ಬೆಂಗಳೂರು, ಫೆ.28 www.bengaluruwire.com : ಸಿಲಿಕಾನ್ ಸಿಟಿಯ ಸ್ಥಳೀಯ ಆಡಳಿತ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) 2024-25ನೇ ಸಾಲಿನಲ್ಲಿ 12,369 ಕೋಟಿ ರೂ. ಮೊತ್ತದ ಸಮತೋಲಿತ ಬಜೆಟ್ ಅನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲ್ಕೆರೆ ಮಂಡಿಸಿದರು.
ಗುರುವಾರ ಬೆಳಿಗ್ಗೆ ಪುರಭವನ (Townhall)ದಲ್ಲಿ ಅವರು ಮಂಡಿಸಿದ ಬಜೆಟ್ ನಲ್ಲಿ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಜಾರಿಗೆ ತರಲು 2024-25ನೇ ಸಾಲಿನಲ್ಲಿ ಒಟ್ಟಾರೆ 1,580 ಕೋಟಿ ರೂ. ಹಣವನ್ನು ಮೀಸಲಿರಿಸಲಾಗಿದೆ. ಏ.1 ರಿಂದ ನಗರದಲ್ಲಿ 17 ಅಂಶಗಳ ಬದಲಿಗೆ 6 ಅಂಶಗಳ ಅಡಿಯಲ್ಲಿ ಮೌಲ್ಯಾಧಾರಿತ ಆಸ್ತಿ ತೆರಿಗೆ ಪದ್ಧತಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ನಗರ ಭೂಮಾಪನಾ ಇಲಾಖೆಯಿಂದ ದ್ರೋಣ್ ಮೂಲಕ 163 ವಾರ್ಡ್ ಗಳಲ್ಲಿನ ಆಸ್ತಿಗಳ ಸಮೀಕ್ಷೆ ಮುಗಿಸಿದ್ದು, ಆ ಮಾಹಿತಿಯನ್ನು ಬಿಬಿಎಂಪಿ ಆಸ್ತಿ ತೆರಿಗೆ ಲೆಕ್ಕಾಚಾರದಲ್ಲಿ ಬಳಸಲಾಗುತ್ತದೆ. ಭೂಮಾಪನಾ ಇಲಾಖೆಯು ಉಳಿದ ವಾರ್ಡ್ ಸರ್ವೆಯನ್ನು ಬಿಬಿಎಂಪಿಯೊಂದಿಗೆ ಮಾಡಲಿದೆ.
ಬಿಬಿಎಂಪಿಯ ತೆರಿಗೆ ಮತ್ತು ಕರಗಳ ಆದಾಯ ಮೂಲ 4,470 ಕೋಟಿ ರೂ, ತೆರಿಗೆಯೇತರ ಆದಾಯ 3,097 ಕೋಟಿ ರೂ., ಕೇಂದ್ರ ಸರ್ಕಾರದ ಆದಾಯ 488 ಕೋಟಿ ರೂ., ರಾಜ್ಯ ಸರ್ಕಾರದ ಅನುದಾನ 3,589 ಕೋಟಿ ರೂ., ಅಸಾಧಾರಣ ಆದಾಯವಾಗಿ 724 ಕೋಟಿ ರೂ. ಸಂಗ್ರಹಿಸಲು ಅಂದಾಜಿಸಲಾಗಿದೆ.
