ಬೆಂಗಳೂರು, ಫೆ.23 www.bengaluruwire.com : ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ 12 ಗ್ರಾಮಗಳಲ್ಲಿ ಸುಮಾರು 4,043 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಈ ಮೂಲಕ ಹಲವು ವರ್ಷಗಳಿಂದ ಭೂಸ್ವಾಧೀನವಾಗದೆ ಅಭಿವೃದ್ಧಿ ಕೆಲಸ ಕುಂಠಿತವಾಗಿ ತೊಂದರೆಗೊಳಗಾಗಿದ್ದ ಬಡಾವಣೆ ನಿವೇಶನದಾರರಿಗೆ ಬಿಗ್ ರಿಲೀಫ್ ಆದಂತಾಗಿದೆ.
ಈ ಕುರಿತಂತೆ ಬಿಡಿಎ ಮತ್ತು 140ಕ್ಕೂ ಹೆಚ್ಚು ಪ್ರತ್ಯೇಕ ಅರ್ಜಿದಾರರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದೆ. ಆ ಮೂಲಕ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ಭೂಸ್ವಾಧೀನಕ್ಕೆ ಹೊರಡಿಸಿದ್ದ ಪ್ರಾಥಮಿಕ ಮತ್ತು ಅಂತಿಮ ಅಧೀಸೂಚನೆಯನ್ನು ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ 2014ರ ಜುಲೈ 11ರಂದು ಹೊರಡಿಸಿದ್ದ ತೀರ್ಪನ್ನು ಈಗಿನ ದ್ವಿಸದಸ್ಯ ಪೀಠ ರದ್ದುಪಡಿಸಿದೆ.
‘ಅಧಿಸೂಚನೆಯಲ್ಲಿ ಸ್ವಾಧೀನಕ್ಕೆ ಗುರುತಿಸಲಾಗಿದ್ದ ಜಾಗದಲ್ಲಿ ನರ್ಸರಿ ಅಭಿವೃದ್ಧಿಯಾಗಿರುವುದು ಹಾಗೂ ಕಟ್ಟಡ ನಿರ್ಮಾಣವಾಗಿರುವುದೂ ಸೇರಿದಂತೆ ಇತರೆ ಕಾರಣಗಳಿಂದ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಬೇಕು ಎಂಬ ಬಗ್ಗೆ ಯಾರದಾದರೂ ಮನವಿಗಳಿದ್ದರೆ, ಅಂತಹ ಭೂ ಮಾಲೀಕರು ಮೂರು ತಿಂಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬೇಕು. ಅಂತಹ ಮನವಿಗಳನ್ನು ಕಾನೂನು ಪ್ರಕಾರ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸಬೇಕು’ ಎಂದು ನ್ಯಾಯಪೀಠ ಬಿಡಿಎಗೆ ಆದೇಶಿಸಿದೆ.
‘ಸರ್ಕಾರದಿಂದ ಪೂರ್ವಾನುಮತಿ ಪಡೆಯದೇ ಇರುವುದೂ ಒಳಗೊಂಡಂತೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಿಯಮಗಳ ಪಾಲನೆ ಮಾಡಿಲ್ಲ. ಭೂಸ್ವಾಧೀನದಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ಹಾಗಾಗಿ, ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ನಡೆಸಿರುವ ಭೂ ಸ್ವಾಧೀನ ಪ್ರಕ್ರಿಯೆ ಕಾನೂನು ಬಾಹಿರವಾಗಿದೆ’ ಎಂದು ಹಿಂದಿನ ಏಕಸದಸ್ಯ ಪೀಠ ತೀರ್ಪು ನೀಡಿತ್ತು. ಆದರೀಗ ವಿಭಾಗೀಯ ಪೀಠ ವಿಚಾರಣೆ ನಡೆಸಿ ಬಿಡಿಎ ಭೂಸ್ವಾಧೀನಕ್ಕಾಗಿ ಹೊರಡಿಸಿದ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆಯನ್ನು ಎತ್ತಿ ಹಿಡಿದಿದೆ.
ಬಿಡಿಎ ಪರವಾಗಿ ಹಿರಿಯ ವಕೀಲ ಗುರುದಾಸ್ ಕಣ್ಣೂರು, ಜಿ.ಲಕ್ಷ್ಮೀಶ ರಾವ್, ಗೌತಮ ಉಲ್ಲಾಳ್, ಬಿ.ವಚನ್, ಮುರುಗೇಶ್ ವಿ.ಚರಾಟ, ಕೆ.ಕೃಷ್ಣ ಮತ್ತು ಅಜಯಕುಮಾರ್ ಅವರ ತಂಡ ವಾದ ಮಂಡಿಸಿತ್ತು.