ಬೆಂಗಳೂರು, ಫೆ.08 www.bengluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ನಿವೇಶನ ದೊರಕಿಸಿಕೊಡುವುದಾಗಿ ಅನಾಮಧೇಯ ವ್ಯಕ್ತಿಗಳು ಅಪಪ್ರಚಾರ ಮಾಡುತ್ತಿರುವುದು ಪಾಲಿಕೆ ಗಮನಕ್ಕೆ ಬಂದಿದೆ.
ಮುಗ್ಧ ವ್ಯಕ್ತಿಗಳಿಂದ ಹಣವನ್ನು ವಸೂಲಿ ಮಾಡುತ್ತಿರುವುದು ಹಾಗೂ ಪಾಲಿಕೆಯ ಹೆಸರನ್ನು ಬಳಸಿ ದುರ್ಬಳಕೆ ಮಾಡಿರುವ ಬಗ್ಗೆ ಪಾಲಿಕೆಗೆ ದೂರುಗಳು ಬರುತ್ತಿರುತ್ತವೆ. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ವಿಷಯದ ಕುರಿತು ಸ್ಪಷ್ಟನೆ ನೀಡಿರುವ ಪಾಲಿಕೆ, ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ಯಾವುದೇ ನಿವೇಶನಗಳನ್ನು ನೀಡುವ ಯೋಜನೆಯನ್ನು ಪ್ರಸ್ತುತ ಕೈಗೆತ್ತಿಕೊಂಡಿರುವುದಿಲ್ಲ. ಹಾಗೂ ನಿವೇಶನ ಹಂಚಿಕೆ ಕುರಿತು ಪಾಲಿಕೆಯಿಂದ ಅಧಿಕೃತವಾಗಿ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ಆದ್ದರಿಂದ ಇಂತಹ ಯಾವುದೇ ಆಮಿಷಗಳಿಗೆ ಒಳಗಾಗಬಾರದು ಎಂದು ವಿನಂತಿಸಿದೆ.
ಒಂದು ವೇಳೆ ಅನಾಮಧೇಯ ವ್ಯಕ್ತಿಗಳ ಮಾತುಗಳನ್ನು ನಂಬಿ ಮೋಸ ಹೋದರೆ ಪಾಲಿಕೆಯು ಜವಾಬ್ದಾರಿಯಾಗಿರುವುದಿಲ್ಲವೆಂದು ಘನತ್ಯಾಜ್ಯ ನಿರ್ವಹಣಾ ವಿಭಾಗದ ಜಂಟಿ ಆಯುಕ್ತೆ ಪ್ರತಿಭಾ ಅವರು ಸಾರ್ವಜನಿಕ ಪ್ರಕಟಣೆಯ ಮೂಲಕ ಸ್ಪಷ್ಟಿಕರಣ ನೀಡಿದ್ದಾರೆ.