ಇನ್ನು ಪಾಲಿಕೆ ವೆಚ್ಚದಲ್ಲಿ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಪಾಲಿಕೆ ಒಟ್ಟಾರೆ ವೆಚ್ಚದಲ್ಲಿ ಶೇ.54ರಷ್ಟು ಅತಿ ಹೆಚ್ಚು ಪಾಲನ್ನು ಹೊಂದಿದೆ. ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ 6,661 ಕೋಟಿ ರೂ., ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳಿಗಾಗಿ 2,271 ಕೋಟಿ ರೂ. (ಶೇ.18),
ಸಿಬ್ಬಂದಿ ವೆಚ್ಚಕ್ಕಾಗಿ 1,607 ಕೋಟಿ ರೂ.(ಶೇ.13), ಕಾರ್ಯಕ್ರಮಗಳ ವೆಚ್ಚಕ್ಕಾಗಿ 389 ಕೋಟಿ ರೂ. (ಶೇ.7), ಠೇವಣಿ ಮತ್ತು ಕರ ಮರುಪಾವತಿಗಾಗಿ 527 ಕೋಟಿ ರೂ.(ಶೇ.4) ಹಾಗೂ ಆಡಳಿತ ವೆಚ್ಚಕ್ಕಾಗಿ 389 ಕೋಟಿ ರೂ.(ಶೇ.3) ಸೇರಿದಂತೆ ಒಟ್ಟಾರೆ 2024-25ನೇ ಆರ್ಥಿಕ ವರ್ಷದಲ್ಲಿ 13,369 ಕೋಟಿ ರೂ.ವೆಚ್ಚ ಮಾಡಲು ಬಿಬಿಎಂಪಿ ಉದ್ದೇಶಿಸಿದೆ.
ಜಾಹೀರಾತು ನೀತಿ 2024ರನ್ನು ಸುಪ್ರೀಂಕೋರ್ಟ್ ನಿರ್ದೇಶನದ ರೀತಿ ಜಾರಿಗೆ ತರುವುದಾಗಿ ಶಿವಾನಂದ ಕಲ್ಕೆರೆ ಹೇಳಿದರು.
ಬಜೆಟ್ ಮುಖ್ಯಾಂಶಗಳು ಈ ಕೆಳಕಂಡಂತಿದೆ :
ಬಿಬಿಎಂಪಿ ಕಂದಾಯ:
* ಪಾಲಿಕೆ ವ್ಯಾಪ್ತಿಯಲ್ಲಿರುವ 20 ಲಕ್ಷ ಅಸ್ತಿಗಳನ್ನು ಗಣಕೀಕರಣಗೊಳಿಸಿ ಇ-ಖಾತಾ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.
* ಕಾವೇರಿ-2 ತಂತ್ರಾಂಶದೊಂದಿಗೆ ಪಾಲಿಕೆಯ’ನಮ್ಮ ಸ್ವತ್ತು’ ವ್ಯವಸ್ಥೆಯನ್ನು ಸಂಯೋಜನೆ ಮಾಡಲಾಗುವುದು.
* ಆಸ್ತಿ ತೆರಿಗೆ ಮೇಲಿನ ಬಡ್ಡಿ ಮತ್ತು ದಂಡಕ್ಕೆ ಸಂಬಂಧಿಸಿದಂತೆ ಆಸ್ತಿ ತೆರಿಗೆದಾರರಿಗೆone Time Settlement(OTS) ಸಹಕಾರಿಯಾಗಲಿದೆ. ತಂದಿದ್ದು. ಇದರಿಂದ 15 ಲಕ್ಷ ತೆರಿಗೆದಾರರಿಗೆ
* ಮಾರ್ಗದರ್ಶನ ಮೌಲ್ಯ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯನ್ನು 1ನೇ ಏಪ್ರಿಲ್ 2024 ರಿಂದ ಜಾರಿಗೆ ತರಲಾಗುವುದು.
* ಪಾಲಿಕೆಯಲ್ಲಿ ಹೊಸ ಜಾಹೀರಾತು ನೀತಿಯನ್ನು ಜಾರಿಗೆ ತರಲಾಗುವುದು. ಇದರಿಂದ ರೂ.500 ಕೋಟಿ ರೂ.ಗಳಷ್ಟು ಜಾಹೀರಾತು ಆದಾಯವನ್ನು ಗಳಿಸುವ ನೀರಿಕ್ಷೆಯಿದೆ. ಒಟ್ಟು 6000 ಕೋಟಿಯ ಆಸ್ತಿ ತೆರಿಗೆ ನಿರೀಕ್ಷಿಸಿದ್ದೇವೆ.
* ಪ್ರೀಮಿಯಂ ಎಫ್‌ಎಆರ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಇದರಿಂದ 1000 ಕೋಟಿ ರೂ.ಗಳನ್ನು ಸಂಗ್ರಹಿಸುವ ನೀರಿಕ್ಷೆಯಿದೆ.
