ಬೆಂಗಳೂರು, ಮಾ.04 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಹೊರವಲಯ ವ್ಯಾಪ್ತಿಯ 35 ವಾರ್ಡ್ ಗಳಲ್ಲಿನ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ಉಸ್ತುವಾರಿಗಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ ಬಿಬಿಎಂಪಿ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಗರದಲ್ಲಿನ ನೀರಿನ ಸಮಸ್ಯೆ ನಿವಾರಿಸಲು ಚಿಕ್ಕ, ದೊಡ್ಡ, ಹಾಲಿನ ಟ್ಯಾಂಕರ್‌ಗಳನ್ನು ಶೀಘ್ರ ಸರ್ಕಾರದ ವಶಕ್ಕೆ ಪಡೆಯಲು ನಿರ್ಧರಿಸಿದ್ದಾಗಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 3,500 ಟ್ಯಾಂಕರ್‌ಗಳು ಇದ್ದು, ಕೇವಲ 219 ಟ್ಯಾಂಕರ್‌ಗಳು ಅಂದರೆ ಕೇವಲ ಶೇ 10 ರಷ್ಟು ಮಾತ್ರ ನೋಂದಣಿ ಮಾಡಿಸಿಕೊಂಡಿವೆ. ಬಿಡಬ್ಲ್ಯೂ ಎಸ್‌ಎಸ್‌ಬಿ ಅವರು 210 ಟ್ಯಾಂಕರ್‌ಗಳನ್ನು ಈಗಾಗಲೇ ನೀರಿನ ಪೂರೈಕೆಗೆ ಬಳಸುತ್ತಿದ್ದಾರೆ. ನಗರದ ಎಲ್ಲಾ ಶಾಸಕರಿಗೆ ನೀರಿನ ಸಮಸ್ಯೆ ಬಗೆಹರಿಸಲು 10 ಕೋಟಿ ಅನುದಾನ ನೀಡಲಾಗಿದೆ. ಬಿಬಿಎಂಪಿಗೆ 148 ಕೋಟಿ, ಬಿಡಬ್ಲ್ಯೂ ಎಸ್‌ಎಸ್‌ಬಿ ಯಿಂದ 128 ಕೋಟಿ ರೂ., ಒಟ್ಟು 556 ಕೋಟಿ ಹಣವನ್ನು ಕುಡಿಯುವ ನೀರಿನ ಪೂರೈಕೆಗೆ ಮೀಸಲಿಡಲಾಗಿದೆ ಎಂದಿದ್ದಾರೆ.
ನೀರಿನ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಸಹಾಯವಾಣಿ ಮತ್ತು ವಾರ್ಡ್ ವಾರು ದೂರು ಕೇಂದ್ರಗಳನ್ನು ತೆರೆಯಲಾಗುವುದು. ಸಮಸ್ಯೆ ಆಲಿಸಲು ವಾರ್ ರೂಂಗಳು ಕೆಲಸ ನಿರ್ವಹಿಸಲಿವೆ. ಪ್ರಸ್ತುತ ನಗರದಲ್ಲಿ 15 ಸಾವಿರ ಕೊಳವೆ ಬಾವಿಗಳಿವೆ. ದಾಖಲೆಗಳ ಪ್ರಕಾರ ನಗರದಲ್ಲಿ 16,781 ಕೊಳವೆ ಬಾವಿಗಳಿವೆ. ಇದರಲ್ಲಿ 6,997 ಕೊಳವೆ ಬಾವಿಗಳು ಬತ್ತಿ ಹೋಗಿದ್ದು, 7,784 ಕೊಳವೆ ಬಾವಿಗಳು ಚಾಲ್ತಿಯಲ್ಲಿವೆ.
