ಬೆಂಗಳೂರು, ಮಾ.7 www.bengaluruwire.com : ನಗರದಲ್ಲಿ ಕಾಣಿಸಿಕೊಂಡಿರುವ ತೀವ್ರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬೆಂಗಳೂರು ಜಲಮಂಡಳಿಯ ಮೂಲಕ ತಾತ್ಕಾಲಿಕವಾಗಿ ನಾಲ್ಕು ತಿಂಗಳ ಅವಧಿಗೆ ನೀರು ಪೂರೈಸುವ ಖಾಸಗಿ ನೀರಿನ ಟ್ಯಾಂಕರ್ ಗಳಿಗೆ ಬೆಂಗಳೂರು ಜಿಲ್ಲಾಧಿಕಾರಿ ದಯಾನಂದ್ ದರ ನಿಗದಿಪಡಿಸಿದ್ದಾರೆ.
ರಾಜ್ಯ ಸರ್ಕಾರವು 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ನೀರು ಸರಬರಾಜಿಗೆ 200 ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ತಾತ್ಕಾಲಿಕವಾಗಿ ನಾಲ್ಕು ತಿಂಗಳ ಅವಧಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)ಗೆ ನೀಡಲು ನಿಯೋಜಿಸಲಾಗಿದೆ. ಇದಕ್ಕಾಗಿ ದರ ನಿಗದಿಪಡಿಸಲು ಜಿಲ್ಲಾಧಿಕಾರಿಗಳನ್ನು ಕೋರಿದ್ದರು. ಅದರಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಕುಡಿಯುವ ನೀರನ್ನು ಸಮರ್ಪಕವಾಗಿ ನಿಭಾಯಿಸುವ ದೃಷ್ಟಿಯಿಂದ ದರ ನಿಗದಿಪಡಿಸಲು ತಾಂತ್ರಿಕ ಸಮಿತಿಯನ್ನು ರಚಿಸಿ ಆದೇಶಿಸಿದ್ದರು.
ಈ ತಾಂತ್ರಿಕ ಸಮಿತಿ ಕುಡಿಯುವ ನೀರಿನ ಖಾಸಗಿ ನೀರಿನ ಟ್ಯಾಂಕರ್‌ಗಳ ದರ ನಿಗದಿಪಡಿಸುವ ಬಗ್ಗೆ ಅದರ ಸಾಧಕ-ಬಾಧಕಗಳು, ಲೋಕೋಪಯೋಗಿ ಇಲಾಖೆಯ ಎಸ್.ಆರ್. ದರಗಳು ಮತ್ತು ವಾಸ್ತವಿಕ ಲಭ್ಯವಿರುವ ಅಂಕಿ- ಅಂಶಗಳನ್ನು ಅವಲೋಕಿಸಿ, ದರಗಳನ್ನು ವಿಶ್ಲೇಷಿಸಿ ದರ ನಿಗಧಿಪಡಿಸುವ ಬಗ್ಗೆ ಬಿಬಿಎಂಪಿ ಪ್ರಧಾನ ಎಂಜಿನಿಯರ್ ಅವರು ಮಾ.6ರಂದು ವರದಿ ಸಲ್ಲಿಸಿದ್ದರು. ಆ ವರದಿಯು ಈ ಕೆಳಕಂಡಂತೆ ಇರುತ್ತದೆ :
* ಪ್ರತಿದಿನ ಆರು ಸಾವಿರ ಲೀ. ಸಾಮರ್ಥ್ಯದ ನೀರು ಪೂರೈಸುವ ಟ್ಯಾಂಕರ್ ದಿನದ ಬಾಡಿಗೆ (ನೀರು ಹೊರತುಪಡಿಸಿ) ಜಿಎಸ್ ಟಿ ದರ ಸೇರಿ 5,200 ರೂ.
* 12,000 ಲೀ. ಸಾಮರ್ಥ್ಯದ ನೀರಿನ ಟ್ಯಾಂಕರ್ ದಿನದ ಬಾಡಿಗೆ (ನೀರು ಹೊರತುಪಡಿಸಿ) ಜಿಎಸ್ ಟಿ ದರ ಸೇರಿ 7,100 ರೂ.