ಪಾಲಿಕೆ ಆಡಳಿತ:
*ಈ ಸಾಲಿನಲ್ಲಿ 16,000 ಪೌರ ಕಾರ್ಮಿಕರನ್ನು ನೇರ ಪಾವತಿ ಅಡಿಯಲ್ಲಿ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.
* 8 ವಲಯಗಳಲ್ಲಿ ಅಧಿಕಾರ ವಿಕೇಂದ್ರಿಕರಣದ ಭಾಗವಾಗಿ ವಲಯಗಳಲ್ಲಿನ ಆಡಳಿತವನ್ನು ಬಲಪಡಿಸಲು ಒಂದೊಂದು ವಲಯಕ್ಕೆ ಒಬ್ಬ ಭಾ.ಆ.ಸೇ ಅಧಿಕಾರಿಯನ್ನು ನಿಯೋಜಿಸಿ ಅಧಿಕಾರಿ ಮತ್ತು ಆರ್ಥಿಕ ಪ್ರತ್ಯಾಯೋಜನೆ ನಿಡಲಾಗಿದೆ.
* ಪಾಲಿಕೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ಸಲುವಾಗಿ ಒಂದು ಗ್ರಂಥಾಲಯ ಮತ್ತು ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗುವುದು.
ಬ್ರಾಂಡ್ ಬೆಂಗಳೂರು ಪರಿಕಲ್ಪನೆಗಳು:
*ಪಾಲಿಕೆಯ ಬೃಹತ್ ಯೋಜನೆಗಳನ್ನು ಬ್ಯಾಂಡ್ ಬೆಂಗಳೂರು ಪರಿಕಲ್ಪನೆಯ ಅಡಿಯಲ್ಲಿ ರೂಪಿಸಲಾಗಿದೆ.
* ಬ್ಯಾಂಡ್ ಬೆಂಗಳೂರು ಉದ್ದೇಶಕ್ಕಾಗಿ ಪ್ರತ್ಯೇಕ ESCROW ಖಾತೆಯನ್ನು ತೆರೆದು ಆದ್ಯತೆಯ ಮೇರೆಗೆ ಹಣ ಪಾವತಿ ಮಾಡಲಾಗುವುದು. ಈ ಉದ್ದೇಶಕ್ಕಾಗಿ 1,580 ಕೋಟಿ ರೂ.ಗಳನ್ನು ಬ್ಯಾಂಡ್ ಬೆಂಗಳೂರು ಯೋಜನೆಗಾಗಿ ಮೀಸಲಿರಿಸಿದೆ.
1. ಸುಗಮ ಸಂಚಾರ ಬೆಂಗಳೂರು:
*ಸಮಗ್ರ ಸಂಚಾರ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಈ ಸಾಲಿನಲ್ಲಿ ರೂ.200 ಕೋಟಿಗಳ Seed Money ಒದಗಿಸಲಾಗಿದೆ.
* ಪರಿಷ್ಕೃತ ಮಹಾನಕ್ಷೆ-2015(RMP-2015) ರಂತೆ ಮುಖ್ಯ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿ ಒಳಗೊಂಡಂತೆ ಒಟ್ಟಾರೆ 130 ಕೋಟಿ ರೂ.ಗಳನ್ನು ಒದಗಿಸಲಾಗುವುದು.
* “ಸಂಚಾರಯುಕ್ತ ರಸ್ತೆಗಳು”ಯೋಜನೆಯಡಿಯಲ್ಲಿ ರಾಜಕಾಲುವೆ ಇಕ್ಕೆಲಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ 100 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.
* ಸುಗಮ ಸಂಚಾರಕ್ಕಾಗಿ ಗುಂಡಿ ರಹಿತ ವೈಟ್ ಟಾಪಿಂಗ್ ರಸ್ತೆಗಳನ್ನು ನಿರ್ಮಿಸಲಾಗುವುದು. ಅದಕ್ಕಾಗಿ 300 ಕೋಟಿ ರೂ.ಗಳನ್ನು ಒದಗಿಸಿದೆ.
