ಬೆಂಗಳೂರು, ಮಾ.04 www.bengaluruwire.com : ರಸ್ತೆಯಲ್ಲಿ ನಿಲ್ಲಿಸಿರೋ ಆಟೋ ಮಿಸ್ಸಾಗಿರೋದು ಕೇಳಿದ್ದೇವೆ. ಲಾಕ್ ಹಾಕಿ ಮನೆ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನ ರಾತ್ರೋ ರಾತ್ರಿ ಕಳ್ಳರು ಕದ್ದೊಯ್ದ ಸುದ್ದಿ ಕೇಳಿದ್ದೇವೆ. ಆದರೆ ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬಿಬಿಎಂಪಿಯು ಅಳವಡಿಸಿದ 68 ಇ-ಟಾಯ್ಲೆಟ್ ಗಳೇ ಕಾಣೆಯಾಗಿವೆಯಂತೆ!!! ಇದು ಆಶ್ಚರ್ಯವಾದರೂ ಸತ್ಯ.
ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಪ್ಯಾಕ್ ಆಗಿರುವ ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೋಟ್ಯಾಂತರ ರೂಪಾಯಿ ಕರ್ಚು ಮಾಡಿ ನಿರ್ಮಿಸಿದ್ದ 229 ಹೈಟೆಕ್ ಇ-ಶೌಚಾಲಯಗಳ ಪೈಕಿ ಈಗಿರೋದು ಕೇವಲ 161 ಟಾಯ್ಲೆಟ್ ಗಳು ಮಾತ್ರ. ಉಳಿದ 68 ಶೌಚಾಲಯಗಳೇ ಮಿಸ್ಸಿಂಗ್….!!
ನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕೆಂದು 2014 ಮತ್ತು 2021 ರ ನಡುವೆ ಆಟೋ ಫ್ಲಶ್ ಮತ್ತು ಇತರ ಗಿಜ್ಮೊ ತರಹದ ವೈಶಿಷ್ಟ್ಯಗಳನ್ನು ಹೊಂದಿದ ಒಟ್ಟು 229 ಇ-ಟಾಯ್ಲೆಟ್‌ಗಳನ್ನು ನಿರ್ಮಿಸಲಾಗಿತ್ತು. ಪ್ರತಿ ಶೌಚಾಲಯಕ್ಕೆ ಸರಾಸರಿ 5.50 ಲಕ್ಷ ರೂಪಾಯಿ ವೆಚ್ಚದಲ್ಲಿ ಇ-ಶೌಚಾಲಯವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಆ ಪೈಕಿ 68 ಶೌಚಾಲಯಗಳೇ ನಾಪತ್ತೆಯಾಗಿದೆ. ಇದು ನಿಜಕ್ಕೂ ಕಳವಳಕಾರಿ ವಿಷಯ. ಬಿಬಿಎಂಪಿಯ 8 ವಲಯಗಳ ವ್ಯಾಪ್ತಿಯಲ್ಲಿ ನೀರು, ವಿದ್ಯುತ್ ದೀಪ ಸೌಕರ್ಯದೊಂದಿಗೆ ಪ್ರತಿಯೊಂದು ಇ-ಟಾಯ್ಲೆಟ್ ನಿರ್ಮಾಣಕ್ಕೆ ಸರಾಸರಿಯಾಗಿ ಕನಿಷ್ಠ 5.50 ಲಕ್ಷ ರೂ. ಕರ್ಚು ಮಾಡಲಾಗಿದೆ. ಹೀಗೆ 68 ಇ-ಟಾಯ್ಲೆಟ್ ಗಳು ಕಾಣೆಯಾಗಿವೆ ಎಂದರೆ 3.74 ಕೋಟಿ ಮೌಲ್ಯದ ಪಾಲಿಕೆ ಸ್ವತ್ತು ನಷ್ಟವಾದಂತಾಗಿದೆ.
