ಬೆಂಗಳೂರು, ಫೆ.28 www.bengaluruwire.com : ಸಿಲಿಕಾನ್ ಸಿಟಿಯ ಸ್ಥಳೀಯ ಆಡಳಿತ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) 2024-25ನೇ ಸಾಲಿನ ಬಜೆಟ್ ಫೆ.29ರಂದು ಮಂಡನೆಗೆ ಸಮಯ ನಿಗದಿಯಾಗಿದೆ.
ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲ್ಕೇರಿ ಅವರು ಗುರುವಾರ ಬೆಳಿಗ್ಗೆ 10.30ಕ್ಕೆ ಪುರಭವನ (Town hall)ದಲ್ಲಿ ಬಜೆಟ್ ಮಂಡಿಸಲಿದ್ದಾರೆ. ಚುನಾಯಿತ ಪ್ರತಿನಿಧಿಗಳಿಲ್ಲದೆ ಕೇವಲ ಅಧಿಕಾರಿಗಳೇ 2024-25ನೇ ಸಾಲಿನ ಬಜೆಟ್ ಸೇರಿದಂತೆ ಸತತ ನಾಲ್ಕನೇ ವರ್ಷ ಆಯವ್ಯಯ ಮಂಡಿಸುತ್ತಿದ್ದಾರೆ.
2023-24ನೇ ಸಾಲಿನಲ್ಲಿ ಒಟ್ಟು11,163 ಕೋಟಿ ರೂ. ಮೊತ್ತದ ಆಯವ್ಯಯವನ್ನು ಹಣಕಾಸು ವಿಭಾಗದ ಆಗಿನ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು ಮಾರ್ಚ್ 2ರಂದು ಮಂಡಿಸಿದ್ದರು. 6.14 ಕೋಟಿ ರೂ. ಹಣ ಉಳಿತಾಯ ಬಜೆಟ್ ಅಗಲಿದೆ ಎಂದಿದ್ದರು. ಆದರೆ, ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳು, ಕಾಮಗಾರಿಗಳು ಹಾಗೂ ಕಾರ್ಯಕ್ರಮಗಳು ಶೇ. 22-25ರಷ್ಟೂ ಅನುಷ್ಠಾನವಾಗಿಲ್ಲ. ಹಲವು ಯೋಜನೆಗಳೂ ಆರ್ಥಿಕ ವರ್ಷ ಮುಕ್ತಾಯದ ಹಂತ ಸಮೀಪಿಸುತ್ತಿದ್ದರೂ ಇನ್ನೂ ಜಾರಿಗೆ ಬಂದಿಲ್ಲ.
ಈ ಬಾರಿಯ 2024-25ನೇ ಸಾಲಿನ ಬಜೆಟ್ ಕಳೆದ ಬಜೆಟ್‌ನ ಗಾತ್ರಕ್ಕಿಂತ ಸುಮಾರು ಶೇ.10 -15ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಬ್ರಾಂಡ್ ಬೆಂಗಳೂರು ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು, ಪಾಲಿಕೆ ಸ್ವಂತ ಸಂಪನ್ಮೂಲವಾದ ಆಸ್ತಿ ತೆರಿಗೆ 5,000 ಕೋಟಿ ಆಸುಪಾಸು ಸಂಗ್ರಹವಾಗುವ ನಿರೀಕ್ಷೆಯನ್ನು ಬಜೆಟ್ ನಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಏ.1ರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ವೆಚ್ಚ ಹಾಗೂ ಆಸ್ತಿ ಗಳ ಮಾರ್ಗಸೂಚಿ ದರ ಆಧರಿಸಿದ ಆಸ್ತಿ ತೆರಿಗೆ ವ್ಯವಸ್ಥೆ ಜಾರಿಗೆ ಬರುವುದರಿಂದ ಹಾಗೂ ತೆರಿಗೆ ಪದ್ಧತಿಯನ್ನು ಸರಳೀಕರಿಸುತ್ತಿರುವುದರಿಂದ ಹೆಚ್ಚಿನ ತೆರಿಗೆ ಸಂಗ್ರಹ ಸಾಧ್ಯವಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರದಿಂದ ಈ ಬಾರಿಯ ಬಜೆಟ್‌ನಲ್ಲಿ ಕೇವಲ 3,000 ಕೋಟಿ ರೂ. ಮಾತ್ರ ಲಭ್ಯವಾಗುತ್ತಿದೆ. ಹೆಚ್ಚಿನ ಅನುದಾನವಿಲ್ಲದ ಕಾರಣ ಪಾಲಿಕೆಯು ತನ್ನದೇ ಸ್ವಂತ ಸಂಪನ್ಮೂಲವನ್ನು ಒದಗಿಸಿಕೊಂಡು ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ. ಆಸ್ತಿ ತೆರಿಗೆ ಸಂಗ್ರಹ, ಇತರೆ ಸಂಪನ್ಮೂಲಗಳ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಲಿದೆ. ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಜನಪ್ರಿಯ ಯೋಜನೆಗಳ ಪ್ರಕಟಣೆಯಾಗುವ ಸಾಧ್ಯತೆ ಕಡಿಮೆಯಿದೆ. ವಾಸ್ತವ ಸಂಪನ್ಮೂಲ ಸಂಗ್ರಹಕ್ಕೆ ಅನುಗುಣವಾದ ಯೋಜನೆಗಳನ್ನು ಆಯವ್ಯಯದಲ್ಲಿ ಮಂಡಿಸುವ ನಿರೀಕ್ಷೆಯಿದೆ.