* ‘ಸಂಯುಕ್ತ ಮೆಟ್ರೋ-ರಸ್ತೆ ಮೇಲ್ವೇತುವೆ ಮಾರ್ಗ (ಡಬಲ್ ಡೆಕ್ಕರ್ ರಸ್ತೆ)’ ಗಳನ್ನು ನಿರ್ಮಿಸಲು 100 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
* ವಾಹನಗಳ ಸುಗಮ ಸಂಚಾರ ಮತ್ತು ವಾಹನ ನಿಲುಗಡೆಗೆ ಆದ್ಯತೆಯನ್ನು ನೀಡುವ ಸಲುವಾಗಿ, ನಗರದಲ್ಲಿ ವಾಹನ ನಿಲುಗಡೆ ನೀತಿ-2021 ಅನ್ನು ಜಾರಿಗೆ ತರಲಾಗಿರುತ್ತದೆ.
* ಪಾಲಿಕೆ ವ್ಯಾಪ್ತಿಯ 225 ವಾರ್ಡಗಳಲ್ಲಿ ನಿರ್ವಹಣೆ ಉದ್ದೇಶಕ್ಕಾಗಿ ಪ್ರತಿ ವಾರ್ಡಗೆ ರೂ.75 ಲಕ್ಷಗಳಂತೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗಾಗಿ ಪ್ರತಿ ವಾರ್ಡಗೆ ರೂ.1.25 ಕೋಟಿಗಳಂತೆ ಒಟ್ಟಾರೆಯಾಗಿ ರೂ. 450 ಕೋಟಿ ಗಳನ್ನು ಒದಗಿಸಲಾಗಿದೆ.
2. ಬ್ರಾಂಡ್ ಬೆಂಗಳೂರು- ಸ್ವಚ್ಛ ಬೆಂಗಳೂರು:
* ತ್ಯಾಜ್ಯವನ್ನು ಸಂಸ್ಕರಿಸಲು 50 ರಿಂದ 100 ಎಕರೆಗಳಷ್ಟನ್ನು 4 ದಿಕ್ಕುಗಳಲ್ಲಿ ಜಮೀನುಗಳನ್ನು ಗುರುತಿಸಲಾಗಿದ್ದು, ಖರೀದಿಗಾಗಿ 100 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
* ಮಹಿಳೆಯರಿಗೆ ಪ್ರಾಮುಖ್ಯತೆ ನಿರ್ಮಿಸಲಾಗುವುದು. Des 100 ಸಂಖ್ಯೆಯ ‘She Toilets’
* ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ (BSWMLA) ಗಾಗಿ 1,000 ಕೋಟಿ ರೂ.ಗಳ ಅನುದಾನವನ್ನು ಪಾಲಿಕೆಯಿಂದ ನೀಡಲಾಗುವುದು.
* 2024-25ನೇ ಸಾಲಿನಿಂದ ಪ್ರತಿ ವಲಯದ ಒಬ್ಬ ಪೌರ ಕಾರ್ಮಿಕರಿಗೆ ರೂ.50.000/-ಗಳ 8 ‘ಶರಣೆ ಸತ್ಯಕ್ಕ’ ಪ್ರಶಸ್ತಿಗಳನ್ನು ನೀಡಲು ಉದ್ದೇಶಿಸಿದ್ದು, ಪಾಲಿಕೆಯಿಂದ ಆಚರಿಸುವ ಪೌರ ಕಾರ್ಮಿಕ ದಿನಾಚರಣೆಯಂದು ನೀಡಿ ಗೌರವಿಸಲು ಯೋಜಿಸಲಾಗಿದೆ.
3. ಬ್ರಾಂಡ್ ಬೆಂಗಳೂರು-ಹಸಿರು ಬೆಂಗಳೂರು:
*ಬೆಂಗಳೂರಿನ ಮೊಟ್ಟಮೊದಲ ಹವಾಮಾನ ಕ್ರಿಯೆ ಮತ್ತು ಸ್ಥಿತಿ-ಸ್ಥಾಪಕತ್ವ ಯೋಜನೆ (BCAP: Climate Action and Resilience Plan) ಯನ್ನು 27ನೇ ನವೆಂಬರ್ 2023 ರಂದು ಪ್ರಾರಂಭಿಸಲಾಗಿದೆ.
* ಪಾಲಿಕೆಯಲ್ಲಿ ಪ್ರಸ್ತಕ ಸಾಲಿನಿಂದ ಅರಣ್ಯ, ತೋಟಗಾರಿಕೆ ಹಾಗೂ ಕೆರೆಗಳ ವಿಭಾಗವನ್ನು, ಅರಣ್ಯ ಪರಿಸರ,ಮತ್ತು ಹವಾಮಾನ ವೈಪರಿತ್ಯ ನಿರ್ವಹಣೆ (FECCM: Forest, Environment and Climate Change Management) ವಿಭಾಗ ಎಂದು ಮರು ನಾಮಕರಣ ಮಾಡಲಾಗಿದೆ.
* ಪರಿಸರದಲ್ಲಿನ ಗಿಡ-ಮರಗಳ ಮಹತ್ವವನ್ನು ಶಾಲಾ/ಕಾಲೇಜು ವಿದ್ಯಾರ್ಥಿಗಳಲ್ಲಿ ಮೂಡಿಸುವ ಸಲುವಾಗಿ ‘ಹಸಿರು ರಕ್ಷಕ’ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
* ಪ್ರಸ್ತುತ ಸಾಲಿನಲ್ಲಿ 2 ಲಕ್ಷ ಸಸಿಗಳನ್ನು ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಸಿಗಳ ಬೇಡಿಕೆಗೆ 2 ಹೊಸ ಹೈಟೆಕ್ ಸಸ್ಯ ಕ್ಷೇತ್ರಗಳನ್ನು ಸ್ಥಾಪಿಸಲಾಗುವುದು.
* ಪಾಲಿಕೆ ವ್ಯಾಪ್ತಿಯಲ್ಲಿನ ಹೊಸ ಲೇ-ಔಟ್‌ಗಳಲ್ಲಿ ಹೊಸದಾಗಿ ಉದ್ಯಾನವನಗಳ ಅಭಿವೃದ್ಧಿ, ನಿರ್ವಹಣೆ, ಇತ್ಯಾದಿ ಕಾರ್ಯಗಳಿಗಾಗಿ 35 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
* ಕೆರೆಗಳ ಅಭಿವೃದ್ಧಿ ಮತ್ತು ಸುಧಾರಣೆ, ಕೆರೆಗಳ ಗಡಿಗಳಿಗೆ ತಂತಿಬೇಲಿಯನ್ನು ಹಾಗೂ ಇತ್ಯಾದಿ ಕಾರ್ಯಗಳಿಗಾಗಿ 35 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
* ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಿಸಲು ತೆರೆದ ಬಾವಿಗಳನ್ನು ಹಾಗೂ ಕಲ್ಯಾಣಿಗಳನ್ನು ಪುನರುಜ್ಜಿವನಗೊಳಿಸಲಾಗುವುದು.
* ಪಾಲಿಕೆ ವ್ಯಾಪ್ತಿಯ ರಾಜಕಾಲುವೆಗಳ ಅಭಿವೃದ್ಧಿಯನ್ನು ವಿಶ್ವ ಬ್ಯಾಂಕ್, ಕೇಂದ್ರ ಸರ್ಕಾರ ನೆರವಿನಿಂದ ಅಭಿವೃದ್ಧಿಪಡಿಸಲಾಗುವುದು.
