ಸೌದಿ ಅರೇಬಿಯಾದ ಮೊದಲ ಪುರುಷ ಹುಮನಾಯ್ಡ್ ರೋಬೋಟ್ (Saudi Arabia’s first male humanoid robot) ‘ಮುಹಮ್ಮದ್’ ಅನ್ನು ಇತ್ತೀಚೆಗೆ ರಿಯಾದ್‌ನಲ್ಲಿ ನಡೆದ ಡೀಪ್‌ಫಾಸ್ಟ್‌ನ ಎರಡನೇ ಆವೃತ್ತಿಯಲ್ಲಿ ಅನಾವರಣಗೊಳಿಸಿದ್ದು, ಬಿಡುಗಡೆಯ ಸಮಯದಲ್ಲಿ ಮಹಿಳಾ ಸುದ್ದಿ ವರದಿಗಾರರನ್ನು ಅನುಚಿತವಾಗಿ ಸ್ಪರ್ಶಿಸಿದ ನಂತರ ಈ ವಿಷಯವು ಸಾಮಾಜಿಕ ಮಾಧ್ಯಮದಲ್ಲಿ ವಿವಾದವನ್ನು ಹುಟ್ಟುಹಾಕಿದೆ.
ಈ ಘಟನೆಯ 7 ಸೆಕೆಂಡ್ ಗಳ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಆ ವಿಡಿಯೋದಲ್ಲಿ, ಮಹಿಳಾ ವರದಿಗಾರ್ತಿ ರಾವ್ಯಾ ಕಸ್ಸೆಮ್ ವರದಿಗಾರಿಕೆಯಲ್ಲಿ ತೊಡಗಿದ್ದಾಗ ಆಕೆಯ ಸೊಂಟದ ಹಿಂಭಾಗಕ್ಕೆ ರೋಬಾಟ್ ತನ್ನ ಕೈಯನ್ನು ಚಾಚುವ ಹಾಗೂ ತೋರಿಕೆಯಲ್ಲಿ ಆಕೆಯ (Butt) ಪೃಷ್ಠವನ್ನು ಸ್ಪರ್ಶಿಸುವ ದೃಶ್ಯ ಕಂಡುಬಂದಿದೆ. ಅದನ್ನು ಹಿಮ್ಮೆಟ್ಟಿಸಲು ಕಸ್ಸೆಂ ಕ್ಷಣಕಾಲ ಕೈ ಎತ್ತಬೇಕಾಯಿತು.
ವೀಡಿಯೊಗೆ ಪ್ರತಿಕ್ರಿಯಿಸಿದ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ರೋಬೋಟ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಬಹುದೆಂದು ಹೇಳಿಕೊಂಡರೆ, ಇತರರು ವರದಿಗಾರ್ತಿಯು ಹುಮನಾಯ್ಡ್‌ಗೆ ಸಾಕಷ್ಟು ಹತ್ತಿರದಲ್ಲಿ ನಿಂತಿದ್ದರಿಂದ ಮುಂದೆ ಹೋಗುವಂತೆ ಪ್ರೇರೇಪಿಸುವ ಕ್ರಮವಾಗಿರಬಹುದೆಂದು ಸೂಚಿಸಿದ್ದಾರೆ.
ಮೊಹಮ್ಮದ್ ಎಂಬ ಪುರುಷ ಹುಮನಾಯ್ಡ್ ರೋಬೋಟ್ ಉದ್ಘಾಟನಾ ಸಮಯದಲ್ಲಿ, ಸಾಂಪ್ರದಾಯಿಕ ಬಿಳಿ ಥ್ಯಾಬ್ ಮತ್ತು ಕೆಂಪು ಕೆಫಿಯೆಹ್ ಅನ್ನು ಧರಿಸಿತ್ತು. ಈ ರೋಬೋಟ್, ದೋಷರಹಿತ ಅರೇಬಿಕ್ ಭಾಷೆಯಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿತು ಎಂದು ಗಲ್ಫ್ ಬಿಸಿನೆಸ್ ವರದಿ ಮಾಡಿದೆ. ಕ್ಯುಎಸ್ ಎಸ್ ಸಿಸ್ಟಮ್ಸ್ (QSS System) ಪುರುಷ ಹುಮನಾಯ್ಡ್ ರೋಬೋಟ್ ಅಭಿವೃದ್ಧಿಪಡಿಸಿದೆ.
ಪುರುಷ ಪ್ರತಿರೂಪವಾಗಿರುವ ಮೊಹಮ್ಮದ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ನಾನು ಮುಹಮ್ಮದ್, ಮನುಷ್ಯನ ರೂಪದಲ್ಲಿನ ಸೌದಿ ಅರೇಬಿಯಾದ ಮೊದಲ ರೋಬೋಟ್. ಕೃತಕ ಬುದ್ಧಿಮತ್ತೆ (Artificial intelligence) ಕ್ಷೇತ್ರದಲ್ಲಿ ನಮ್ಮ ಸಾಧನೆಗಳನ್ನು ಪ್ರದರ್ಶಿಸಲು, ನನ್ನನ್ನು ಸೌದಿಯ ಸಾಮ್ರಾಜ್ಯದಲ್ಲಿ, ರಾಷ್ಟ್ರೀಯ ಯೋಜನೆಯ ಭಾಗವಾಗಿ ಇಲ್ಲಿ ಅಭಿವೃದ್ಧಿಪಡಿಸಿ ನಿರ್ಮಿಸಿದ್ದಾರೆ” ಎಂದು ಹೇಳಿದೆ.
ರೋಬೋಟ್ ಹೆಚ್ಚಿನ ನಿಖರತೆಯ ಅಗತ್ಯವಿರುವ ಕಾರ್ಯಗಳನ್ನು ನಿರ್ವಹಿಸುತ್ತದೆ ಅಥವಾ ಮಾನವರಿಗೆ ಅಪಾಯ ಉಂಟುಮಾಡುವ ಪರಿಸ್ಥಿತಿಗಳಲ್ಲಿ ತ್ವರಿತವಾಗಿ ಕೆಲಸ ಮಾಡುತ್ತದೆ. ಸುರಕ್ಷತೆ ಮತ್ತು ಉತ್ಪಾದನಾ ದಕ್ಷತೆಯನ್ನು ಹೆಚ್ಚಿಸಲು ಕೊಡುಗೆ ನೀಡುತ್ತದೆ ಎಂದು ಅದನ್ನು ನಿರ್ಮಿಸಿದ ಕಂಪನಿ ಹೇಳಿದೆ.