ಸುಲಭವಾಗಿ ತೆರವು ಮಾಡಬಹುದಾದ ಇ-ಟಾಯ್ಲೆಟ್ ಗಳನ್ನು ರಸ್ತೆ ಅಗಲೀಕರಣ, ರಸ್ತೆಯ ಜಂಕ್ಷನ್ ಅಭಿವೃದ್ಧಿ, ಪಾದಚಾರಿ ಮಾರ್ಗಗಳ ಅಭಿವೃದ್ಧಿ ಮತ್ತಿತರ ಕಾರ್ಯಗಳಿಗಾಗಿ ಬೇರೆ ಕಡೆ ಸ್ಥಳಾಂತರಿಸಲಾಯಿತಾ? ಅವುಗಳನ್ನು ಎಲ್ಲಿಯಾದರೂ ಒಂದೆಡೆ ಶೇಖರಿಸಿಡಲಾಗಿದೆಯಾ? ಅಥವಾ ಹೇಗಿದ್ದರೂ ಸ್ಟೈಲೆಸ್ ಸ್ಟೀಲ್ ಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಯಿದೆ. ಅದನ್ನು ಯಾರಿಗಾದರೂ ಮಾರಿಕೊಂಡಾರಾ? ಅವು ಎಲ್ಲಿ ಹೋದವು ಎಂಬುದು ನಿಜಕ್ಕೂ ನಿಗೂಢವಾಗಿದೆ.
ಈ ಬಗ್ಗೆ ಘನತ್ಯಾಜ್ಯ ನಿರ್ವಹಣಾ ವಿಭಾಗದ ಅಧಿಕಾರಿಗಳು ಎಲ್ಲಾ ವಲಯಗಳ ಕಾರ್ಯನಿರ್ವಾಹಕ ಎಂಜನಿಯರ್ ಗಳಿಗೆ ಈ ಬಗ್ಗೆ ಸೂಕ್ತ ಉತ್ತರ ನೀಡುವಂತೆ ಪತ್ರ ಬರೆದಿದ್ದಾರೆ. ಒಂದೊಮ್ಮೆ ಇ-ಟಾಯ್ಲೆಟ್ ಸ್ಥಳಾಂತರಿಸಿದ ಬಗ್ಗೆ ಹಾಗೂ ಅವುಗಳನ್ನು ಹೇಗೆ ವಿಲೇವಾರಿ ಮಾಡಲಾಯಿತು ಎಂಬ ಬಗ್ಗೆ ಸೂಕ್ತ ಉತ್ತರ ನೀಡಿದಿದ್ದರೆ ಟಾಯ್ಲೆಟ್ ಕಾಣೆಯಾದ ಬಗ್ಗೆ ಹತ್ತಿರದ ಪೂಲೀಸ್ ಠಾಣೆಗೆ ದೂರು ನೀಡುವುದಾಗಿಯೂ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಬಿಬಿಎಂಪಿ ನೀಡಿರುವ ಅಂಕಿ ಅಂಶ. ಹೋಗಲಿ ಉಳಿದ 161 ಶೌಚಾಲಯಗಳು ಸರಿಯಾಗಿ ವರ್ಕ್ ಆಗ್ತಿದ್ಯಾ ಅಂತ ನಗರದಾದ್ಯಂತ ಹಲವು ಶೌಚಾಲಯಗಳಲ್ಲಿ ರಿಯಾಲಿಟಿ ಚೆಕ್ ಮಾಡಿದ್ರೆ ಎಲ್ಲವೂ ನಿರ್ವಹಣಾ ಅವಧಿ ಮುಗಿದಿದ್ದರಿಂದ ಸ್ಥಗಿತವಾಗಿರುವುದು ಕಂಡು ಬಂದಿದೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಿದ್ದ ಇ-ಟಾಯ್ಲೆಟ್ ಕಾರ್ಯನಿರ್ವಹಿಸದೆ ಹಲವು ವರ್ಷಗಳಾಗಿದೆ. “ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಿರುವ ಇ-ಟಾಯ್ಲೆಟ್ ಸ್ಥಗಿತಗೊಂಡು ಎರಡು ವರ್ಷಗಳ ಮೇಲಾಗಿದೆ. ಕೋವಿಡ್ ಆರಂಭದ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇ-ಟಾಯ್ಲೆಟ್ ಬಳಿಕ ಬಾಗಿಲು ಮುಚ್ಚಿದೆ. ಪಾಲಿಕೆಯ ಕೇಂದ್ರ ಕಚೇರಿಗೆಂದು ಕೆಲಸಕ್ಕೆ ಬರುವ ಸಾವಿರಾರು ಜನರಿಗೆ ಇದರಿಂದ ತೊಂದರೆಯಾಗಿದೆ. ಕೂಡಲೇ ಸ್ಥಗಿತಗೊಂಡಿರುವ ಇ-ಟಾಯ್ಲೆಟ್ ಅನ್ನು ಪುನಃ ಕಾರ್ಯಾರಂಭ ಮಾಡುವಂತೆ ಕ್ರಮ ಕೈಗೊಳ್ಳಬೇಕು” ಎಂದು ಹಿರಿಯ ನಾಗರೀಕ ರಾಘವೇಂದ್ರ ಅವರು ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಟಾಯ್ಲೆಟ್ ಗಳ ವಿವರ ಈ ಕೆಳಕಂಡಂತಿದೆ :
ಕ್ರಮ ಸಂಖ್ಯೆ | ವಲಯ | ಸ್ಥಾಪಿತ ಇ-ಟಾಯ್ಲೆಟ್ ಗಳು | ಪ್ರಸ್ತುತ ಲಭ್ಯವಿರುವ ಇ-ಶೌಚಾಲಯಗಳು | ಕಾರ್ಯಾಚರಣೆ ಮತ್ತು ನಿರ್ವಹಣೆ ನೀಡಿರುವಂತದ್ದು |
1) | ಪಶ್ಚಿಮ | 69 | 48 | 48 ಶೌಚಾಲಯಗಳಿಗೆ ಕಾರ್ಯಾದೇಶ ನೀಡಿಕೆಯಾಗಿದೆ |
2) | ದಕ್ಷಿಣ | 81 | 54 | ಟೆಂಡರ್ ಒಪ್ಪಿಗೆಗಾಗಿ ಕಳುಹಿಸಿದೆ |
3) | ಪೂರ್ವ | 25 | 23 | ಮರು ಟೆಂಡರ್ ಕರೆಯಬೇಕಿದೆ |
4) | ಬೊಮ್ಮನಹಳ್ಳಿ | 22 | 18 | 18 ಶೌಚಾಲಯಗಳಿಗೆ ಕಾರ್ಯಾದೇಶ ನೀಡಿಕೆಯಾಗಿದೆ |
5) | ಯಲಹಂಕ | 12 | 4 | 4 ಶೌಚಾಲಯಗಳಿಗೆ ಕಾರ್ಯಾದೇಶ ನೀಡಲಾಗಿದೆ. |
6) | ರಾಜರಾಜೇಶ್ವರಿನಗರ | 8 | 6 | 6 ಶೌಚಾಲಯಗಳಿಗೆ ಕಾರ್ಯಾದೇಶ ನೀಡಲಾಗಿದೆ. |
7) | ದಾಸರಹಳ್ಳಿ | 8 | 6 | 6 ಶೌಚಾಲಯಗಳಿಗೆ ಕಾರ್ಯಾದೇಶ ನೀಡಲಾಗಿದೆ. |
8) | ಮಹದೇವಪುರ | 4 | 2 | 2 ಶೌಚಾಲಯಗಳಿಗೆ ಸಮ್ಮತಿ ಪತ್ರ ಹಂಚಿಕೆ |
ಒಟ್ಟಾರೆ | 229 | 161 | 82 |
ಇ-ಟಾಯ್ಲೆಟ್ ಸ್ಥಿತಿಗತಿ ಬಗ್ಗೆ ಸಂಪೂರ್ಣ ವರದಿ ನೀಡಲು ಸೂಚನೆ :
“ಬೆಂಗಳೂರಿನಲ್ಲಿ ಸ್ಥಾಪನೆಯಾದ ಇ-ಟಾಯ್ಲೆಟ್ ಗಳ ಪೈಕಿ ಸದ್ಯ ನಿರ್ವಹಣೆ ಮಾಡುತ್ತಿರೋ ಶೌಚಾಲಯಗಳನ್ನು ದೃಢೀಕರಿಸಿದ ನಂತರವಷ್ಟೇ ಗುತ್ತಿಗೆದಾರರಿಗೆ ಹಣ ಪಾವತಿ ಮಾಡುವಂತೆ ಘನತ್ಯಾಜ್ಯ ವಿಲೇವಾರಿ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಹಂತಗಳಲ್ಲಿ ಈವರೆಗೆ ಸ್ಥಾಪನೆಯಾದ ಇ-ಟಾಯ್ಲೆಟ್ ಗಳ ಸ್ಥಿತಿಗತಿ ಬಗ್ಗೆ ಸಂಪೂರ್ಣ ವರದಿಯನ್ನು ನೀಡಲು ಅವರಿಗೆ ತಿಳಿಸಿದ್ದೇನೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮವಹಿಸುತ್ತೇವೆ.”