4. ಬ್ರಾಂಡ್ ಬೆಂಗಳೂರು-ಆರೋಗ್ಯಕರ ಬೆಂಗಳೂರು:
* ಬ್ಯಾಂಡ್ ಬೆಂಗಳೂರು ಅಡಿಯಲ್ಲಿ ಆರೋಗ್ಯ ಸೇವೆಗಳ ಉನ್ನತೀಕರಿಸಲು 2 ವರ್ಷಗಳಲ್ಲಿ ಸುಮಾರು 200 ಕೋಟಿ ರೂ.ಗಳ ವೆಚ್ಚವನ್ನು ಭರಿಸಲು ಉದ್ದೇಶಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು 100 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪಾಲಿಕೆ ನಡುವಿನ ಸಮನ್ವಯವನ್ನು ಸುಗಮಗೊಳಿಸಲು. ಬೆಂಗಳೂರು ಆರೋಗ್ಯ ಆಯುಕ್ತರು ಎನ್ನುವ ಹೊಸ ಹುದ್ದೆಯನ್ನು ಸೃಜಿಸಿ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆರೋಗ್ಯ ವ್ಯವಸ್ಥೆಯನ್ನು ಅವರ ಆಡಳಿತಾತ್ಮಕ ಸುಪರ್ದಿಯಲ್ಲಿ ತರಲಾಗುವುದು. ಇದರ ನಿರ್ವಹಣೆಗಾಗಿ ಈ ಸಾಲಿನಲ್ಲಿ 20 ಕೋಟಿ ರೂ.ಗಳನ್ನು ಒದಗಿಸಲಾಗುವುದು.
* ಪಾಲಿಕೆಯು ‘ಸಮಗ್ರ ಸದೃಢ ಆರೋಗ್ಯ’ ಹೆಸರಿನ ಯೋಜನೆ ಅಡಿಯಲ್ಲಿ ಮುಂದಿನ 3 ವರ್ಷಗಳಲ್ಲಿ ಸಮಗ್ರ ಯೋಜನೆಯನ್ನು ಹಮ್ಮಿಕೊಂಡಿರುತ್ತದೆ. ಇದರ ಭಾಗವಾಗಿ ಈ ಸಾಲಿನಲ್ಲಿ 25 ಕೋಟಿ ರೂ.ಗಳನ್ನು ಒದಗಿಸಲಾಗುವುದು.
* ಈ ಸಾಲಿನಲ್ಲಿ 50 ಹೊಸ ಇಂದಿರಾ ಕ್ಯಾಂಟೀನ್ಗಳನ್ನು ಸ್ಥಿರ ಅಥವಾ ಮೊಬೈಲ್ ಮೋಡ್‌ನಲ್ಲಿ ಸ್ಥಾಪಿಸಲಾಗುವುದು ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಯೋಜಿಸಲಾಗಿದೆ.
* ಪಾಲಿಕೆಯ ಹೊಸ ರುದ್ರಭೂಮಿ ಹಾಗೂ ಚಿತಾಗಾರಗಳನ್ನು ನಿರ್ಮಾಣ ಮಾಡಲು 15 ಕೋಟಿಗಳನ್ನು ಒದಗಿಸಲಾಗಿದೆ.
* ಆಧುನಿಕ ಕಸಾಯಿಖಾನೆ ನಿರ್ಮಾಣ ಮಾಡಲು ಹಾಗೂ ಪ್ರಾಣಿಗಳ ತ್ಯಾಜ್ಯ ವಿಲೇವಾರಿಗಾಗಿ 4 ಘಟಕಗಳನ್ನು ನಿರ್ಮಿಸಲು ಈ ಸಾಲಿನಲ್ಲಿ ಒಟ್ಟು 10 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
5. ಬ್ರಾಂಡ್ ಬೆಂಗಳೂರು-ಶಿಕ್ಷಣ ಬೆಂಗಳೂರು:
* ಪಾಲಿಕೆಯ ಶಾಲಾ ಮತ್ತು ಕಾಲೇಜುಗಳ ಕಲಿಕಾ ಸಾಮರ್ಥ್ಯ ವೃದ್ಧಿಸುವ ಸಲುವಾಗಿ ಕಂಪ್ಯೂಟರ್ ಲ್ಯಾಬ್, ಡಿಜಿಟಲ್ ಲ್ಯಾಬ್, ಮಾಹಿತಿ ಮತ್ತು ತಂತ್ರಜ್ಞಾನ ಲ್ಯಾಬ್, ಸೈನ್ಸ್ ಲ್ಯಾಬ್, ಇ- ಗ್ರಂಥಾಲಯಗಳನ್ನು ಸ್ಥಾಪಿಸುವುದಕ್ಕಾಗಿ ಈ ಸಾಲಿನಲ್ಲಿ 10 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
