ಬೆಂಗಳೂರು, ಫೆ.10 www.bengaluruwire.com : ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿ ಆರೈಕೆ ಮಾಡಿ ಅಂದ್ರೆ ಆ ವೈದ್ಯ ಇತ್ತೀಚೆಗೆ ಟ್ರೆಂಡ್ ಅಂತ ಪ್ರೀ ವೆಡ್ಡಿಂಗ್ ಶೂಟಿಂಗ್ ಗೆ ತಾನು ಕೆಲಸ ಮಾಡ್ತಿರೋ ಸರ್ಕಾರಿ ಆಸ್ಪತ್ರೆಯನ್ನೆ ಬಳಸಿಕೊಂಡ ಗುತ್ತಿಗೆ ಆಧಾರದ ಸರ್ಕಾರಿ ವೈದ್ಯ ಈಗ ಕೆಲಸ ಕಳೆದುಕೊಂಡಿದ್ದಾನೆ.
ಚಿತ್ರದುರ್ಗದ ಭರಮಸಾಗರ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ಪ್ರಿ ವೆಡ್ಡಿಂಗ್ ಶೋಟ್ ನಡೆಸಿದ ಡಾ.ಅಭಿಷೇಕ್.ಡಿ.ಆರ್ ಎಂಬ ವೈದ್ಯರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸೇವೆಯಿಂದ ವಜಾಗೊಳಿಸಿದೆ. ಈ ಕುರಿತಂತೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಆ ವೈದ್ಯರನ್ನು ಸೇವೆಯಿಂದ ವಜಾಗೊಳಿಸಿದ ಅಧಿಕೃತ ಜ್ಞಾಪನಾಪತ್ರವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಂಚಿಲೊಂಡಿದ್ದಾರೆ.
“ಸರ್ಕಾರಿ ಆಸ್ಪತ್ರೆಗಳಿರುವುದು ಜನರ ಆರೋಗ್ಯ ಸೇವೆಗೆ ಹೊರತು ವೈಯಕ್ತಿಕ ಕೆಲಸಗಳಿಗಲ್ಲ. ವೈದ್ಯರಿಂದ ಇಂತಹ ಅಶಿಸ್ತುಗಳನ್ನ ನಾನು ಸಹಿಸುವುದಿಲ್ಲ. ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಗುತ್ತಿಗೆ ನೌಕರರು ಸೇರಿದಂತೆ ವೈದ್ಯರು, ಸಿಬ್ಬಂದಿ ವರ್ಗದವರು ಸರ್ಕಾರಿ ಸೇವಾ ನಿಯಮಾವಳಿಗಳ ಅನ್ವಯ ಕರ್ತವ್ಯ ನಿರ್ವಹಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೀತಿಯ ದುರುಪಯೋಗಳು ಆಗದಂತೆ ಎಚ್ಚರಿಕೆ ವಹಿಸಲು ಸಂಬಂಧಪಟ್ಟ ವೈದ್ಯರು ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ಈಗಾಗಲೇ ಸೂಚಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಿಗೆ ಸರ್ಕಾರ ಒದಗಿಸಿರುವ ಸೌಕರ್ಯಗಳು ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಎಂಬುದನ್ನ ಅರಿತು ಕರ್ತವ್ಯ ನಿರ್ವಹಿಸುವತ್ತ ಎಲ್ಲರು ಗಮನಹರಿಸಬೇಕು ಎಂದು ತಿಳಿಸಿದ್ದಾರೆ.
ಡಾ.ಅಭಿಷೇಕ್ ಎಂಬ ವೈದ್ಯ ತಮ್ಮ ಮದುವೆಯ ಪ್ರೀ ವೆಡ್ಡಿಂಗ್ ಶೂಟಿಂಗ್ ಗಾಗಿ ಚಿತ್ರದುರ್ಗದ ಭರಮಸಾಗರ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ನಕಲಿ ರೋಗಿಯೊಬ್ಬನಿಗೆ ತಮ್ಮ ಭಾವಿ ಪತ್ನಿಯೊಂದಿಗೆ ಶಸ್ತ್ರಚಿಕಿತ್ಸೆ ಮಾಡುತ್ತಿರುವ ರೀತಿಯಲ್ಲಿ ಶೂಟಿಂಗ್ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಬಗ್ಗೆ ಸಾಮಾಜಿಕ ವಲಯದಲ್ಲಿ ಸಾಕಷ್ಟು ವ್ಯಾಪಕ ಟೀಕೆ ವ್ಯಕ್ತವಾಗಿತ್ತು.