ಬೆಂಗಳೂರು, ಫೆ.19 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ 2024-25ನೇ ಸಾಲಿನ ವ್ಯಾಪಾರ ಒರವಾನಗಿ (Trade License) ನವೀಕರಣ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಯಾವುದೇ ದಂಡವಿಲ್ಲದೆ ಪರವಾನಗಿ ಶುಲ್ಕ ಪಾವತಿಸಲು ಇದೇ ಫೆ.29ಮೇ ತಾರೀಖು ಕೊನೆಯ ದಿನವಾಗಿದೆ.
ನಗರದಲ್ಲಿ ವ್ಯಾಪಾರ ಮಾಡುವ ಮಾಲೀಕರ ಅನುಕೂಲಕ್ಕಾಗಿ, ಬಿಬಿಎಂಪಿಯು ಒಂದರಿಂದ ಐದು ವರ್ಷಗಳ ಅವಧಿಗೆ (ಪ್ರತಿವರ್ಷದ ಏಪ್ರಿಲ್ ನಿಂದ ಮಾರ್ಚ್ ತನಕದಂತೆ) ವ್ಯಾಪಾರ ಪರವಾನಗಿಯನ್ನು ನವೀಕರಿಸಲು ಆಯ್ಕೆಯನ್ನು ನೀಡಿದೆ. ನವೀಕರಣ ಶುಲ್ಕವು ವ್ಯಾಪಾರಿಗಳು ಆಯ್ಕೆ ಮಾಡಿದ ಆರ್ಥಿಕ ವರ್ಷಗಳ ಸಂಖ್ಯೆಗೆ ತಕ್ಕಂತೆ ಇರುತ್ತದೆ. ನವೀಕರಣ ಪರವಾನಗಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಅಥವಾ ಕೆನರಾ ಬ್ಯಾಂಕ್‌ನಲ್ಲಿ ಬ್ಯಾಂಕ್ ಚಲನ್ ಮೂಲಕ ಪಾವತಿಸಬಹುದು.
ಮಾ.1 ರಿಂದ 31ರ ವರೆಗೆ ಪರವಾನಗಿ ನವೀಕರಣ ಶುಲ್ಕವನ್ನು ಶೇ.25ರ ದಂಡದೊಂದಿಗೆ ಬಿಬಿಎಂಪಿಯು ಸ್ವೀಕರಿಸಲಿದೆ. ಒಂದೊಮ್ಮೆ ಏ.1ರಿಂದ ಪರವಾನಗಿ ಶುಲ್ಕ ನವೀಕರಣ ಮಾಡಲು ಮುಂದಾದರೆ ಶೇ.100ರಷ್ಟು ದಂಡ ಕಟ್ಟಬೇಕು. ಈ ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪಾಲಿಕೆಯ ವೆಬ್ ಸೈಟ್ www.bbmp.gov.in ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಮಾಡಲಾಗುತ್ತದೆ ಎಂದು ಬಿಬಿಎಂಪಿಯು ಸಾರ್ವಜನಿಕ ಅಧಿಸೂಚನೆಯಲ್ಲಿ ತಿಳಿಸಿದೆ.
ಬಿಬಿಎಂಪಿಯ ಎಂಟು ವಲಯಗಳಲ್ಲಿ ಇದೇ ತಿಂಗಳ ಫೆ.1 ರಿಂದ 17ನೇ ತಾರೀಖಿನ ಅವಧಿಯೊಳಗೆ 2024-25ನೇ ಸಾಲಿಗಾಗಿ 10,408 ಅಂಗಡಿಗಳು ವ್ಯಾಪಾರ ಪರವಾನಗಿ ನವೀಕರಣ ಮಾಡಿಕೊಂಡಿದ್ದು ಪಾಲಿಕೆಗೆ 12.04 ಕೋಟಿ ರೂ. ಶುಲ್ಕ ರೂಪದಲ್ಲಿ ಸಂಗ್ರಹವಾಗಿದೆ.
2023ರ ಫೆ.1ರಿಂದ 2024ರ ಫೆ.17ರ ತನಕ ಹೊಸದಾಗಿ ಒಟ್ಟು 13,060 ವ್ಯಾಪಾರ ಪರವಾನಗಿ ನೀಡಲಾಗಿದ್ದು, ಇದರಿಂದ ಪಾಲಿಕೆಗೆ 11.23 ಕೋಟಿ ರೂ. ಶುಲ್ಕ ಸಂಗ್ರಹವಾಗಿದೆ. ಇನ್ನು ಈ ಅವಧಿಯಲ್ಲಿ 31,881 ಟ್ರೇಡ್ ಲೈಸೆನ್ಸ್ ನವೀಕರಣವಾಗಿದ್ದು ಒಟ್ಟಾರೆ 40.08 ಕೋಟಿ ರೂ. ಶುಲ್ಕ ಸಂಗ್ರಹವಾಗಿದೆ.