ಬೆಂಗಳೂರು, ಮಾ.8 www.bengaluruwire.com : ರಾಜಧಾನಿಯಲ್ಲಿ ಒಂದೆಡೆ ಬಿರು ಬಿಸಲು ಒಂದೆಡೆ ಏರಿಕೆಯಾಗ್ತಿದ್ದರೆ ಮತ್ತೊಂದು ಕಡೆ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಕಾವೇರಿ ನೀರು ಪೂರೈಕೆ ಎಲ್ಲೆಡೆ ಸಮರ್ಪಕವಾಗಿ ಆಗುತ್ತಿಲ್ಲ. ಇದರಿಂದ ಬೇಸೆತ್ತ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಒಬ್ಬರು ನೀರಿನ ಸಮಸ್ಯೆ ಬಗ್ಗೆ ಫೇಸ್ ಬುಕ್ ನಲ್ಲಿ ಖುದ್ದು ರೀಲ್ಸ್ ಮಾಡಿದ್ದು ಎಲ್ಲೆಡೆ ವೈರಲ್ ಆಗ್ತಿದೆ.
ನಟ ಮತ್ತು ನಿರ್ದೇಶಕ ಉಪೇಂದ್ರ ಅವರ ಚಿತ್ರದ “ಏನಿಲ್ಲ…ಏನಿಲ್ಲ…ನನ್ನ ನಿನ್ನ ನಡುವೆ ಏನಿಲ್ಲ…” ಎಂಬ ಗೀತೆಯನ್ನು ಈಗ ಎಲ್ಲೆಡೆ ಬೇರೆ ಬೇರೆ ರೀತಿಯ ರೀಲ್ಸ್ ಗೆ ಬಳಸಲಾಗ್ತಿದೆ. ಅದೇ ಹಾಡಿನ ಸಂಗೀತವನ್ನು ಬಳಸಿ ಬೊಮ್ಮನಹಳ್ಳಿ ವಾರ್ಡಿನ ಮಾಜಿ ಪಾಲಿಕೆ ಸದಸ್ಯ ಮೋಹನ್ ರಾಜ್ ನಗರದಲ್ಲಿನ ನೀರಿನ ಸಮಸ್ಯೆಯನ್ನು ಜನತೆಗೆ ತಿಳಿಸಲು ರೀಲ್ಸ್ ಮೊರೆಹೋಗಿದ್ದಾರೆ.
ಮನೆಯಲ್ಲಿರೋ ಹೆಂಗಸರು, ಕಾಲಿಯಾದ ನೀರಿನ ಪಾತ್ರೆ, ಬಿಂದಿಗೆಯನ್ನು ರಸ್ತೆ ಹಾಕಿ ಪಾತ್ರೆ ತೊಳೆಯಲು, ಕುಡಿಯಲೂ ನೀರಿಲ್ವೇ ಅಂತ ಬೈಯ್ಕೊಂಡು ಮನೆಯಿಂದ ಹೊರಬರುವ ದೃಶ್ಯದೊಂದಿಗೆ ರೀಲ್ಸ್ ಆರಂಭವಾಗುತ್ತೆ. ಬೀದಿಯಲ್ಲಿ ಕಾಲಿ ಬಿಂದಿಗೆ ಹಿಡಿದುಕೊಂಡು ನಿಂತಿರೋ ಮಹಿಳೆಯರು, ರಸ್ತೆಯಂಚಲ್ಲಿ ಬೀದಿ ಬದಿ ನಲ್ಲಿ ಮುಂದೆ ಸಾಲಲ್ಲಿ ಕೊಡವನ್ನು ಇಟ್ಟು ನೀರಿಗಾಗಿ ಕಾಯುವ ದೃಶ್ಯಗಳನ್ನು ಬಳಸಿಕೊಂಡುಮಾಜಿ ಕಾರ್ಪೊರೇಟರ್ ಮೋಹನ್ ರಾಜ್ ತಾವೇ ಸ್ವತಃ “ನೀರಿಲ್ಲ ನೀರಿಲ್ಲ ಬೆಂಗಳೂರಿನಲ್ಲಿ ನೀರಿಲ್ಲ….