ಬೆಂಗಳೂರು, ಫೆ.09 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿಯಲ್ಲಿ ತಪ್ಪಾಗಿ ವಲಯ ವರ್ಗೀಕರಣವನ್ನು ಘೋಷಿಸಿಕೊಂಡ ಆಸ್ತಿ ಮಾಲೀಕರಿಗೆ ದುಪ್ಪಟ್ಟು ದಂಡ ಮನ್ನಾ ಮಾಡಿ, ವ್ಯತ್ಯಾಸದ ಮೊತ್ತ ಮತ್ತು ಆ ಮೊತ್ತಕ್ಕೆ ಬ್ಯಾಂಕ್ ಬಡ್ಡಿ ದರವನ್ನು ಮಾತ್ರ ಸಂಗ್ರಹಿಸಲು ಬಿಬಿಎಂಪಿ ನಿರ್ಧರಿಸಿದೆ.
‘ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿಯಲ್ಲಿ ವಲಯಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಆಸ್ತಿ ಮಾಲೀಕರು ತಪ್ಪು ಮಾಡಿದ್ದಾರೆ. ಈ ತಪ್ಪನ್ನು ಬಿಬಿಎಂಪಿ ಸರಿಯಾದ ಸಮಯಕ್ಕೆ ಮಾಲೀಕರಿಗೆ ತಿಳಿಸಿಲ್ಲ. ಹೀಗಾಗಿ, ತೆರಿಗೆದಾರರಿಂದ ದುಪ್ಪಟ್ಟು ಆಸ್ತಿ ತೆರಿಗೆ ಹಣವನ್ನು ಸಂಗ್ರಹಿಸುವಂತಿಲ್ಲ. ವ್ಯತ್ಯಾಸದ ಮೊತ್ತ ಮತ್ತು ಅದಕ್ಕೆ ಬ್ಯಾಂಕ್ ಬಡ್ಡಿ ದರವನ್ನು ವಿಧಿಸಬಹುದು’ ಎಂದು 2023ರ ಸೆಪ್ಟೆಂಬರ್ 13ರಂದು ಸರ್ಕಾರ ಆದೇಶಿಸಿತ್ತು. ಅದನ್ನು ಜಾರಿಗೆ ತರಲು ಬಿಬಿಎಂಪಿ ಫೆ.3ರಂದು ಈ ಸಂಬಂಧ ಸುತ್ತೋಲೆ ಹೊರಡಿಸಿದೆ.
2016–17ನೇ ಸಾಲಿನಿಂದ ತಪ್ಪು ವರ್ಗೀಕರಣದಲ್ಲಿ ಆಸ್ತಿ ತೆರಿಗೆ ಪಾವತಿಸಿದ್ದರೆ, ದುಪ್ಪಟ್ಟು ದಂಡದ ಬದಲು ಶೇ 6.75ರಷ್ಟು ಬ್ಯಾಂಕ್ ಬಡ್ಡಿದರ ಪೂರ್ಣ ಅವಧಿಗೆ ವಿಧಿಸಬೇಕು ಎಂದು ಬಿಬಿಎಂಪಿ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಸ್ವಯಂ ಘೋಷಣೆ ಆಸ್ತಿ ತೆರಿಗೆಯಲ್ಲಿ 78,254 ಆಸ್ತಿಗಳಲ್ಲಿ ವಲಯ ವರ್ಗೀಕರಣವನ್ನು ತಪ್ಪಾಗಿ ನಮೂದಿಸಲಾಗಿತ್ತು. ಇದರಲ್ಲಿ 11,725 ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ಆ ಪೈಕಿ 7,891 ನೋಟಿಸ್ಗಳಿಗೆ ತೆರಿಗೆದಾರರು ಪ್ರತಿಕ್ರಿಯಿಸಿ, ಆಸ್ತಿ ತೆರಿಗೆಯನ್ನೂ ಸಹ ಪಾವತಿ ಮಾಡಿದ್ದಾರೆ. ಇಂತಹ ಆಸ್ತಿ ಮಾಲೀಕರಿಂದ ಹೆಚ್ಚುವರಿಯಾಗಿ ಪಾವತಿಸಿಕೊಂಡಿರುವ ಹಣವನ್ನು ಮುಂದಿನ ಆಸ್ತಿ ತೆರಿಗೆ ಸಾಲಿನಲ್ಲಿ ಹೊಂದಾಣಿಕೆ ಮಾಡಬೇಕು ಎಂದು ಎಲ್ಲ ವಲಯ ಆಯುಕ್ತರು ಹಾಗೂ ಕಂದಾಯ ವಿಭಾಗದ ಅಧಿಕಾರಿಗಳಿಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಫೆ.3ರ ಸುತ್ತೋಲೆಯಲ್ಲಿ ಸೂಚನೆ ನೀಡಿದ್ದಾರೆ.
ವಲಯ ವರ್ಗೀಕರಣ ವಿವರಗಳು ಆಸ್ತಿ ತೆರಿಗೆ ತಂತ್ರಾಂಶದಲ್ಲಿ ತಪ್ಪಾಗಿ ನಮೂದಿತವಾಗಿದ್ದರೆ, ಅಂತಹ ಪ್ರಕರಣಗಳ ನೋಟಿಸ್ಗಳನ್ನು ರದ್ದುಪಡಿಸಬೇಕು. ವಲಯ ವರ್ಗೀಕರಣಕ್ಕಿಂತ ಮೇಲ್ಮಟ್ಟದ ವಲಯವನ್ನು ಒಂದೊಮ್ಮೆ ಆಯ್ದುಕೊಂಡಿದ್ದರೆ ಅಂತಹ ಪ್ರಕರಣಗಳಲ್ಲಿ ಮರುಪಾವತಿಗೆ ಸರ್ಕಾರದ ಆದೇಶದಲ್ಲಿ ಸೂಚನೆಯಿಲ್ಲ. ಆ ಪ್ರಕರಣಗಳಲ್ಲಿ ಹೆಚ್ಚುವರಿ ಹಣವನ್ನು ಹೊಂದಾಣಿಕೆ ಮಾಡಲಾಗುವುದಿಲ್ಲ ಎಂದು ಸುತ್ತೋಲೆಯಲ್ಲಿ ವಿವರಿಸಿದ್ದಾರೆ.
ಆನ್ ಲೈನ್ ನಲ್ಲಿ ಮತ್ತೊಮ್ಮೆ ಪರಿಶೀಲಿಸಿದಾಗ ತಪ್ಪಾದ ವಲಯ ವರ್ಗೀಕರಣ ಪ್ರಕರಣಗಳು ಕಂಡುಬಂದರೆ ಆ ಎಲ್ಲಾ ಪ್ರಕರಣಗಳಲ್ಲೂ ಇದೇ ರೀತಿಯ ಕ್ರಮವಹಿಸಬೇಕು ಎಂದು ಮುಖ್ಯ ಆಯುಕ್ತರು ತಮ್ಮ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.