ಬೆಂಗಳೂರು, ಫೆ.28 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಒಂದೆರಡು ದಿನಗಳಲ್ಲಿ ಟ್ಯಾಂಕರ್ ನೀರು ಪೂರೈಸುವವರ ಜೊತೆ ಸಭೆ ನಡೆಸಿ, ಟ್ಯಾಂಕರ್ ನೀರಿನ ದರವನ್ನು ಅಂತಿಮವಾಗಿ ನಿಗದಿಪಡಿಸಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಇಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜೊತೆ ಬಿಡಬ್ಲ್ಯುಎಸ್ ಎಸ್ ಬಿ ಮತ್ತು ಬಿಬಿಎಂಪಿ ಅಧಿಕಾರಿಗಳು ಜಂಟಿ ಸಭೆ ನಡೆಸಿದ ಬಳಿಕ ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಜೊತೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಒಟ್ಟಾರೆ ಸಾರಿಗೆ ಇಲಾಖೆಯ 3,500 ನೀರಿನ ಟ್ಯಾಂಕರ್ ನೋಂದಣಿಯಾಗಿದೆ. ಆದರೆ ಬಿಬಿಎಂಪಿಯಲ್ಲಿ ಕೇವಲ 60 ನೀರಿನ ಟ್ಯಾಂಕರ್ ನವರು ವ್ಯಾಪಾರ ಪರವಾನಗಿ ಪಡೆದಿದ್ದಾರೆ. ನಗರದಲ್ಲಿ ನೀರಿನ ಸಮಸ್ಯೆ ನಿಯಂತ್ರಿಸುವ ಸಲುವಾಗಿ ಮಾ.1 ರಿಂದ ಏಳನೇ ತಾರೀಖಿನ ಒಳಗೆ ಸ್ವಯಂ ನೋಂದಣಿ ಮಾಡಿಕೊಳ್ಳಬೇಕು. ಆನಂತರ ಪಾಲಿಕೆ ಅದಕ್ಕೆ ಷರತ್ತು ವಿಧಿಸುತ್ತೇವೆ. ನೀರಿನ ವ್ಯವಹಾರ ನಡೆಸುವ ಎಲ್ಲರಿಗೂ ವಾಹನ ನೋಂದಣಿ ಮಾಡಲು ಅವಕಾಶವಿದೆ. ಮಾ.7ನೇ ತಾರೀಖಿನ ಒಳಗೆ ನೀರಿನ ಟ್ಯಾಂಕರ್ ವಾಹನ ನೋಂದಣಿ ಮಾಡದಿದ್ದರೆ ನೀರು ಸರಬರಾಜು ಮಾಡಲು ಅವಕಾಶ ಮಾಡಿಕೊಡುವುದಿಲ್ಲ.
ಬಿಬಿಎಂಪಿಯಿಂದ ಇಂತಹ ನೀರಿನ ಟ್ಯಾಂಕರ್ ಗಳ ನೋಂದಣಿಗೆ ತಂತ್ರಾಂಶ ರಚಿಸುವ ಕಾರ್ಯ ಆರಂಭವಾಗಿದೆ. ಕೆಲವು ನೀರಿನ ಟ್ಯಾಂಕರ್ ನವರ ಹತ್ತಿರ ಒಂದು ಹಂತದಲ್ಲಿ ನೀರಿನ ಲೆಕ್ಕಚಾರ ಮಾತನಾಡುತ್ತಿದ್ದೇವೆ. ಟ್ಯಾಂಕರ್ ನೀರಿನ ದರ ನಿಗದಿ ಬಗ್ಗೆ ಸದ್ಯದಲ್ಲೇ ನಿಗದಿ ಮಾಡುತ್ತೇವೆ. ಪಾಲಿಕೆ ರೂಪಿಸುವ ತಂತ್ರಾಂಶದಲ್ಲಿ ನೋಂದಣಿ ಮಾಡದ ನೀರಿನ ಟ್ಯಾಂಕರ್ ಗಳಿಗೆ ತೊಂದರೆಯಾಗಬಹುದು.
