ಬೆಂಗಳೂರು, ಫೆ.24 www.bengaluruwire.com : ಹೈವೋಲ್ಟೇಜ್ ವಿದ್ಯುತ್ ನಿಂದ ಸಿಡಿಲು ಮಾದರಿ ಬೆಳಕು ಸೃಷ್ಟಿ, ವಿವಿಧ ಜಾತಿಯ ಹೂವು – ಜೇಡಗಳು ಅತ್ಯಾಧುನಿಕ ನ್ಯಾನೋ ತಂತ್ರಜ್ಞಾನದ ಮೆಕ್ರೊಸ್ಕೋಪ್ ನಲ್ಲಿ ಗೋಚರಿಸುವಿಕೆ, ಕಠಿಣ ವಜ್ರದ ರಹಸ್ಯ, ರೋಬೋಟಿಕ್ ಪ್ರಾಣಿ, ಕೃತಕ ಬುದ್ದಿಮತ್ತೆಯಿಂದ ಹಲವು ತಂತ್ರಜ್ಞಾನ ಪ್ರದರ್ಶನ, ವಂಶವಾಹಿನಿ 3ಡಿ ಮಾದರಿ, ಮೆದಳು ಕಾರ್ಯನಿರ್ವಹಣೆಯ ಅಧ್ಯಯನ, ಹವಾಮಾನ ಬದಲಾವಣೆಯಿಂದ ಆಹಾರದ ಮೇಲಾಗುವ ದುಷ್ಪರಿಣಾಮ….!!
ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISC -ಐಐಎಸ್ಸಿ) ಫೆ.24ರಂದು ಮುಕ್ತ ದಿನದಂದು ವಿಜ್ಞಾನ ಹಲವು ಶಾಖೆಗಳಲ್ಲಿ ನಡೆಯುತ್ತಿರುವ ಹೊಸ ಹೊಸ ಅವಿಷ್ಕಾರ, ಪ್ರಯೋಗ, ಸಂಶೋಧನೆಗಳ ಪ್ರದರ್ಶನವನ್ನು ವಿಜ್ಞಾನ ಆಸಕ್ತರು, ವಿದ್ಯಾರ್ಥಿಗಳು ಮತ್ತು ಮಕ್ಕಳಿಗಾಗಿ ರಾಸಾಯನಿಕ ವಿಜ್ಞಾನದ ತಿಳುವಳಿಕೆ ಕುರಿತ ಚಟುವಟಿಕೆಗಳನ್ನು ಸಂಸ್ಥೆಯ ಕ್ಯಾಂಪಸ್ ನಲ್ಲಿ ಏರ್ಪಡಿಸಲಾಗಿತ್ತು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಐಐಎಸ್ಸಿ ಕ್ಯಾಂಪಸ್ ಪ್ರವೇಶಿಸಿ ಮುಕ್ತ ದಿನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದರಿಂದ ಲಕ್ಷಾಂತರ ಜನರು ಐಐಎಸ್ಸಿನಲ್ಲಿ ನಡೆಯುತ್ತಿರುವ ಈ ಮೇಲ್ಕಂಡ ನೂರಾರು ವೈಜ್ಞಾನಿಕ ಕೌತುಕಗಳನ್ನು ಕಣ್ತುಂಬಿಕೊಂಡರು.
ಸಂಸ್ಥೆಯಲ್ಲಿರುವ 35ಕ್ಕೂ ಹೆಚ್ಚು ವಿಭಾಗಗಳಲ್ಲಿ ನಡೆಯುತ್ತಿರುವ ಚಟುವಟಿಕೆ, ಆವಿಷ್ಕಾರ ಹಾಗೂ ಇತರೆ ಮಾಹಿತಿ ಮುಕ್ತ ದಿನದಲ್ಲಿ ಲಭ್ಯವಾಯಿತು. ವಿಜ್ಞಾನ ಪ್ರಯೋಗಗಳು, ವಿಜ್ಞಾನದ ಪಾಠಗಳು, ವೈಜ್ಞಾನಿಕ ಪ್ರಾತ್ಯಕ್ಷಿಕೆಗಳು ಹಾಗೂ ವಿಜ್ಞಾನ ಮಾದರಿಗಳ ಪ್ರದರ್ಶನವೂ ಮುಕ್ತ ದಿನದಲ್ಲಿ ಕಂಡು ಬಂದಿತ್ತು. ಎಲೆಕ್ಟ್ರಿಕಲ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದಲ್ಲಿ ಗಣಿತ ಮತ್ತು ಸಂಭವನೀಯತೆ ಸಿದ್ದಾಂತ ಆಧಾರಿತ ಪಜಲ್ ಮತ್ತು ಆಟಗಳು, ಕೃತಕ ಬುದ್ದಿಮತ್ತೆ ಆಧಾರಿತವಾಗಿ ಉಪನ್ಯಾಸ ವಿಷಯಗಳನ್ನು ಬಳಸಿಕೊಂಡು ಉಪನ್ಯಾಸ ವಿಡಿಯೋ ರಚನೆ, ಮೊಬೈಲ್ ಉಪಕರಣದಿಂದ 5ಜಿ ತಂತ್ರಜ್ಞಾನ ಬಳಕೆ ಪ್ರಾತ್ಯಕ್ಷಿಕೆಯು ವಿಜ್ಞಾನ ಆಸಕ್ತರನ್ನು ತನ್ನತ್ತ ಸೆಳೆಯಿತು.
ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಬಹು ವಿಧದ ರೋಬೋಟ್ ಸಂಯೋಜನೆಯ ಮೂಲಕ ನಗರದ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸುವ ಮಾದರಿಯನ್ನು ತೋರಿಸಲಾಯಿತು. ಅದೇ ರೀತಿ ಹೈವೋಲ್ಟೇಜ್ ವಿದ್ಯುತ್ ಅನ್ನು ಒಂದೇ ಬಾರಿಗೆ ಹರಿಸುವ ಮೂಲಕ ನಿರೋಧಕ ಗಾಜಿನ ಮೇಲ್ಮೈಗಳಲ್ಲಿ ವಿದ್ಯುತ್ ನೃತ್ಯ ಮಾಡುವ, 3 ದಶಲಕ್ಷ ವೋಲ್ಟೇಜ್ ವಿದ್ಯುತ್ ಹರಿಸಿ ಮೋಡಗಳ ಮರೆಯಲ್ಲಿ ವಿಮಾನವನ್ನು ಸಂಚರಿಸುವಾಗ ಸಿಡಿಲು ಬಡಿಯುವ ಪರಿಕಲ್ಪನೆಯ ತದ್ರೂಪು ಮಾದರಿಯನ್ನು ಸೃಷ್ಟಿಸಲಾಗಿತ್ತು. ಇದು ವಿದ್ಯಾರ್ಥಿಗಳು, ವಿಜ್ಞಾನ ಆಸಕ್ತರನ್ನು ಬಹುವಾಗಿ ಸೆಳೆಯಿತು.
ವಜ್ರಗಳನ್ನು ಹೇಗೆ ಬೆಳಯಬಹುದು? :
ಐಐಎಸ್ಸಿ ವಿಜ್ಞಾನ ಕೇಂದ್ರದಲ್ಲಿ ನ್ಯಾನೋ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರ (Center For Nano science And Engineering) ನಲ್ಲಿ ಪರಮಾಣುಗಳನ್ನು ನೋಡುವ ಬಗ್ಗೆ ಹೇಗೆ? ಈ ಪರಮಾಣುಗಳನ್ನು ಹೇಗೆ ಮುಟ್ಟಬಹುದು? ವಜ್ರಗಳನ್ನು ಹೇಗೆ ಬೆಳೆಯಬಹುದು? ನಮ್ಮ ಮೆದುಳಿನ ಕಾರ್ಯನಿರ್ವಹಣೆಯನ್ನು ಹೇಗೆ ಅನ್ವೇಷಿಸುವುದು? ಎಂಬುದರ ಕುರಿತಾಗಿ ಹಲವು ಪ್ರಾತ್ಯಕ್ಷಿಕೆಗಳನ್ನು ಐಐಎಸ್ಸಿಯ ವಿದ್ಯಾರ್ಥಿಗಳು, ವಿಜ್ಞಾನಿಗಳು ಸಾರ್ವಜನಿಕರಿಗೆ ತಿಳಿಸಿದರು. ಇದೇ ಕೇಂದ್ರದಲ್ಲಿ ಹಿಮ ಪ್ರದೇಶಗಳಲ್ಲಿ ಗಡಿಯಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗೆ ಉಷ್ಣಾಂಶ ಕಾಯ್ದುಕೊಳ್ಳಲು ನ್ಯಾನೋ ತಂತ್ರಜ್ಞಾನ ಆಧಾರಿತ ಉಡುಪುಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಜೊತೆಗೂಡಿ ಅಭಿವೃದ್ಧಿಪಡಿಸುತ್ತಿರುವ ಅಂಶವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಗುತ್ತಿತ್ತು.
