ಬೆಂಗಳೂರು, ಫೆ.16 www.bengaluruwire.com : ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆದ ಸಿದ್ದರಾಮಯ್ಯ ಶುಕ್ರವಾರ ವಿಧಾನಸೌಧದಲ್ಲಿ 15ನೇ ಬಾರಿಗೆ 2024-25ನೇ ಸಾಲಿನ ಆಯವ್ಯಯ ಮಂಡಿಸಿ ಹೊಸ ದಾಖಲೆ ಬರೆದರು. ಬೆಳಗ್ಗೆ 10.15ಕ್ಕೆ ಬಜೆಟ್ ಭಾಷಣ ಓದಲು ಆರಂಭಿಸಿದ ಅವರು, ಈ ಸಾಲಿನಲ್ಲಿ ಒಟ್ಟು 3,71,383 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದರು.
ಕಾಂಗ್ರೆಸ್ ನೇತೃತ್ವದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳಿಗೆ 2024-25ನೇ ಸಾಲಿನ ಬಜೆಟ್ ನಲ್ಲಿ ಒಟ್ಟಾರೆಯಾಗಿ 52,000 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
2024-25ನೇ ಸಾಲಿನಲ್ಲಿ ಒಟ್ಟು 2,63,178 ಕೋಟಿ ರೂ. ಜಮೆಯನ್ನು ಅಂದಾಜು ಮಾಡಲಾಗಿದೆ. ಇದರಲ್ಲಿ ರಾಜ್ಯದ ಸ್ವಂತ ತೆರಿಗೆಯಿಂದ 1,89,893 ಕೋಟಿ ರೂ.ಗಳ ಸಂಗ್ರಹಣೆಯನ್ನು ನಿರೀಕ್ಷಿಸಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 13,500 ಕೋಟಿ ರೂ.ಗಳು ಸಂಗ್ರಹಿಸಬಹುದೆಂದು ನಿರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರದಿಂದ 44,485 ಕೋಟಿ ರೂ.ಗಳ ತೆರಿಗೆ ಪಾಲು ಹಾಗೂ 15,300 ಕೋಟಿ ರೂ.ಗಳ ಸಹಾಯಾನುದಾನ ಸ್ವೀಕೃತಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್ ನಲ್ಲಿ ತಿಳಿಸಿದ್ದಾರೆ. ಈ ರಾಜಸ್ವ ಜಮೆಗಳಿಗೆ ಪೂರಕವಾಗಿ 1,05,246 ಕೋಟಿ ರೂಗಳ ಸಾಲ, 38 ಕೋಟಿ ರೂ.ಗಳ ಋಣೇತರ ಸ್ವೀಕೃತಿ ಮತ್ತು 213 ಕೋಟಿ ರೂ.ಗಳ ಸಾಲ ವಸೂಲು ಮೊತ್ತವನ್ನು ಅಂದಾಜಿಸಲಾಗಿದೆ. 2024-25ರ ಆಯವ್ಯಯದಲ್ಲಿ ಒಟ್ಟು 3,68,674 ಕೋಟಿ ರೂ.ಗಳ ಸ್ವೀಕೃತಿಯನ್ನು ಅಂದಾಜು ಮಾಡಲಾಗಿದೆ.
2024-25ನೇ ಸಾಲಿನಲ್ಲಿ ಒಟ್ಟು 2,90.531 ಕೋಟಿ ರೂ.ಗಳ ರಾಜಸ್ವ ವೆಚ್ಚ, 55,877 ಕೋಟಿ ರೂ.ಗಳ ಬಂಡವಾಳ ವೆಚ್ಚ ಹಾಗೂ ಸಾಲದ ಮರುಪಾವತಿ 24,974 ಕೋಟಿ ರೂ.ಗಳ ವೆಚ್ಚವನ್ನು ಒಳಗೊಂಡು, ಒಟ್ಟು ವೆಚ್ಚವು 3,71,383 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ.
2024-25ನೇ ಸಾಲಿನಲ್ಲಿ ರಾಜಸ್ವ ಕೊರತೆ 27,354 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದೆ. ವಿತ್ತೀಯ ಕೊರತೆ 82,981 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದ್ದು, ರಾಜ್ಯದ ಜಿ.ಎಸ್.ಡಿ.ಪಿಯ ಶೇ.2.95ರಷ್ಟಿದೆ. ರಾಜ್ಯದ ಒಟ್ಟು ಹೊಣೆಗಾರಿಕೆಯು 2024-25ರ ಅಂತ್ಯಕ್ಕೆ 6,65,095 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದ್ದು, ಜೆಎಸ್ ಡಿಪಿಯ ಶೇ.23.680 ತಲುಪಲಿದೆ ಎಂದು ಅಂದಾಜಿಸಲಾಗಿದೆ. 2024-25ರಲ್ಲಿ ರಾಜ್ಯದ ವಿತ್ತೀಯ ಕೊರತೆ ಹಾಗು ಒಟ್ಟು ಹೊಣೆಗಾರಿಕೆಯನ್ನು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002ರಲ್ಲಿ ನಿಗದಿಪಡಿಸಿರುವ ಮಿತಿಯೊಳಗೆ ಅಂದಾಜು ಮಾಡುವ ಮೂಲಕ ವಿತ್ತೀಯ ಶಿಸ್ತನ್ನು ಪಾಲನೆ ಮಾಡಲಾಗಿರುತ್ತದೆ.