• 6000 ಲೀ. ಸಾಮರ್ಥ್ಯದ ನೀರಿನ ಟ್ಯಾಂಕರ್ ನಲ್ಲಿ ನೀರು ಪೂರೈಕೆ ಮತ್ತು ಜಿಎಸ್ ಟಿ ಸೇರಿ 5 ಕಿ.ಮೀ ದೂರದ ವರೆಗೆ ನೀರು ಸಾಗಿಸಲು 600 ರೂ. ಹಾಗೂ 5 ರಿಂದ 10 ಕಿ.ಮೀ ದೂರದ ಸ್ಥಳಕ್ಕೆ ತೆರಳಿ ನೀರು ಪೂರೈಸಿದರೆ ಖಾಸಗಿ ಟ್ಯಾಂಕರ್ ಗೆ 750 ರೂ. ದರ ನಿಗದಿಪಡಿಸಲಾಗಿದೆ.
• 8000 ಲೀ. ಸಾಮರ್ಥ್ಯದ ನೀರಿನ ಟ್ಯಾಂಕರ್ ನಲ್ಲಿ ನೀರು ಪೂರೈಕೆ ಮತ್ತು ಜಿಎಸ್ ಟಿ ಸೇರಿ 5 ಕಿ.ಮೀ ದೂರದ ವರೆಗೆ ನೀರು ಸಾಗಿಸಲು 700 ರೂ. ಹಾಗೂ 5 ರಿಂದ 10 ಕಿ.ಮೀ ದೂರದ ಸ್ಥಳಕ್ಕೆ ತೆರಳಿ ನೀರು ಪೂರೈಸಿದರೆ ಖಾಸಗಿ ಟ್ಯಾಂಕರ್ ಗೆ 850 ರೂ. ದರ (ಪ್ರತಿ ಸಾವಿರ ಲೀ. ನೀರಿಗೆ 44 ರೂ.) ನಿಗದಿಪಡಿಸಲಾಗಿದೆ.
• 12000 ಲೀ. ಸಾಮರ್ಥ್ಯದ ನೀರಿನ ಟ್ಯಾಂಕರ್ ನಲ್ಲಿ ನೀರು ಪೂರೈಕೆ ಮತ್ತು ಜಿಎಸ್ ಟಿ ಸೇರಿ 5 ಕಿ.ಮೀ ದೂರದ ವರೆಗೆ ನೀರು ಸಾಗಿಸಲು 1000 ರೂ. ಹಾಗೂ 5 ರಿಂದ 10 ಕಿ.ಮೀ ದೂರದ ಸ್ಥಳಕ್ಕೆ ತೆರಳಿ ನೀರು ಪೂರೈಸಿದರೆ ಖಾಸಗಿ ಟ್ಯಾಂಕರ್ ಗೆ 1200 ರೂ. ದರ (8 ಸಾವಿರ ಮೀರಿದ ನಂತರ 12,000 ಲೀ. ವರೆಗೆ ಪ್ರತಿ ಸಾವಿರ ಲೀ. ನೀರಿಗೆ 50 ರೂ. ಸೇರಿಸಿ) ನಿಗದಿಪಡಿಸಲಾಗಿದೆ.
• ಸರಕು ಮತ್ತು ಸೇವಾ ತೆರಿಗೆ ಶುಲ್ಕಗಳು ಸೇರಿದಂತೆ ಮಾಸಿಕ ಆಧಾರದ ಸಂಗ್ರಹಣೆಗೆ ದರವು 5 ಕಿ.ಮೀ ದೂರದ ವರೆಗೆ ನೀರು ಸಾಗಿಸಲು 510 ರೂ. ಹಾಗೂ 5 ರಿಂದ 10 ಕಿ.ಮೀ ದೂರದ ಸ್ಥಳಕ್ಕೆ ತೆರಳಿ ನೀರು ಪೂರೈಸಿದರೆ ಖಾಸಗಿ ಟ್ಯಾಂಕರ್ ಗೆ 650 ರೂ. ದರ ನಿಗದಿಪಡಿಸಲಾಗಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.