ಬೆಂಗಳೂರು, ಫೆ.25 www.bengaluruwire.com : ನಗದಲ್ಲಿ ನಿನ್ನೆಯಷ್ಟೇ ಭಾರತೀಯ ವಿಜ್ಞಾನ ಕೇಂದ್ರ (IISC) ಸಾರ್ವಜನಿಕರಿಗಾಗಿ ವಿಜ್ಞಾನದ ಹಲವು ಅವಿಷ್ಕಾರ, ಸಂಶೋಧನೆಗಳು, ಚಟುವಟಿಕೆಗಳ ಬಗ್ಗೆ ತಿಳಿಯಲು ಸಾರ್ವಜನಿಕರಿಗೆ ಮುಕ್ತ ದಿನ ಹಮ್ಮಿಕೊಳ್ಳಲಾಗಿತ್ತು. ಆದರೆ ಇಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಖಗೋಳಶಾಸ್ತ್ರದ ಆಸಕ್ತರಿಗಾಗಿ ಮುಕ್ತ ದಿನ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ರಾಜಧಾನಿ ಸೇರಿದಂತೆ ದೇಶದ ಇತರ ನಗರಗಳ 4000 ಕ್ಕೂ ಹೆಚ್ಚು ಖಗೋಳಶಾಸ್ತ್ರ ಉತ್ಸಾಹಿಗಳು ಪಾಲ್ಗೊಂಡಿದ್ದರು. ಹೆಚ್ಚಿನ ಸಂಖ್ಯೆಯ ಮಕ್ಕಳು ಲೇಸರ್ ಆಪ್ಟಿಕ್ಸ್ ಡಿಸ್ಪ್ಲೇ (Laser Optic Display), ಟೆಲಿಸ್ಕೋಪ್ (Telescope) ಮತ್ತು ಇಸ್ರೋ (ISRO) ಮಾದರಿಗಳು ಮತ್ತು ಸನ್‌ಸ್ಪಾಟ್ ವೀಕ್ಷಣೆಯನ್ನು ಮಾಡಿ ಸಂತೋಷಗೊಂಡರು.
ಖಗೋಳಶಾಸ್ತ್ರ ಹಾಗೂ ಬಾಹ್ಯಾಕಾಶದ ಕುರಿತಂತೆ ತಿಳುವಳಿಕೆ ಮೂಡಿಸಲು ಐಐಎ ವತಿಯಿಂದ ಪೋಸ್ಟರ್‌ಗಳು ಮತ್ತು ಪ್ರಯೋಗಗಳ ಮೂಲಕ ಐಐಎ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅಸಂಖ್ಯಾತ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಸಂದರ್ಶಕರು ರಸಪ್ರಶ್ನೆ ಕಿಯೋಸ್ಕ್‌ನಲ್ಲಿ ಖಗೋಳಶಾಸ್ತ್ರದ ಕುರಿತು ತಮ್ಮ ಜ್ಞಾನವನ್ನು ಪರೀಕ್ಷಿಸಿದರು. ಕಟ್ಟಿಹಾಕಿದ ಹೀಲಿಯಂ ತುಂಬಿದ ಬಿಳಿ ಬಣ್ಣದ ಬಲೂನ್ ಪ್ರದರ್ಶನವೂ ಒಂದು ದೊಡ್ಡ ಆಕರ್ಷಣೆಯಾಗಿತ್ತು.
ಸ್ಟಾಲ್‌ಗಳನ್ನು ಹಾಕಲು ಸಂಸ್ಥೆಯು ಕೆಲವು ಬಾಹ್ಯ ಗುಂಪುಗಳನ್ನು ಆಹ್ವಾನಿಸಿತ್ತು. ಅನೇಕ ಖಗೋಳಶಾಸ್ತ್ರ ಸಂಸ್ಥೆಗಳು ಮತ್ತು ಮಾರಾಟಗಾರರು ಸ್ಟಾಲ್ ಇಟ್ಟಿದ್ದರು. ಬೆಂಗಳೂರು ಆಸ್ಟ್ರೋನಾಮಿಕಲ್ ಸೊಸೈಟಿಯು ತಮ್ಮ ದೂರದರ್ಶಕಗಳ ಮೂಲಕ ಸಾರ್ವಜನಿಕರಿಗೆ ಸೂರ್ಯನನ್ನು ತೋರಿಸಲು ವ್ಯವಸ್ಥೆ ಮಾಡಿತ್ತು. ರವಿಯ ಕುರಿತ ಹಲವು ಅಂಶಗಳ ಮಾಹಿತಿಯನ್ನು ವಿವರಿಸುತ್ತಿದ್ದರು. ಹೀಗಾಗಿ ಈ ಸ್ಥಳದತ್ತ ಜನರು ಉದ್ದವಾದ ಸರತಿ ಸಾಲಿನಲ್ಲಿ ನಿಂತು ಆದಿತ್ಯನನ್ನು ಕಣ್ತುಂಬಿಕೊಂಡರು.