* ಹೊಸ ಶಾಲಾ ಕಾಲೇಜು ಕಟ್ಟಡಗಳನ್ನು ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುತ್ತಿದೆ. ಅದಕ್ಕಾಗಿ 35 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
6. ಬ್ರಾಂಡ್ ಬೆಂಗಳೂರು-ಟೆಕ್ ಬೆಂಗಳೂರು:
*ಪಾಲಿಕೆಯಲ್ಲಿ ಹಾಲಿ ಬಳಕೆಯಲ್ಲಿರುವ ಸಾಫ್ಟ್‌ವೇರ್ ಮತ್ತು ಐಟಿ ಅಪ್ಲಿಕೇಶನ್ (IT App.) ಗಳನ್ನು ಪರಸ್ಪರ ಸಮನ್ವಯಗೊಳಿಸಿ, ಸಮಗ್ರವಾದ ವ್ಯವಸ್ಥೆಯನ್ನು ರೂಪಿಸಲು ಈ ಸಾಲಿನಲ್ಲಿ 50 ಕೋಟಿ ರೂ.ಗಳನ್ನು ಒದಗಿಸಿದೆ.
7. ಬ್ರಾಂಡ್ ಬೆಂಗಳೂರು-ವೈಬ್ರೆಂಟ್ ಬೆಂಗಳೂರು:
* 250 ಮೀಟರ್ ಎತ್ತರದ ಸೈ-ಡೆಕ್ ಅನ್ನು ನಿರ್ಮಿಸಲು 350 ಕೋಟಿ ರೂ.ಗಳೆಂದು ಅಂದಾಜಿಸಲಾಗಿದ್ದು, ಈ ಸಾಲಿನಲ್ಲಿ 50 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.
* ಪಾಲಿಕೆಯಿಂದ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ.ಗಳ ಅನುದಾನವನ್ನು ಈ ಸಾಲಿನಲ್ಲಿ ಒದಗಿಸಲಾಗುವುದು.
* ಬೆಂಗಳೂರು ನಗರವನ್ನು ಆಕರ್ಷಣೀಯವಾಗಿ ಮಾಡಲು ಬೆಂಗಳೂರು ನಗರದಲ್ಲಿರುವ ಮೇಲ್ವೇತುವೆ, ಕೆಳಸೇತುವೆ, ರಸ್ತೆ ಕೂಡು ಜಾಗಗಳು, ಉದ್ಯಾನವನಗಳಲ್ಲಿ ಆಕರ್ಷಣೀಯ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಲು 100 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.
• ಬೆಂಗಳೂರು ನಗರದ ಕೂಡು ರಸ್ತೆಗಳ ಹಾಗೂ ಸಾರ್ವಜನಿಕ ಸ್ಥಳಗಳನ್ನು ಸೌಂದರ್ಯೀಕರಣಗೊಳಿಸಲು ಒದಗಿಸಲಾಗುವುದು. ಸಾಲಿನಲಿ 25 ಕೋಟಿ ರೂ.ಗಳ ಅನುದಾನವನ್ನು ಮೀಸಲಿಟ್ಟಿದೆ.
ಕಲ್ಯಾಣ ವಿಭಾಗ:
ನೇರ ಪಾವತಿ ವ್ಯವಸ್ಥೆ ಅಡಿ ಸೇವೆ ಸಲ್ಲಿಸಿ ನಿವೃತ್ತರಾಗುವ ಪೌರಕಾರ್ಮಿಕರುಗಳ ನಿವೃತ್ತಿ ನಂತರದ ಬದುಕಿಗೆ ಆರ್ಥಿಕ ರಕ್ಷಣೆ ಒದಗಿಸಲು ಪಿಂಚಣಿ ಯೋಜನೆಯನ್ನು ಈ ಸಾಲಿನಿಂದ ಜಾರಿಗೆ ತರಲು ರೂ.137,50 ಕೋಟಿಗಳನ್ನು ಮೀಸಲಿರಿಸಲಾಗಿದೆ.