ಹೊಸ ಕೊಳವೆ ಬಾವಿ ಕೊರೆಸಲು ಸ್ಥಳೀಯ ಗುತ್ತಿಗೆದಾರರು ಮತ್ತು ತಮಿಳುನಾಡಿನ ಕೊಳವೆಬಾವಿ ಕೊರೆಯುವವರ ನಡುವೆ ದರದ ವಿಚಾರವಾಗಿ ಒಂದಷ್ಟು ಗೊಂದಲಗಳಿದ್ದು ಇದನ್ನು ಶೀಘ್ರ ಬಗೆಹರಿಸಲಾಗುವುದು. ಟ್ಯಾಂಕರ್ ನೀರು ಪೂರೈಕೆಗೆ ರೂ.500 ರಿಂದ 2 ಸಾವಿರದ ವರೆಗೂ ವಸೂಲಿ ಮಾಡುತ್ತಿದ್ದಾರೆ. ಈ ಗೊಂದಲವನ್ನು ಅಸೋಸಿಯೇಷನ್ ಬಳಿ ಮಾತನಾಡಿ ನೀರಿನ ದರವನ್ನು ಕಿ.ಮೀಗೆ ಇಂತಿಷ್ಟು ಎಂದು ನಿಗದಿ ಮಾಡಲಾಗುವುದು. ಬೆಂಗಳೂರು ಹೊರವಲಯದಲ್ಲಿ ಅಂತರ್ಜಲ ನೀರಿನ ಮಟ್ಟ ಹೆಚ್ಚಿರುವ ಕಡೆಯಿಂದಲೂ ನೀರಿನ ಪೂರೈಕೆ ಮಾಡಲು ಸಿದ್ದರಾಗಿ ಇರಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ. ನೀರಿನ ಸಮಸ್ಯೆ ಬಗೆಹರಿಸಲು ಚುನಾವಣಾ ನೀತಿ ಸಂಹಿತೆ ಅಡ್ಡ ಬರುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬಿಬಿಎಂಪಿ ಹೊರ ವಲಯ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಬರುವ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ಪಾಲಿಕೆ ಕೇಂದ್ರ ಕಛೇರಿಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದು, ಶೀಘ್ರ ಕುಡಿಯುವ ನೀರಿನ ಸಮಸ್ಯೆ ಆಲಿಸುವ ಸಲುವಾಗಿ ಪ್ರತ್ಯೇಕವಾಗಿ ಮೇಲುಸ್ತುವಾರಿಗಾಗಿ ದಾಸರಹಳ್ಳಿ ವಲಯದ ಕಾರ್ಯಪಾಲಕ ಅಭಿಯಂತರರಾದ ಧರಣೇಂದ್ರ ಕುಮಾರ್ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ 35 ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಪಾಲಿಕೆಯ ಕೇಂದ್ರ ಕಛೇರಿಯಲ್ಲಿ ಸ್ಥಾಪಿಸಿರುವ ನಿಯಂತ್ರಣ ಕೊಠಡಿಯ ಸಹಾಯವಾಣಿ ಸಂಖ್ಯೆಯಾದ 1533ಗೆ ಕರೆ ಮಾಡಿ ಸಾರ್ವಜನಿಕರು ತಮ್ಮ ನೀರಿನ ಸಮಸ್ಯೆ ಕುರಿತಾಗಿ ಮಾಹಿತಿ ನೀಡಬಹುದು.
ಅಲ್ಲದೇ, ಬಿಬಿಎಂಪಿ ವ್ಯಾಪ್ತಿಯ ಇನ್ನುಳಿದ ವಾರ್ಡ್ ಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯವಾಣಿ ಸಂಖ್ಯೆಯಾದ 1916 ಗೆ ಕರೆ ಮಾಡಿ ತಮ್ಮ ಸಮಸ್ಯೆ ಕುರಿತು ಮಾಹಿತಿ ಒದಗಿಸಬಹುದು.
ಹೊರ ವಲಯಗಳಲ್ಲಿ ಬರುವ 35 ವಾರ್ಡ್ ಗಳಲ್ಲಿ ಬರುವ 110 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪಾಲಿಕೆಯು 35 ವಾರ್ಡ್ ಗಳಿಗೆ ಪ್ರತ್ಯೇಕವಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 35 ವಾರ್ಡ್ ಗಳಲ್ಲಿ ಬರುವ 110 ಹಳ್ಳಿಗಳ ಪಟ್ಟಿಯನ್ನು ಹಾಗೂ ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್ ಎಸ್ ಬಿ ಅಧಿಕಾರಿಗಳ ಸಂಖ್ಯೆಯನ್ನು ಮಾಹಿತಿಗಾಗಿ ನೀಡಲಾಗಿದೆ :