ಇನ್ನು ನರವಿಜ್ಞಾನ ಕೇಂದ್ರ (Centre For Neurosciences –CNS) ದ ವಿಭಾಗದಲ್ಲಿ ಅರಿವು, ಅಣ್ವಿಕ, ಕೋಶಗಳು ಮತ್ತಿತರ ವಿಧಾನಗಳಿಂದ ಮೆದುಳಿನ ಕಾರ್ಯವಿಧಾನವನ್ನು ಅಧ್ಯಯನ ಮಾಡುವ, ಇಲಿ, ಮಂಗ ಹಾಗೂ ಮನುಷ್ಯನ ಮೆದಳುಗಳ ಅಂಗರಚನೆ, ಪ್ರಯತ್ನಗಳ ಮೂಲಕ ಮೆದುಳು ಹೊಸತನ್ನು ಕಲಿಯುವ ವಿಧಾನ ಹೀಗೆ ನರವಿಜ್ಞಾನ ಕ್ಷೇತ್ರದಲ್ಲಿನ ಹೊಸ ವೈಜ್ಞಾನಿಕ ಪ್ರಯತ್ನ, ಅವಿಷ್ಕಾರಗಳನ್ನು ಸಾಮಾನ್ಯ ಜನರಿಗೆ ಪ್ರಾತ್ಯಕ್ಷಿಕೆ, ಪ್ರದರ್ಶನದ ಮೂಲಕ ತೋರಿಸಿ ಕೊಡಲಾಯಿತು.
ಐಐಎಸ್ಸಿ ಸುತ್ತಮುತ್ತ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಅಲ್ಲಿನ 35ಕ್ಕೂ ಹೆಚ್ಚು ವಿಭಾಗಗಳಿಗೆ ಭೇಟಿ ನೀಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಿದ್ದ ಕಾರಣ ಲಕ್ಷಾಂತರ ವಿಜ್ಞಾನ ಆಸಕ್ತರು ತಮ್ಮ ವಾಹನಗಳನ್ನು ಮಹಾರಾಣಿ ಅಮ್ಮಣಿ ಕಾಲೇಜು ಎದುರಿನ ಮೈದಾನ ಹಾಗೂ ಐಐಎಸ್ಸಿ ಜಮ್‌ಖಾನ್ ಮೈದಾನದಲ್ಲಿ ನಿಲ್ಲಿಸಿ ಬರುತ್ತಿದ್ದರು. ಇನ್ನು ಹಲವರು ಬಸ್ಸು, ಮೆಟ್ರೋ, ಆಟೋಗಳಂತಹ ಸಾರ್ವಜನಿಕ ಸಾರಿಗೆಗಳನ್ನು ಬಳಸಿ ಬಂದಿದ್ದರು.
ಹೀಗಾಗಿ ಬೆಳಗ್ಗೆಯಿಂದ ಸಂಜೆಯವರೆಗೂ ಸರ್ ಸಿ.ವಿ.ರಾಮನ್ ರಸ್ತೆ (ಮೇಖ್ರಿ ವೃತ್ತದಿಂದ ಬಿಎಚ್‌ಇಎಲ್ ವೃತ್ತ), ನ್ಯೂ ಬಿಇಎಲ್ ರಸ್ತೆ (ಸದಾಶಿವನಗರ ಪಿ.ಎಸ್. ಜಂಕ್ಷನ್‌ನಿಂದ ರೈಲ್ವೆ ಸೇತುವೆ), ಟಿ. ಚೌಡಯ್ಯ ರಸ್ತೆ (ಸಿ.ಎನ್.ಆರ್.ರಾವ್ ಕೆಳಸೇತುವೆಯಿಂದ ಕಾವೇರಿ ಜಂಕ್ಷನ್) ಹಾಗೂ ಮಾರ್ಗೋಸಾ ರಸ್ತೆ (ಮಾರಮ್ಮ ದೇವಸ್ಥಾನ ವೃತ್ತದಿಂದ ಮಲ್ಲೇಶ್ವರ 18ನೇ ಕ್ರಾಸ್‌ವರೆಗೆ)ಯಲ್ಲಿ ಕಾರು, ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಗಿತ್ತು. ಹೀಗಾಗಿ ಸರಾಗ ವಾಹನ ಚಾಲನೆಗೆ ವ್ಯವಸ್ಥೆ ಕಲ್ಪಿಸಲು ಸಂಚಾರಿ ಪೊಲೀಸರು ಹರಸಾಹಸಪಟ್ಟರು. ವಾಹನ ನಿಲುಗಡೆ ಈ ಮೇಲಿನ ಸ್ಥಳಗಳಲ್ಲಿ ನಿರ್ಬಂಧಿಸಲಾಗಿತ್ತು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.