ಬೆಂಗಳೂರು ಫೆ.11 www.bengaluruwire.com : ನಗರದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಪ್ರೆಸ್ಟೀಜ್ ಲೇಕ್ ಸೈಡ್ ಹೆಬಿಟಾಟ್ ಅಪಾರ್ಟ್ ಮೆಂಟ್ ಈಜುಕೊಳದಲ್ಲಿ ಆಟವಾಡುತ್ತಿದ್ದಾಗ ಬಾಲಕಿಯೊಬ್ಬಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿರುವ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಈ ಆರೂಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಾಲಕಿ ಸಾವು ಪ್ರಕರಣ ಸಂಬಂಧ ಪ್ರೆಸ್ಟೀಜ್ ಹೋಮ್ ಓನರ್ ಅಸೋಸಿಯೇಷನ್ ಅಧ್ಯಕ್ಷ ದಬಾಶಿಶ್ ಸಿನ್ಹಾ, ಸಿಬ್ಬಂದಿಯಾದ ಜಾವೇದ್ ಸಫೀಕ್, ಸಂತೋಷ್ ಮಹಾರಾಣಾ, ಬಿಕಾಸ್, ಭಕ್ತ ಚರಣ್ ಪ್ರಧಾನ್, ಸುರೇಶ್, ಗೋವಿಂದ್ ಮಂಡಲ್ ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ.
ಪ್ರಸ್ಟೀಜ್ ಲೇಕ್ ಸೈಡ್ ಹೆಬಿಟೇಟ್ ನಿವಾಸಿ ರಾಜೇಶ್ ಕುಮಾರ್ ಧಮೆರ್ಲಾ ಅವರ ಪುತ್ರಿ 9 ವರ್ಷದ ಮಾನ್ಯ ಎಂಬ ಬಾಲಕಿ ಡಿ.28 ರಂದು ಅಪಾರ್ಟ್ ಮೆಂಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಳು. “ಈ ಸ್ವಿಮಿಂಗ್ ಪೂಲ್ ನಲ್ಲಿ ವಿದ್ಯುತ್ ಹರಿಯುತ್ತಿರುವ ಬಗ್ಗೆ ಅಪಾರ್ಟ್ ಮೆಂಟ್‌ನ ನಿರ್ವಹಣೆ ಮಾಡುತ್ತಿರುವವರಿಗೆ ಹಾಗೂ ಅಲ್ಲಿ ಕೆಲಸಮಾಡುವ ಎಲೆಕ್ಟ್ರಿಷಿಯನ್ ಗಳಿಗೆ ತಿಳಿದಿದ್ದು, ಆದರೂ ಅವರು ಯಾವುದೇ ರೀತಿಯ ಸುರಕ್ಷತೆಯ ಕ್ರಮ ಕೈಗೊಂಡಿರುವುದಿಲ್ಲ. ಇದರಿಂದ ತಮ್ಮ ಮಗು ಮೃತಪಟ್ಟಿರುತ್ತಾಳೆ. ಆದ್ದರಿಂದ ನನ್ನ ಮಗಳ ಸಾವಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು.” ಎಂದು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ಕೈಗೊಂಡ ವರ್ತೂರು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 7 ವ್ಯಕ್ತಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಹಾಗೂ ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ರೀತಿಯ ಘಟನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಹೆದರದೆ ಧೈರ್ಯವಾಗಿ ಡಿ.ಸಿ.ಪಿ. ವೈಟ್ ಫೀಲ್ಡ್ ವಿಭಾಗ ಮೊಬೈಲ್ ನಂ. 9480801084, ಎ.ಸಿ.ಪಿ. ಮಾರತ್ತಹಳ್ಳಿ ಉಪ ವಿಭಾಗ ಮೊಬೈಲ್ ನಂ. 9480801607 ಅಥವಾ ವರ್ತೂರು ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಅವರ ಮೊಬೈಲ್ ಸಂಖ್ಯೆ : 9480801618 ಕ್ಕೆ ನೇರವಾಗಿ ಸಂಪರ್ಕಿಸಿ ನಿರ್ಭೀತಿಯಿಂದ ದೂರು ನೀಡಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪೊಲೀಸರು ತಿಳಿಸಿದ್ದಾರೆ.