ಬೆಂಗಳೂರು, ಮಾ.6 www.bengaluruwire.com : ನಗರದಲ್ಲಿ ಆಗಾಗ್ಗೆ ವಾಣಿಜ್ಯ ಕಟ್ಟಡ ಅಥವಾ ಮನೆಗಳ ಮುಂದಿನ ಮರಗಳ ಬುಡಕ್ಕೆ ಸದ್ದಿಲ್ಲದೆ ಆಸಿಡ್ ಹಾಕಿ ನಿಧಾನವಾಗಿ ಸಾಯಿಸುವ ಹೇಯಕೃತ್ಯಗಳು ಆಗಾಗ್ಗೇ ವರದಿಯಾಗುತ್ತಿರುತ್ತದೆ. ಇತ್ತೀಚೆಗೆ ಸದಾಶಿವನಗರದ ಸ್ಯಾಂಕಿ ರಸ್ತೆಯಲ್ಲಿರುವ ಅಂಗಡಿಯವನೊಬ್ಬ ತನ್ನ ಅಂಗಡಿಯು ಹೊರಗಿನವರಿಗೆ ಸರಿಯಾಗಿ ಕಾಣಿಸಲು ಅಡ್ಡಿಯಾಗಿದೆ ಎಂಬ ಕಾರಣಕ್ಕೆ ಸೊಂಪಾಗಿ ಬೆಳೆದಿದ್ದ ಮರವೊಂದಕ್ಕೆ ಆಸಿಡ್ ಸುರಿದಿದ್ದಾನೆ.
ಈ ಮರವು ಸ್ಯಾಂಕಿ ರಸ್ತೆಯಲ್ಲಿ ಅಂಗಡಿ ಅಡ್ಡಲಾಗಿತ್ತು ಎಂದು ಅಂಗಡಿಯವನು ಕಳೆದ ವಾರ ಮರಕ್ಕೆ ಆಸಿಡ್ ಸುರಿದಿದ್ದಾನೆ. ಇದೊಂದು ದುಷ್ಕೃತ್ಯ. ಇಂತಹವರ ಮೇಲೆ ಬಿಬಿಎಂಪಿ ಅರಣ್ಯ ವಿಭಾಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಂಗಳವಾರ ಮರದ ಬುಡದಲ್ಲಿ ಆ್ಯಸಿಡ್ ಕಂಡು ಬಂದ ನಂತರ ಸ್ಥಳೀಯರು ತಮಗೆ ತಿಳಿಸಿದರು. ಕೂಡಲೇ ಸ್ಥಳಕ್ಕೆ ತೆರಳಿ ಮರಕ್ಕೆ ಹಾಕಿದ ಆಸಿಡ್ ದ್ರವ ಬಿದ್ದ ಮರದ ಭಾಗವನ್ನು ಸ್ವಚ್ಛಗೊಳಿಸಿ ಚಿಕಿತ್ಸೆ ನೀಡಲಾಗಿದೆ. ಇದೇ ವರ್ಷ ಯಾರೋ ಆಸಿಡ್ ಸುರಿದು ಮರವನ್ನು ಕೊಲ್ಲಲು ಯತ್ನಿಸಿದ ಮೂರನೇ ಘಟನೆ ಇದಾಗಿದೆ ಎಂದು ಮರ ವೈದ್ಯ ವಿಜಯ್ ನಿಶಾಂತ್ ಹೇಳಿದ್ದಾರೆ.
ಜನವರಿಯಲ್ಲಿ ಕೆ.ಆರ್.ಮಾರುಕಟ್ಟೆ ಬಳಿಯ ಪೊಂಗಮಿಯಾ ಮರಗಳನ್ನು ನಾಶಪಡಿಸುವ ಪ್ರಯತ್ನ ನಡೆದಿತ್ತು. ಎರಡು ತಿಂಗಳಲ್ಲಿ ಇದು ಮೂರನೇ ಪ್ರಯತ್ನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಯಾಂಕಿ ರಸ್ತೆಯಲ್ಲಿ ಮರಕ್ಕೆ ಆಸಿಡ್ ಹಾಕಿದ ಅಂಗಡಿಯಾತ ಮಂಜುನಾಥ್ ಎಂಬುವರ ವಿರುದ್ಧ ಇಂದು ಅರಣ್ಯ ವಿಭಾಗದಲ್ಲಿ ಎಫ್ ಐಆರ್ ದಾಖಲಿಸುತ್ತಿದ್ದೇವೆ. ಮರಕ್ಕೆ ಆಸಿಡ್ ಹಾಕಿದ ಸ್ಥಳವನ್ನು ಸ್ವಚ್ಛಗೊಳಿಸಲಾಗಿದೆ ಎಂದು ಬಿಬಿಎಂಪಿ ಅರಣ್ಯಾಧಿಕಾರಿ ಶಿವರಾಮ್ ತಿಳಿಸಿದ್ದಾರೆ.