* ಬ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿಯಲ್ಲಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ಅಲ್ಪಸಂಖ್ಯಾತ ಹಾಗೂ ಮಂಗಳಮುಖಿಯರ ಸಮುದಾಯದ ಕಲ್ಯಾಣಕ್ಕಾಗಿ ಇ-ಸಾರಥಿ ಯೋಜನೆಯನ್ನು ಈ ಸಾಲಿನಿಂದ ಜಾರಿಗೆ ತರಲು ರೂ.5 ಕೋಟಿಗಳನ್ನು ಮೀಸಲಿರಿಸಲಾಗಿದೆ.
* ಕಾರ್ಮಿಕ ಮಹಿಳೆಯರು ಮತ್ತು ಪೌರಕಾರ್ಮಿಕರಿಗೆ ವಿದ್ಯುತ್ ದ್ವಿ ಚಕ್ರ ವಾಹನಗಳನ್ನು ಹಾಗೂ ವಿಶೇಷ ಚೇತನರಿಗೆ ಹೆಚ್ಚುವರಿ ಚಕ್ರ ಅಳವಡಿಸಿರುವ ವಿದ್ಯುತ್ ವಾಹನಗಳನ್ನು ಉಚಿತವಾಗಿ ವಿತರಿಸಲು ಈ ಸಾಲಿನಲ್ಲಿ ರೂ.12 ಕೋಟಿಗಳ ಅನುದಾನ ಮೀಸಲಿರಿಸಲಾಗಿದೆ.
* ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಿಕೊಳ್ಳುವ ಮೂಲಕ ಮಂಗಳಮುಖಿಯರ ಸಮುದಾಯ ಹಾಗೂ ಆರ್ಥಿಕವಾಗಿ ಹಿಂದುಳಿದ ಇತರೆ ವರ್ಗಗಳಿಗೆ ಸಹಾಯ ಧನವನ್ನು ಪಾಲಿಕೆಯ ವತಿಯಿಂದ ನೀಡಲು ಈ ಸಾಲಿನಲ್ಲಿ ರೂ.10 ಕೋಟಿಗಳ ಅನುದಾನ ಮೀಸಲಿರಿಸಲಾಗಿದೆ.
* ನಗರದಲ್ಲಿರುವ ಎಲ್ಲಾ ವರ್ಗದ ನಿವೇಶನ ಹೊಂದಿರುವ ವಸತಿ ರಹಿತ ಬಡವರಿಗೆ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಒಂಟಿ ಮನೆ ಯೋಜನೆಯಡಿ ಒಟ್ಟಾರೆ ರೂ.211 ಕೋಟಿ ಅನುದಾನ ಮೀಸಲಿರಿಸಲಾಗಿದೆ.
* ಮಂಗಳ-ಮುಖಿಯರ ಅನುಕೂಲಕ್ಕಾಗಿ ರಾತ್ರಿ ನಿರಾಶ್ರಿತರ ತಂಗುದಾಣವನ್ನು ನಿರ್ಮಾಣ ಮಾಡಲು ಈ ಸಾಲಿನಲ್ಲಿ ರೂ.4 ಕೋಟಿ ಅನುದಾನ ಮೀಸಲಿರಿಸಲಾಗಿದೆ.
* ಬೀದಿ ಬದಿ ವ್ಯಾಪಾರಿಗಳ ಮಾರಾಟದ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸುಮಾರು 5,000 ಜನರಿಗೆ ಸಬ್ಸಿಡಿ ಆಧಾರಿತ ಇ-ವೆಂಡಿಂಗ್ ರಿಕ್ಷಾ ಒದಗಿಸುವ ಯೋಜನೆಯನ್ನು 50 ಕೋಟಿ ರೂ.ಗಳ ಅನುದಾನದಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ.
ಇಂದಿನ ಬಜೆಟ್ ಮಂಡನೆ ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರು ಹಾಗೂ ವಲಯ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.