ಮೋರಿಲಿರೋ ನೀರು ನೀರಲ್ಲ ಕುಡಿಯೋಕು ತೊಳ್ಕೊಳೋಕು ನೀರಿಲ್ಲ…..ಬರ್ತ್ತಿಲ್ಲ ಬರ್ತ್ತಿಲ್ಲ ಕಾವೇರಿ ನೀರು ಬರ್ತಿಲ್ಲ…..ತಮಿಳುನಾಡಿಗೆ ಮಾರ್ಬಿಟ್ರಲ್ಲ, ನಮಗೀಗ ಕುಡಿಯೋಕೆ ನೀರೇ ಇಲ್ಲ…..ನೀರಿಲ್ಲ ನೀರಿಲ್ಲ ಬೋರ್ ವೆಲ್ಲಲ್ಲೂ ನೀರಿಲ್ಲ….ಕಾವೇರಿ ನೀರೂ ಮೊದಲೇ ಇಲ್ಲ….ಗೋವಿಂದ ಗೋವಿಂದಾ….ಎಂದು ಹಾಡುತ್ತಾ ನಗರದ ನೀರಿನ ಸಮಸ್ಯೆಯ ಬಗ್ಗೆ, ನೀರಿನ ಮಿತ ಬಳಕೆಯ ಮಹತ್ವದ ಕುರಿತು ತಿಳಿಸಿದ್ದಾರೆ.
ಈ ರೀಲ್ಸ್ ಮಾಡಿರುವ ಬಗ್ಗೆ ಅವರನ್ನು ಕೇಳಿದ್ರೆ, ” ನಗರದಲ್ಲಿ ಅಂತರ್ಜಲ ಮಟ್ಟ ತೀರ ಕುಸಿದಿದೆ. ಜನರು ಕುಡಿಯುವ ನೀರಿಗಾಗಿ ಸಾಕಷ್ಟು ತೊಂದರೆಗೊಳಗಾಗಿದ್ದಾರೆ. ನಾವಿನ್ನು ಮಾರ್ಚ್ ತಿಂಗಳ ಆರಂಭದಲ್ಲಿದ್ದೇವೆ. ಈ ತಿಂಗಳಾಂತ್ಯಕ್ಕೆ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುತ್ತದೆ. ಈ ಕಾಂಗ್ರೆಸ್ ಸರ್ಕಾರ ಸುಪ್ರೀಂಕೋರ್ಟಿಗೆ ಸರಿಯಾಗಿ ಮನವರಿಕೆ ಮಾಡಿಕೊಟ್ಟಿದ್ದರೆ, ನಮ್ಮ ಕೆಆರ್ ಎಸ್ ಜಲಾಶಯದಲ್ಲಿ ನೀರು ಬರಿದಾಗುತ್ತಾ ಬಂದರೂ ತಮಿಳುನಾಡಿಗೆ ನೀರು ಬಿಡುವ ಪ್ರಮೇಯ ಬರ್ತಿರಲಿಲ್ಲ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಿಂಬಿಸಲು ರೀಲ್ಸ್ ಮೊರೆ ಹೋಗಬೇಕಾಯ್ತು” ಎಂದು ಅವರು ಹೇಳಿದರು.
ಫೇಸ್ ಬುಕ್ ನಲ್ಲಿ ಮೋಹನ್ ರಾಜ್ ಮಾಡಿರೋ ರೀಲ್ಸ್ ಲಿಂಕ್ ಇಲ್ಲಿದೆ : https://www.facebook.com/reel/426574686564840?mibextid=NTRm0r7WZyOdZZsz
ನಗರದ ಜನಪ್ರತಿನಿಧಿಯೊಬ್ಬರು ನೀರಿನ ಸಮಸ್ಯೆಯನ್ನು ಬಿಂಬಿಸಲು ಸಾಮಾಜಿಕ ಮಾಧ್ಯಮದ ಮೂಲಕ ರೀಲ್ಸ್ ಮೊರೆ ಹೋಗಿದ್ದು ಇದೇ ಪ್ರಥಮ ಎನ್ನಬಹುದು.
