ಬೆಂಗಳೂರು, ಫೆ.12 www.bengaluruwire.com : ಇದೇ ಪ್ರಥಮ ಬಾರಿಗೆ ರಾಜ್ಯದ ಶಕ್ತಿಸೌಧವಾದ ವಿಧಾನಸೌಧ ಹಾಗೂ ವಿಕಾಸೌಧದ ಒಳಗೆ ಮತ್ತು ಹೊರಗೆ 5ಜಿ ನೆಟ್ ವರ್ಕ್ ಮೊಬೈಲ್ ಸಿಗ್ನಲ್ ವೃದ್ಧಿಸುವ ಆಂಟೆನಾಗಳನ್ನು ಖಾಸಗಿ ಕಂಪನಿಯೊಂದು ಉಚಿತವಾಗಿ ಅಳವಡಿಸಿದೆ. ಈ 5ಜಿ ನೆಟ್ ವರ್ಕ್ ಸೇವೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಚಾಲನೆ ನೀಡಿದರು.
ಈವರೆಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ನೆಟ್‌ವರ್ಕ ಸಮಸ್ಯೆಯಿಂದ ಸರಿಯಾಗಿ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ತೊಂದರೆಯಾಗಿತ್ತು. ಇದನ್ನು ಮನಗಂಡ ವಾಲ್ಗೊ ಟೆಲಿಕಾಂ ಇನ್ ಫ್ರಾ (Walgo Telecom Infra) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ರಾವ್ ಅವರು ತಮ್ಮ ಕಂಪನಿಯ ಸಾಮಾಜಿಕ ಜವಾಬ್ದಾರಿ ನಿಧಿ (Corporate Social Responsibility)ಯಡಿ ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ಇಡೀ ವಿಧಾನಸೌಧ, ವಿಕಾಸಸೌಧದ ಒಳಗೂ, ಹೊರಗೂ 5ಜಿ ತಂತ್ರಜ್ಞಾನ ಸಿಗ್ನಲ್, ದತ್ತಾಂಶವು ಬಳಕೆದಾರರಿಗೆ ಕನಿಷ್ಠ ಶುಲ್ಕದಲ್ಲಿ ಸಿಗುವಂತೆ ಕ್ರಮ ಕೈಗೊಂಡಿದ್ದಾರೆ. ಈ 5ಜಿ ಸಿಗ್ನಲ್ ವೃದ್ಧಿಸಲು ಒಳಾಂಗಣದ ಒಳಗೂ- ಹೊರಗೂ ಅಗತ್ಯ ಕೇಬಲ್ ಹಾಗೂ ಉಪಕರಣಗಳನ್ನು ಅಳವಡಿಸಿದ್ದಾರೆ.
“ವಿಧಾನಸೌಧ, ವಿಕಾಸ ಸೌಧವು ರಾಜ್ಯದ ಆಡಳಿತದ ಕೇಂದ್ರಬಿಂದು. ಇಲ್ಲಿ 5ಜಿ ತಂತ್ರಜ್ಞಾನದ ಸೌಕರ್ಯ ದಿನದ 24ಗಂಟೆಗಳ ಕಾಲವೂ ಇದ್ದರೆ, ಪರೋಕ್ಷವಾಗಿ ಇದರ ಅನುಕೂಲ ಸಾರ್ವಜನಿಕರ ಸೌಕರ್ಯ ಕಲ್ಪಿಸಲು ಅನುವಾಗುತ್ತದೆ. ಹೀಗಾಗಿ ಸಂಸ್ಥೆವತಿಯಿಂದ ಸಿಗ್ನಲ್ ಬೂಸ್ಟರ್ ಆಂಟೆನಾ ಹಾಗೂ 5ಜಿ ನೆಟ್ ವರ್ಕ್ ಕಲ್ಪಿಸಲಾಗಿದೆ. ಈ ಸೌಕರ್ಯ ನಿರ್ವಹಣೆಗೆ ತಿಂಗಳಿಗೆ 10 ರಿಂದ 15 ಲಕ್ಷ ವೆಚ್ಚವಾಗಲಿದ್ದು, ವಾಲ್ಗೊ ಇನ್ ಫ್ರಾ ಸಂಸ್ಥೆಯೇ ಅದನ್ನು ಭರಿಸಲಿದೆ” ಎಂದು ಹೇಳುತ್ತಾರೆ ಸಂಸ್ಥೆಯ ಎಂಡಿ ಶ್ರೀಧರ್ ರಾವ್.
5ಜಿ ನೆಟ್ ವರ್ಕ್ ಸೇವೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಮತ್ತಿತರ ಹಿರಿಯ ನಾಯಕರು ಉಪಸ್ಥಿತರಿದ್ದರು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.