- ಹರೀಶ್ ಕುಮಾರ್, ವಿಶೇಷ ಆಯುಕ್ತರು, ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ವಿಭಾಗ
ಬೆಂಗಳೂರಿನಾದ್ಯಂತ ಇವೆ 907 ಸಾರ್ವಜನಿಕ ಶೌಚಾಲಯಗಳು :
ಬಿಬಿಎಂಪಿ ಅಂಕಿಅಂಶಗಳ ಪ್ರಕಾರ, ನಗರದಲ್ಲಿ 360 ಸಾರ್ವಜನಿಕ ಶೌಚಾಲಯಗಳು, ಆರು ಸಮುದಾಯ ಶೌಚಾಲಯಗಳು, 161 ಇ-ಶೌಚಾಲಯಗಳು, 34 ಮಾಡ್ಯುಲರ್ ಶೌಚಾಲಯಗಳು, 10 ಪ್ರೀಕ್ಯಾಸ್ಟ್ ಶೌಚಾಲಯಗಳು ಮತ್ತು 181 ಪೌರಕಾರ್ಮಿಕರ ಶೌಚಾಲಯಗಳು ಹಾಗೂ ಇಂದಿರಾ ಕ್ಯಾಂಟಿನ್ ನಲ್ಲಿನ 172 ಸಾರ್ವಜನಿಕ ಶೌಚಾಲಯಗಳು ಸೇರಿದಂತೆ ಒಟ್ಟಾರೆ 907 ಶೌಚಾಲಯಗಳು ಲಭ್ಯವಿದೆ. ಇದರ ಜೊತೆಗೆ ಹೊಸದಾಗಿ 100 ಶಿ-ಟಾಯ್ಲೆಟ್ ಗಳ ನಿರ್ಮಾಣಕ್ಕಾಗಿ ಮೂರನೇ ಬಾರಿಗೆ ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ. ಅಲ್ಲದೆ ಬೆಂಗಳೂರಿನಾದ್ಯಂತ ಹೊಸದಾಗಿ 250 ಸಾರ್ವಜನಿಕ ಶೌಚಾಲಯಕ್ಕೆ ಟೆಂಡರ್ ಕರೆಯಲಾಗಿದೆ ಎಂದು ಘನತ್ಯಾಜ್ಯ ನಿರ್ವಹಣಾ ವಿಭಾಗದ ಎಂಜಿನಿಯರೊಬ್ಬರು ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಸಮಗ್ರ ಯೋಜನೆಗಳನ್ನು ರಚಿಸಲು ಸಮಿತಿಯನ್ನು ರಚಿಸಿದೆ. ಪಾಲಿಕೆಯ ಇತ್ತೀಚೆಗೆ ಹೊರಡಿಸಿದ ಆದೇಶದ ಪ್ರಕಾರ, ಬಿಬಿಎಂಪಿ ಮುಖ್ಯ ಆಯುಕ್ತರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಘನತ್ಯಾಜ್ಯ ನಿರ್ವಹಣೆ (SWM) ಮತ್ತು ಕಲ್ಯಾಣ ವಿಭಾಗದ ವಿಶೇಷ ಆಯುಕ್ತರು, ಎಲ್ಲಾ ವಲಯ ಆಯುಕ್ತರು, ಇಂಜಿನಿಯರ್-ಇನ್-ಚೀಫ್ ಮತ್ತು ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಸದಸ್ಯರಾಗಿರುತ್ತಾರೆ ಮತ್ತು ಎಸ್ ಡಬ್ಲ್ಯುಎಂ ಜಂಟಿ ಆಯುಕ್ತರು ಸದಸ್ಯ-ಕಾರ್ಯದರ್ಶಿಯಾಗಿರುತ್ತಾರೆ. ಎನ್ ಜಿಒಗಳ ಸಕ್ರಿಯ ಮಹಿಳಾ ಸದಸ್ಯರನ್ನು ಸಮಿತಿಯ ಸದಸ್ಯರನ್ನಾಗಿ ಸೇರಿಸಲಾಗುತ್ತದೆ.