ಅಪಾರ್ಟ್ ಮೆಂಟ್ ಗಳಲ್ಲಿ ನೀರಿನ ಬಳಕೆಗೆ ಮಿತಿ :
ಏಕಂದರೆ ಬೆಂಗಳೂರಿನಲ್ಲಿ ಕಳೆದ ಬಾರಿ ಸಮರ್ಪಕವಾಗಿ ಮಳೆಯಾಗಿಲ್ಲ. ಈ ಬಾರಿಯೂ ಮುಂಗಾರುಪೂರ್ವ ಮಳೆಯಾಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ನಗರದ ಬಹುತೇಕ ಬೋರ್ ವೆಲ್ ಗಳಲ್ಲಿ ನೀರು ಬತ್ತಿ ಹೋಗಿದೆ. ಎಷ್ಟೋ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಗಳು ನೀರನ್ನು ರೇಷನ್ ರೂಪದಲ್ಲಿ ಟ್ಯಾಂಕರ್ ಗಳ ಮೂಲಕ ತರಿಸಿಕೊಂಡು ಪೂರೈಸುತ್ತಿದೆ. ಕೆಲವು ಅಪಾರ್ಟ್ ಮೆಂಟ್ ಗಳಲ್ಲಿ ನೀರಿನ ಬಳಕೆಗೆ ಮಿತಿ ಹೇರಿವೆ.
ಬೋರ್ ವೆಲ್ ಕೊರೆಯುವ ಸಂಸ್ಥೆಗಳಿಗೆ ಡಿಮ್ಯಾಂಡ್ :
“ಬೋರ್ ವೆಲ್ ಕೊರೆಯುವ ಸಂಸ್ಥೆಗಳಿಗೆ ಈಗ ಹಬ್ಬವೋ ಹಬ್ಬ. ಕೊಳವೆಬಾವಿ ನೀರಿನ ಮಟ್ಟ ಕುಸಿದ ಕಾರಣ ಹೆಚ್ಚುವರಿ ಪೈಪ್ ಹಾಕಲು ಈಗ ಬೇಡಿಕೆಯೋ ಬೇಡಿ. ಬೋರ್ ವೆಲ್ ಕೊರೆಯುವ ಸಂಸ್ಥೆಗಳಿಗೆ ಈಗ ಬೇಡಿಕೆ ಎಷ್ಟಿದೆಯೆಂದರೆ ಈಗ ಬನ್ನಿ ಅಂದ್ರೆ 10-15 ದಿನ ಬಿಟ್ಟು ಬೋರ್ ವೆಲ್ ಕೊರೆಯೋಕೆ ಬರ್ತಿದ್ದಾರೆ” ಎಂದು ಹೇಳುತ್ತಾರೆ ವೈಟ್ ಫೀಲ್ಡ್ ನಿವಾಸಿ ಸೋಮಶೇಖರ್.
ವಾರಕ್ಕೊಮ್ಮೆ ಕಾವೇರಿ ನೀರು ಪೂರೈಕೆಯ ಅರ್ಧ ಗಂಟೆ ಶೋ :
ನಗರದ ಹಲವು ಕಡೆ ಕಾವೇರಿ ನೀರು ಪೂರೈಕೆ ಎರಡು ದಿನಕ್ಕೊಮ್ಮೆ, ವಾರಕ್ಕೆ ಎರಡು ದಿನ ಇದ್ದಿದ್ದು ಈಗ ವಾರಕ್ಕೊಮ್ಮೆ ಕಾವೇರಿ ಪೂರೈಕೆಯಾಗುತ್ತಿದೆ. ಈ ಸಂದರ್ಭದಲ್ಲಿ ನೀರು ಪೂರೈಕೆಯ ಅವಧಿ 2-3 ಗಂಟೆಯಿಂದ 1/2 ಗಂಟೆಗೆ ಇಳಿದಿದೆ ಎಂದು ಸಾಕಷ್ಟು ದೂರುಗಳಿವೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.