ಎಬಿಎಎ, ಜೆಎನ್‌ಪಿ ಮತ್ತು ಇತರ ಸಂಘಟನೆಗಳೂ ಮುಕ್ತದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು. ಐಐಎ (IIA) ಯ ವಿದ್ಯಾರ್ಥಿ ಇ-ಮ್ಯಾಗಝಿನ್ ದೂತ್ (DOOT), ಅನೇಕ ಖಗೋಳ ವಿಷಯದ ಆಟಗಳು ಮತ್ತು ಪದಬಂಧಗಳನ್ನು ಹೊಂದಿತ್ತು. ಇದು ಕಿರಿಯ ಗುಂಪಿನಲ್ಲಿ ಜನಪ್ರಿಯವಾಗಿತ್ತು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮೂಲವು 1786ರಲ್ಲಿ ಗುರುತಿಸಲ್ಪಡುತ್ತದೆ. ಐಐಎ ನ ಆರ್ಕೈವ್ಸ್ ವಿಭಾಗವು ಭಾರತದಲ್ಲಿ ಖಗೋಳಶಾಸ್ತ್ರದ ಇತಿಹಾಸದ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಪ್ರದರ್ಶಿಸಿತು. ಅನೇಕ ಪ್ರವಾಸಿಗರು ತಮಿಳುನಾಡು ಮತ್ತು ಕೇರಳದಿಂದಲೂ ವಿಶೇಷವಾಗಿ ಮುಕ್ತ ದಿನದ ಅಂಗವಾಗಿ ಬಂದಿದ್ದರು.
“ಇಂದಿನ ದಿನ ಸಾರ್ವಜನಿಕರ ಪ್ರತಿಕ್ರಿಯೆಯಿಂದ ಬಹಳ ಸಂತಸವಾಗಿದೆ. ಖಗೋಳಶಾಸ್ತ್ರವು ಎಲ್ಲಾ ವಯಸ್ಸಿನ ಪ್ರತಿಯೊಬ್ಬರನ್ನು ಆಕರ್ಷಿಸುವ ವಿಷಯವಾಗಿದೆ ಮತ್ತು ನಮ್ಮ ಮುಕ್ತ ದಿನವು ವಿಶ್ವದ ಕುರಿತಂತೆ ಅತಿಹೆಚ್ಚು ಸಾರ್ವಜನಿಕರೊಂದಿಗೆ ವಿಷಯವನ್ನು ಹಂಚಿಕೊಳ್ಳಲು ನಮಗೆ ಉತ್ತಮ ಸಂದರ್ಭವಾಗಿದೆ” ಎಂದು ಐಐಎ ನ ಸಾರ್ವಜನಿಕ ಸಂಪರ್ಕಾಧಿಕಾರಿ ಸಔಟ್ರೀಚ್ ವಿಭಾಗದ ಮುಖ್ಯಸ್ಥ ನಿರುಜ್ ಮೋಹನ್ ರಾಮಾನುಜಮ್ ಹೇಳಿದರು.
“ವಿಜ್ಞಾನವು ಕಲೆ, ಸಾಹಿತ್ಯ ಮತ್ತು ಇತರ ಮಾನವ ಚಟುವಟಿಕೆಗಳ ಜೊತೆಗೆ ಸಾರ್ವಜನಿಕ ವಿಷಯಗಳಿಗೆ ಸೇರಿದೆ ಮತ್ತು ಭವಿಷ್ಯದಲ್ಲಿ ನಾವು ಇದೇ ರೀತಿ ಅನೇಕ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಮುಂದುವರಿಸುತ್ತೇವೆ” ಎಂದು ಅವರು ತಿಳಿಸಿದರು.
“ಖಗೋಳಶಾಸ್ತ್ರವನ್ನು ಸಾರ್ವಜನಿಕರಿಗೆ ಕೊಂಡೊಯ್ಯಲು ಮತ್ತು ನಮ್ಮ ಸಂಸ್ಥೆಯಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ತಿಳಿಸಲು ನಾವು ಸಂತೋಷಪಡುತ್ತೇವೆ. ನಮ್ಮ ಮುಕ್ತ ದಿನವು ಅದಕ್ಕೆ ಅತ್ಯುತ್ತಮ ಮಾರ್ಗವಾಗಿದೆ” ಎಂದು ಸಂಸ್ಥೆಯ ನಿರ್ದೇಶಕಿ ಪ್ರೊ.ಅನ್ನಪೂರ್ಣಿ ಸುಬ್ರಮಣ್ಯಂ ಹೇಳಿದರು.