ನೀರಿನ ಸಮಸ್ಯೆಯಿರುವ 110 ಹಳ್ಳಿಗಳು ಬರುವ 30 ವಾರ್ಡ್ ಗಳಲ್ಲೂ, ಪ್ರತಿಯೊಂದು ವಾರ್ಡ್ ನಲ್ಲಿ ಬೆಂಗಳೂರು ಜಲಮಂಡಳಿ ತಲಾ ಒಬ್ಬ ಎಇ ಹಾಗೂ ಪಾಲಿಕೆಯ ತಲಾ ಒಬ್ಬ ಎಇ ವಾರ್ಡ್ ಎಂಜಿನಿಯರ್ ಗಳನ್ನು ನಿಯೋಜಿಸುತ್ತೇವೆ. ಬೆಂಗಳೂರು ಜಲಮಂಡಳಿ, ನಗರ ಜಿಲ್ಲಾಧಿಕಾರಿಗಳ ಮೂಲಕ 200 ನೀರಿನ ಟ್ಯಾಂಕರ್ ಪಡೆದುಕೊಳ್ಳುತ್ತಿದ್ದೇವೆ. 100 ನೀರಿನ ಟ್ಯಾಂಕರ್ 110 ಹಳ್ಳಿಗಳಿಗೆ ಹಾಗೂ ಉಳಿದ 100 ನೀರಿನ ಟ್ಯಾಂಕರ್ ಪಾಲಿಕೆಯ ಉಳಿದ ವಾರ್ಡ್ ಗಳಿಗೆ ನೀರು ಪೂರೈಸಲಾಗುತ್ತದೆ.
ಟ್ಯಾಂಕರ್ ನೀರಿನ ದರವನ್ನು ಬಿಬಿಎಂಪಿ ಹಾಗೂ ಜಲಮಂಡಳಿ ಸಮಾಲೋಚನೆ ನಡೆಸಿ ನಿಗದಿ ಮಾಡಿದ ಬಳಿಕ, ನೀರಿನ ಟ್ಯಾಂಕರ್ ನವರು ಅದಕ್ಕಿಂತ ಹೆಚ್ಚಿನ ನೀರಿನ ದರ ಪಡೆದರೆ ಅವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಥವಾ ಇನ್ಯಾವುದೇ ಕಾನೂನಿನಡಿ ಕ್ರಮ ಕೈಗೊಳ್ಳಲು ನಮ್ಮ ಬಳಿ ಅವಕಾಶವಿದೆ. ಬೆಂಗಳೂರಿನ ನಾಲ್ಕು ತಾಲೂಕುಗಳನ್ನು ಬರಪೀಡಿತ ಅಂತ ಸರ್ಕಾರ ಘೋಷಣೆ ಮಾಡಿದೆ. ಸಾಕಷ್ಟು ನೀರಿನ ಸಮಸ್ಯೆ ಇರುವ ನಗರ ಪ್ರದೇಶಗಳಲ್ಲಿ 108 ದೊಡ್ಡ ಪ್ಲಾಸ್ಟಿಕ್ ನೀರಿನ ಟ್ಯಾಂಕರ್ ಇಟ್ಟು ನೀರು ಪೂರೈಸಲು ಕ್ರಮ ಕೈಗೊಂಡಿದ್ದೇವೆ ಎಂದವರು ಹೇಳಿದ್ದಾರೆ.
ನಗರದಲ್ಲಿ ಲಾರಿ ಅಸೋಸಿಯೇಷನ್ ಭಾಗವಾಗಿ ನೀರಿನ ಟ್ಯಾಂಕರ್ ನವರು ನೀರು ಪೂರೈಕೆ ಮಾಡುತ್ತಿದ್ದಾರೆ. ಬೇಸಿಗೆ ಬರುವ ಮುನ್ನವೇ ನೀರಿನ ದರ ಕಳೆದ 15-20 ದಿನಗಳಿಂದ ಏರಿಕೆಯಾಗಿದೆ.
ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಮಾತನಾಡುತ್ತಾ, ನಗರದಲ್ಲಿನ ನೀರಿನ ಸಮಸ್ಯೆ ತಲೆದೋರಿರುವ ಕಡೆ ಬಿಡಬ್ಲ್ಯುಎಸ್ ಎಸ್ ಬಿ 136 ನೀರಿನ ಟ್ಯಾಂಕರ್ ವಾಹನದ ಮೂಲಕ ಉಚಿತವಾಗಿ ಕಾವೇರಿ ನೀರು ಸರಬರಾಜು ಮಾಡುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ತ್ಯಾಜ್ಯ ಸಂಸ್ಕರಣಾ ನೀರು ಬಳಕೆ ಮಾಡುತ್ತಿದ್ದಂತೆ ಬೆಂಗಳೂರಿನ ಅಂತರ್ಜಲ ಮಟ್ಟ ಹೆಚ್ಚಿಸಲು ನಗರದ 186 ಕೆರೆಯಲ್ಲಿ ಹಲವು ಕರೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಿಸಿ ಅವುಗಳನ್ನು ಕೆರೆ ತುಂಬಿಸುವ ಕೆಲಸದ ಪೈಕಿ 7 ಕೆರೆಗಳಲ್ಲಿ ಈ ಪೈಲೆಟ್ ಯೋಜನೆ ಮಾಡುತ್ತಿದ್ದೇವೆ. ನಗರದ ಉಳಿದ 179 ಕೆರೆಗಳಿಗೂ ಈ ಯೋಜನೆ ಹಮ್ಮಿಕೊಳ್ಳುತ್ತೇವೆ. ಕಾವೇರಿ 1472 ದಶಲಕ್ಷ ಲೀ. ನೀರು ಸದ್ಯ ಪಂಪ್ ಮಾಡ್ತಿದ್ದೇವೆ. ಮೊನ್ನೆ ಪ್ರಮುಖ ಕಾಮಗಾರಿ ನಡೆಸಿ ನೀರು ಸೋರಿಕೆ ತಡೆದು 8 ದಶಲಕ್ಷ ಲೀ. ನೀರು ಲಭ್ಯವಾಗುತ್ತಿದೆ. ಅದನ್ನು ಬಳಸಿಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಜೂನ್ ಅಂತ್ಯಕ್ಕಿಂತ ಮುಂಚೆಯೇ ಅಂದರೆ ಕಾವೇರಿ 5ನೇ ಹಂತ ಕಾಮಗಾರಿ ಏಪ್ರಿಲ್ ಅಂತ್ಯಕ್ಕೆ ಮುಗಿಯಲಿದೆ. ಮೇ ತಿಂಗಳ ಆರಂಭದಿಂದ 41,000 ನೀರಿನ ಸಂಪರ್ಕ ಪಡೆದುಕೊಂಡ 110 ಹಳ್ಳಿಗಳ ಗ್ರಾಹಕರಿಗೆ ಹಾಗೂ ಇನ್ನಿತರರಿಗೆ ಕಾವೇರಿ ನೀರು ಪೂರೈಕೆ ಮಾಡುತ್ತೇವೆ. ಪ್ರಸ್ತುತ ನಗರದಲ್ಲಿ 33 ತ್ಯಾಜ್ಯ ನೀರು ಸಂಸ್ಕರಣಾ ಸ್ಥಾವರ (STP)ಗಳಿವೆ. ಇದರಿಂದ 1,380 ದಶಲಕ್ಷ ಲೀ. ನೀರು ಸದ್ಯ ಸಂಸ್ಕರಿಸಲಾಗುತ್ತಿದೆ. 33 ಎಸ್ ಟಿಪಿಗಳ ಪೈಕಿ 20 ಸ್ಥಾವರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದರಿಂದ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ತ್ಯಾಜ್ಯ ನೀರು ಸಂಸ್ಕರಣೆ ಮಾಡಲು ಅನುಕೂಲವಾಗುತ್ತದೆ. ಹೀಗಾಗಿ ಈ ಕಾಮಗಾರಿಗಳೆಲ್ಲ ಮುಗಿದರೆ ಇನ್ನು ಎರಡು ವರ್ಷದಲ್ಲಿ ನಗರದಲ್ಲಿ 2,100 ದಶಲಕ್ಷ ಲೀ. ತ್ಯಾಜ್ಯ ನೀರು ಸಂಸ್ಕರಣೆ ಮಾಡಲು ಸಾಧ್ಯವಾಗಲಿದೆ ಜಲಮಂಡಳಿ ಅಧ್ಯಕ್ಷಕರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಆರೋಗ್ಯ ಇಲಾಖೆ ವಿಶೇಷ ಆಯುಕ್ತರು ಹಾಗೂ ರಾಜರಾಜೇಶ್ವರಿ ನಗರ ವಲಯ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್, ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಶೋಭಾ ಹಾಗೂ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.