ಬೆಂಗಳೂರು, ಫೆ.27 www.bengaluruwire.com : ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಕನಸು ನನಸಾಗಲು ಕಾರಣಕರ್ತರಾದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ (ಕೆಯುಡಬ್ಲೂೃಜೆ) ಮಂಗಳವಾರ ಅಭಿನಂದಸಲಾಯಿತು.
ನಗರದ ಕೆ.ಜಿ.ರಸ್ತೆ, ಕಂದಾಯಭವನದಲ್ಲಿ ಮಹಡಿಯಲ್ಲಿರುವ ಕೆಯುಡಬ್ಲೂೃಜೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕಳೆದ ಮೂರು ದಶಕಗಳಿಂದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಣೆ ಬೇಡಿಕೆ ಈಡೇರಲಿಲ್ಲ. ಅನೇಕ ವೇದಿಕೆಗಳಲ್ಲಿ ಈ ಬೇಡಿಕೆ ವಿಚಾರ ಕನಸಗಿಯೇ ಉಳಿದಿತ್ತು. ಆದರೆ ಈ ಬಾರಿ ದಾವಣಗೆರೆಯಲ್ಲಿ ನಡೆದ ಕೆಯುಡಬ್ಲ್ಯುಜೆ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಕೊನೆಯ ಬಾರಿಗೆ ಪ್ರಸ್ತಾವನೆ ಸಲ್ಲಿಸಲಾಯಿತು. ಅದಕ್ಕೆ ಸ್ಪಂದಿಸಿದರು.
ರಾಜ್ಯದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಿಸಬಹುದು ಎಂಬ ವಿಷಯ ವಾರ್ತಾ ಇಲಾಖೆಯಿಂದ ಲಭಿಸಿತು. ಬಳಿಕ ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಗ್ರಾಮೀಣ ಪತ್ರಕರ್ತರ ತೊಂದರೆ ಅರಿತು ಪತ್ರಕರ್ತರ ಹಲವು ದಿನಗಳ ಕನಸು ನನಸಾಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಬೇರೆ ಸಂದರ್ಭದಲ್ಲಿ ಯಾವ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗೆ ಸ್ಪಂದಿಸುತ್ತಿದ್ದರೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಈ ಒಳ್ಳೆಯ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅತೀಕ್ ಸೇರಿದಂತೆ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಯೋಜನೆ ಜಾರಿಗೆ ತರಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ಶಿವಾನಂದ್ ತಗಡೂರ್ ತಿಳಿಸಿದರು.
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ವಿತರಣೆಗೆ ಎಲ್ಲಾ ಪತ್ರಕರ್ತರಿಗೆ ಸವಲತ್ತು ಸಿಗುವಂತೆ ಮಾಡಬೇಕು. ಹೆಚ್ಚಿನ ಷರತ್ತು ವಿಧಿಸದೆ ಈ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು. ಪತ್ರಕರ್ತರಿಗೆ ವಿಶೇಷ ಆದ್ಯತೆ ನೀಡದ ಕಾರಣ ಆರೋಗ್ಯ ವಿಮೆಯೆಂಬದು ಸರಿಯಾಗಿ ಅನುಷ್ಠಾನಕ್ಕೆ ಬರಲಿಲ್ಲ. ಸೂಕ್ತ ರೀತಿ ಖಾಸಗಿ ಅಥವಾ ಸರ್ಕಾರದ ಮೂಲದಿಂದ ಆರೋಗ್ಯ ವಿಮೆ ಜಾರಿಗೆ ತರಲಿ ಎಂದು ಸಂಘದ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪನವರು ಆಗ್ರಹಿಸಿದರು.