ಇ-ಟಾಯ್ಲೆಟ್ ಬಳಕೆ ಇನ್ನು ಮುಂದೆ ಉಚಿತ :
ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಇ-ಟಾಯ್ಲೆಟ್ ಗಳನ್ನು ಬಳಕೆ ಮಾಡಲು ಸಾರ್ವಜನಿಕರು 2 ರೂ. ಕಾಯಿನ್ ಹಾಕಬೇಕಾಗಿತ್ತು. ಆದರೆ ಇನ್ನು ಮುಂದೆ ಬಿಬಿಎಂಪಿಯೇ ಇ-ಟಾಯ್ಲೆಟ್ ನಿರ್ವಹಣೆ ಮಾಡುವವರಿಗೆ ಪ್ರತಿ ಟಾಯ್ಲೆಟ್ ಗೆ ಪ್ರತಿ ತಿಂಗಳು ಅವುಗಳ ಕಾರ್ಯನಿರ್ವಹಣೆ ಆಧಾರದ ಮೇಲೆ 3,800 ರೂ. ಹಣವನ್ನು ನೀಡಲಿದೆ. ಅಲ್ಲದೆ ಸಾರ್ವಜನಿಕರಿಗೆ ಇ-ಟಾಯ್ಲೆಟ್ ಬಳಕೆ ಉಚಿತವಾಗಿ ನೀಡಲು ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾಣೆಯಾದ ಇ-ಟಾಯ್ಲೆಟ್ ಬಗ್ಗೆ ಶೀಘ್ರ ತನಿಖೆಗೆ ಆಗ್ರಹ :
“ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 68 ಇ-ಟಾಯ್ಲೆಟ್ ಗಳು ಕಾಣೆಯಾಗಿವೆ ಎಂಬದು ಪಾಲಿಕೆ ಅಧಿಕಾರಿಗಳಿಗೆ ತಡವಾಗಿ ತಿಳಿದು ಬಂದಿರುವುದು ದುರದೃಷ್ಟಕರ. ಲಕ್ಷಾಂತರ ರೂ. ಕರ್ಚು ಮಾಡಿ ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿದ ಇ-ಶೌಚಾಲಯಗಳು ಹೇಗೆ ಕಾಣೆಯಾದವು ಎಂಬ ಬಗ್ಗೆ ಬಿಬಿಎಂಪಿ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಿದೆ. ನಗರದಲ್ಲಿ 907 ಸಾರ್ವಜನಿಕ ಶೌಚಾಲಯಗಳಿವೆ ಎಂದು ಬಿಬಿಎಂಪಿ ಹೇಳುತ್ತಿದ್ದರೂ, ಅಗತ್ಯ ಪ್ರಮಾಣದಲ್ಲಿ ಹಾಗೂ ಅಗತ್ಯ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ವೈಜ್ಞಾನಿಕವಾಗಿ ಸ್ಥಾಪಿಸಿಲ್ಲ.”
- ಮುಕುಂದ್, ಸಂಸ್ಥಾಪಕ ಸದಸ್ಯರು, ಬೆಂಗಳೂರು ಪ್ರಜಾವೇದಿಕೆ
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.