ತದನಂತರ ಆ ಲೀಸ್ ಅಗ್ರಿಮೆಂಟ್ ರದ್ದುಪಡಿಸಿ ಅವರಿಗೆ ಹಣ ಮರಳಿಸಲಾಗಿದೆ. ಆತನಿಗೆ ಶೆಡ್ ಲೀಸ್ ಕೊಡುವಾಗ ಅವರು ಬಿಬಿಎಂಪಿ ಗುತ್ತಿಗೆದಾರ ಎಂಬುದು ತಿಳಿದಿರಲಿಲ್ಲ. ಭಾಸ್ಕರನ್ ಆರೋಪಿಸುವಂತೆ ಶ್ರೀ ಲಕ್ಷ್ಮಿ ಕನ್ ಸ್ಟ್ರಕ್ಷನ್ ಕಾಮಗಾರಿ ಗುತ್ತಿಗೆ ಬಿಲ್ ಪಾವತಿಗೂ ನಮಗೆ ಲೀಸ್ ಹಣ ಅವರು ನೀಡಿದ್ದಕ್ಕೂ ಒಂದಕ್ಕೊಂದು ಸಂಬಂಧ ಕಲ್ಪಿಸುವುದು ಸರಿಯಲ್ಲ. ನಾನು ಯಾವುದೇ ಕಿಕ್ ಬ್ಯಾಕ್ ಪಡೆದಿಲ್ಲ.”
- ಬಿ.ಎಸ್.ಪ್ರಹ್ಲಾದ್, ಪ್ರಧಾನ ಎಂಜಿನಿಯರ್, ಬಿಬಿಎಂಪಿ
ಶೆಡ್ ಲೀಸ್ ಗೆ ನೀಡಿದ್ದ 70 ಲಕ್ಷ ರೂ. ಹಣ ವಾಪಸ್ ಬಂದಿದೆ : ಕಾಂಟ್ರಾಕ್ಟರ್!!
ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀ ಲಕ್ಷ್ಮಿ ಕನ್ ಸ್ಟ್ರಕ್ಷನ್ ಕಂಪನಿಯ ಮಾಲೀಕರು ಹಾಗೂ ಬಿಬಿಎಂಪಿ ಗುತ್ತಿಗೆದಾರ ಮಂಜುನಾಥ್ ಅವರನ್ನು ಬೆಂಗಳೂರು ವೈರ್ ಸಂಪರ್ಕಿಸಿದಾಗ, “ಪೀಣ್ಯಾದಲ್ಲಿ ನಮ್ಮ ಶ್ರೀ ಲಕ್ಷ್ಮಿ ಕನ್ ಸ್ಟ್ರಕ್ಷನ್ ಕಂಪನಿಯ ಕಾರ್ಖಾನೆಯಿದೆ. ದೊಡ್ಡಬಳ್ಳಾಪುರದಲ್ಲಿ ದೊಡ್ಡ ಕೆಲಸ ಲಭಿಸಿತ್ತು. ಆ ಕಾರಣಕ್ಕಾಗಿ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಭೋಗ್ಯಕ್ಕೆ ದೊಡ್ಡ ಶೆಡ್ ನೋಡುತ್ತಿದ್ದಾಗ ಪ್ರಹ್ಮಾದ್ ಅವರ ಶೆಡ್ ಖಾಲಿಯಿದ್ದಿದ್ದು ಕಂಡು ಬಂತು. ಸುಮಾರು 11,000 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ 9,800 ಚದರ ಅಡಿ ಶೆಡ್ ನಿರ್ಮಾಣವಾಗಿತ್ತು. ಅಲ್ಲಿ ಆಗಸ್ಟ್ 2023ರಂದು ಶೆಡ್ ಅನ್ನು ಅವರಿಂದ ಲೀಸ್ ಗೆ ಪಡೆದು ಅದರ ಬಾಬ್ತು 70 ಲಕ್ಷ ಹಣವನ್ನು ಅವರ ಪತ್ನಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. 2021ರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಂಡಿದ್ದು 2023ರ ಸೆಪ್ಟೆಂಬರ್ ನಲ್ಲಿ ಕೆಲಸ ನಿರ್ವಹಿಸಿದ ಶೇ.75ರಷ್ಟು ಹಣ ಬಂತು” ಎಂದು ಅವರು ಹೇಳಿದ್ದಾರೆ.
.”ತಾವು 10 ವರ್ಷಗಳ ಬಳಿಕ ಪಾಲಿಕೆಯಲ್ಲಿ ಎರಡು ಕಾಮಗಾರಿಯನ್ನು ಮಾಡಿದ್ದೇನೆ ಅಷ್ಟೆ. ಈ ಕಾಮಗಾರಿಗೂ, ಲೀಸ್ ಹಣವನ್ನು ನಾನು ಅವರ ಪತ್ನಿ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಕ್ಕೂ ಸಂಬಧವೇ ಇಲ್ಲ. ನನಗೆ ಆ ಜಾಗ ಬಿಬಿಎಂಪಿ ಚೀಫ್ ಇಂಜಿನಿಯರ್ ಚೀಫ್ ಪ್ರಹ್ಲಾದ್ ಅವರಿಗೆ ಸೇರಿದ್ದು ಅಂತ ಗೊತ್ತಿರಲಿಲ್ಲ. ಅವರ ಜಾಗದಲ್ಲಿ ಫ್ಯಾಕ್ಟರಿಗಾಗಿ 20 ಲಕ್ಷ ರೂ. ಕರ್ಚು ಮಾಡಿದ್ದೆ. ಇದೀಗ ಗುತ್ತಿಗೆ ಒಪ್ಪಂದ ರದ್ದು ಮಾಡಿ 70 ಲಕ್ಷ ರೂ. ಹಣ ವಾಪಸ್ ಮರಳಿಸಿದ್ದಾರೆ. 20 ಲಕ್ಷ ಹೂಡಿಕೆ ಮಾಡಿದ್ದು ನಷ್ಟವಾಗಿದೆ” ಎಂದು ಮಂಜುನಾಥ್ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ?
ಒಟ್ಟಿನಲ್ಲಿ ಬಿಬಿಎಪಿ ಇಂಜಿನಿಯರ್ ಚೀಫ್, ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಹಾಗೂ ಬೃಹತ್ ನೀರುಗಾಲುವೆ ಚೀಫ್ ಎಂಜಿನಿಯರ್, ಕೆಸಿ ವ್ಯಾಲಿ ಮುಖ್ಯ ಎಂಜಿನಿಯರ್, ಸ್ಮಾರ್ಟ್ ಸಿಟಿಯಲ್ಲಿ ಪ್ರಭಾವಿ ಹುದ್ದೆಯನ್ನು ಹೊಂದಿರುವ ಬಿ.ಎಸ್. ಪ್ರಹ್ಲಾದ್ ವಿರುದ್ಧ ಬಂದಿರುವ ಆರೋಪಗಳ ಬಗ್ಗೆ ಜಾರಿ ನಿರ್ದೇಶನಾಲಯ ಹಾಗೂ ಲೋಕಾಯುಕ್ತ ಸಂಸ್ಥೆಯು ಯಾವ ರೀತಿ ಕ್ರಮ ಕೈಗೊಳ್ಳಲಿದೆ ಮತ್ತು ರಾಜ್ಯ ಸರ್ಕಾರವು ಇಂತಹ ಮಹತ್ವದ ಹುದ್ದೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪದ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.