ವಸತಿ ಸಚಿವರ ಮಾಧ್ಯಮ ಸಂಯೋಜಕರಾದ ಲಕ್ಷ್ಮಿನಾರಾಯಣ ಮಾತನಾಡಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಕಂದಾಯ, ಗೃಹ ನಿರ್ಮಾಣ ಮತ್ತಿತರ ಕಡೆಗಳಿಂದ ಕಡಿಮೆ ಬೆಲೆಯಲ್ಲಿ ನಿವೇಶನ ಹಾಗೂ ಮನೆಗಳನ್ನು ಹಂಚಿಕೆ ಮಾಡಲು ಕೆಯುಡಬ್ಲ್ಯು ಜೆ ಅಧ್ಯಕ್ಷಕರು ಸೂಕ್ತ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಲಿ. ಆ ಕುರಿತಂತೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹಾಗೂ ತಾವು ವಸತಿ ಸಚಿವರ ಜೊತೆ ಚರ್ಚಿಸಿ ತಮ್ಮ ಕೈಲಾದ ಕೆಲಸಗಳನ್ನು ಮಾಡೋಣ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ.ವಿ.ಪ್ರಭಾಕರ್, ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ ಜಾರಿಗೆ ರಂದಿದ್ದು ದೊಡ್ಡ ಸಾಧನೆಯಲ್ಲಿ. ಕಳೆದ ಬಾರಿಗೆ ದಾವಣೆಗೆರೆ ಪತ್ರಕರ್ತರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆ ಜಾರಿಗೆ ತರುತ್ತೇನೆ ಎಂದು ಭರವಸೆ ತಂದರು. ಈ ಬಜೆಟ್ ನಲ್ಲಿ ಯೋಜನೆ ಘೋಷಣೆ ಮಾಡಲು ಬಜೆಟ್ ಮೀಸಲಿಡಲು ಸೂಚಿಸಿದರು. ಈ ಯೋಜನೆ ತರಲು ಸಹಕರಿಸಿದ ಮುಖ್ಯಮಂತ್ರಿಗಳಿಗೆ ಹಾಗೂ ಕೆಯುಡಬ್ಲ್ಯುಜೆ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನೂ ಕೂಡ ಬಸ್ಸಿನಲ್ಲಿ ಓಡಾಡಿಕೊಂಡು ವರದಿ ಮಾಡುತ್ತಿದ್ದೆ. ಕೋಲಾರದಲ್ಲಿ ಕೋಲಾರವಾಣಿಯಲ್ಲಿ ಆರಂಭದಲ್ಲಿ ಕೆಲಸ ಮಾಡುತ್ತಿದ್ದಾಗಿನ ದಿನಗಳನ್ನು ನೆನಪಿಸಿಕೊಂಡರು. ಹಿರಿಯ ಪತ್ರಕರ್ತ ಈಶ್ವರ ದೈತೋಟ ಅವರ ಸಹಕಾರವನ್ನು ಮರೆಯಲಾರೆ ಎಂದರು.
ಪತ್ರಿಕೋದ್ಯಮದಲ್ಲಿ ಲಿಫ್ಟ್ ನಲ್ಲಿ ಬಂದಿಲ್ಲ. ಮೆಟ್ಟಿಲು ಹತ್ತಿ ಬಂದವನು. ಪತ್ರಕರ್ತರ ಕಷ್ಟ ನನಗೂ ತಿಳಿದಿದ್ದೇನೆ. ಅರ್ಹ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ವಂಚಿತರಾಗದಂತೆ ನಿಬಂಧನೆ ವಿಧಿಸಿ ಎಲ್ಲಾರಿಗೂ ಯೋಜನೆ ಸಿಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ. ಪತ್ರಕರ್ತರಿಗೆ ವೈದ್ಯಕೀಯ ಸೌಲಭ್ಯ ಒದಗಿಸಲು, ಕಳೆದ ಸರ್ಕಾರ ಪತ್ರಕರ್ತರಿಗೆ ಮೀಸಲಿಟ್ಟ 10 ಕೋಟಿ ರೂ. ಹಣವನ್ನು ನಿಧಿಯಾಗಿಟ್ಟು ಅದರಿಂದ ಬರುವ ಬಡ್ಡಿಯನ್ನು ಪತ್ರಕರ್ತರ ವೈದ್ಯಕೀಯ ಚಿಕಿತ್ಸೆಗೆ ಬಳಸಲು ಚಿಂತನೆ ನಡೆಸಲಾಗುತ್ತಿದೆ. ಪತ್ರಕರ್ತರ ಸಮಸ್ಯೆಗಳನ್ನು ಪರಿಹರಿಸಲು ತಮ್ಮ ಕೈಲಾದ ಪ್ರಯತ್ನ ಮಾಡುತ್ತೇನೆ ಎಂದು ಕೆ.ವಿ.ಪ್ರಭಾಕರ್ ಹೇಳಿದರು.
ರಾಜ್ಯದಲ್ಲಿ ಹೊಸ ಡಿಜಿಟಲ್ ಜಾಹೀರಾತು ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಅಂತಿಮ ರೂಪುರೇಷೆ ಸಿದ್ದವಾಗಿದೆ. ಸದ್ಯದಲ್ಲಿ ರಾಜ್ಯ ಸರ್ಕಾರ ಹೊಸ ನೀತಿ ಜಾರಿಗೆ ತರಲಾಗುತ್ತದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆಯುಡಬ್ಲ್ಯು ಜೆ ವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪಡೆಯಲು ಸಾಧ್ಯವಾಗದ ಹಿನ್ನಲೆಯಲ್ಲಿ ಮಂಗಳವಾರ ಹಿರಿಯ ಪತ್ರಕರ್ತರಾದ ಪುಟ್ಟಲಿಂಗಯ್ಯ ಹಾಗೂ ಉದಯವಾಣಿ ಪತ್ರಿಕೆಯ ವರದಿಗಾರರಾದ ತೃಪ್ತಿ ಕುಂಬ್ರಗೋಡು ಯವರನ್ನು ಅಭಿನಂದಿಸಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಹಿರಿಯ ಪತ್ರಕರ್ತರಾದ ಶೇಷಚಂದ್ರಿಕ, ಈಶ್ವರ ದೈತೋಟ, ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಖಜಾಂಚಿ ವಾಸುದೇವ ಹೊಳ್ಳ, ಕಾರ್ಯದರ್ಶಿ ಮತ್ತೀಕೆರೆ ಜಯರಾಮ್ ಸೇರಿದಂತೆ ಮತ್ತಿತರರು ಹಾಜರಿದ್ದರು.